ಯುವ ಕೃಷಿಕರು ಹೈನುಗಾರಿಕೆಯತ್ತ ಒಲವು ತೋರಿಸಿ
*10ನೇ ವರ್ಷದ ಕೃಷಿ-ಖುಷಿ ಕಾರ್ಯಕ್ರಮದಲ್ಲಿ ಬಾಹುಬಲಿ ಪ್ರಸಾದ್ ಕರೆ
ಮೂಡುಬಿದಿರೆ: ರಾಜ್ಯಕ್ಕೆ 4.20 ಲಕ್ಷ ಲೀಟರ್ ಹಾಲಿನ ಅಗತ್ಯವಿದೆ ಆದರೆ ಈಗ ಕೇವಲ 3ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದ್ದು 1.20 ಲಕ್ಷ ಲೀ.ಹಾಲಿನ ಕೊರತೆಯಿದೆ ಇದನ್ನು ನೀಗಿಸಬೇಕಾದರೆ ಯುವ ಕೃಷಿಕರು ಹೈನುಗಾರಿಕೆ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಎಂಸಿಎಸ್ ಬ್ಯಾಂಕಿನ ಅಧ್ಯಕ್ಷ 'ಸಹಕಾರ ರತ್ನ' ಎಂ.ಬಾಹುಬಲಿ ಪ್ರಸಾದ್ ಕರೆ ನೀಡಿದರು.
ಅವರು ಮೂಡುಬಿದಿರೆ ಕೋ.ಅಪರೇಟಿವ್ ಸರ್ವೀಸ್ ಸೊಸೈಟಿ ಲಿ.ಪ್ರಾಯೋಜಕತ್ವದಲ್ಲಿ ಇಲ್ಲಿನ ಕೃಷಿ ವಿಚಾರ ವಿನಿಮಯ ಕೇಂದ್ರದ ಜಂಟಿ ಆಶ್ರಯದಲ್ಲಿ ಎಂಸಿಎಸ್ ಬ್ಯಾಂಕಿನ ಸಭಾಂಗಣದಲ್ಲಿ ನಡೆದ 10ನೇ ವರ್ಷದ "ಕೃಷಿ-ಖುಷಿ ವನಮಹೋತ್ಸವ-2024" ಮತ್ತು ಕೃಷಿ ವಲಯದ ಸಾಧಕರಿಗೆ- ಯುವ ಕೃಷಿಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿ ಮತ್ತು ಅರಣ್ಯ ಇವೆರಡು ನಮಗೆ ಮುಖ್ಯವಾಗಿ ಬೇಕು. ಕೃಷಿ ನಮಗೆ ಆಹಾರವನ್ನು ನೀಡಿದರೆ ಅರಣ್ಯ ನಾವು ಉಸಿರಾಡಲು ಗಾಳಿಯನ್ನು ನೀಡುತ್ತದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೃಷಿಗೆ ಒತ್ತನ್ನು ನೀಡುತ್ತಿದೆ. ರಾಜ್ಯ ಸರಕಾರವು ವಿಶೇಷ ಯೋಜನೆಗಳನ್ನು ಹಮ್ಮಿಕೊಂಡಿದ್ದು ಕೃಷಿ ಕ್ಷೇತ್ರಕ್ಕೆ ಕೈಗಾರಿಕೆಯಷ್ಟೇ ಪ್ರಾಮುಖ್ಯತೆಯನ್ನು ನೀಡಿದೆ. ಮುಕ್ತ ಮಾರುಕಟ್ಟೆಗೆ ಅವಕಾಶವನ್ನು ಕಲ್ಪಿಸುವ ಮೂಲಕ ಸರಕಾರವೇ ಕೃಷಿಗೆ ಸಂಬಂಧಪಟ್ಟ ವಸ್ತುಗಳನ್ನು ಖರೀಸುತ್ತದೆ ಎಂದರು.
ತಮ್ಮ ಮಕ್ಕಳು ಕೃಷಿಯಲ್ಲಿ ತೊಡಗಿಸಿಕೊಂಡಾಗ ಹೆತ್ತವರು ಅವರಿಗೆ ಪ್ರೋತ್ಸಾಹ ನೀಡಬೇಕು. ಮನೆಯಲ್ಲಿ ಕೃಷಿ ಕೆಲಸ ಮಾಡಿದಾಗ ಸಂಬಳ ನೀಡಬೇಕು ಆಗ ಅವರು ಹಳ್ಳಿ ಬಿಟ್ಟು ನಗರಕ್ಕೆ ಹೋಗುವುದು ತಪ್ಪಿ ನಿಮ್ಮ ಜತೆಯಲ್ಲಿ ಇರಲು ಸಾಧ್ಯವಾಗುತ್ತದೆ ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ಕೃಷಿ-ಖುಷಿಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಉಪವಲಯಾರಣ್ಯಾಧಿಕಾರಿ ಮಂಜುನಾಥ ಗಾಣಿಗ ಮಾತನಾಡಿ ಮರಗಳನ್ನು ಕಡಿದು ನಾಶ ಮಾಡುತ್ತಿರುವುದರಿಂದಲೇ ಗುಡ್ಡಗಳು ಕುಸಿದು ಬೀಳುತ್ತಿರುವುದೆಂದು ಎಚ್ಚರಿಸಿದರು.
ಸಾಧಕರಿಗೆ ಸನ್ಮಾನ: ಸಾಧಕ ಕೃಷಿಕರಾದ ಜಯಾನಂದ ಕೋಟ್ಯಾನ್ ಹುಣಸೆಬೆಟ್ಟು ವಾಲ್ಪಾಡಿ, ಇಗ್ನೇಷಿಯಸ್ ಲೋಬೋ ಆಲಂಗಾರು ಮನೆ, ಪುಚ್ಚಮೊಗರು, ಜಯ ಪೂಜಾರಿ ಕಾಯರ್ ಗುಂಡಿ, ದಿನೇಶ್ ನಾಯಕ್ ಕಡಲಕೆರೆ ಅವರನ್ನು ಸನ್ಮಾನಿಸಲಾಯಿತು.
ಆಕಾಶವಾಣಿಯ ಸಹಾಯಕ ನಿರ್ದೇಶಕ ಸೂರ್ಯನಾರಾಯಣ ಭಟ್ ಪಿ.ಎಸ್., ಮೂಡುಬಿದಿರೆ ಸಹಕಾರಿ ತರಬೇತಿ ಕೇಂದ್ರದ ಉಪನ್ಯಾಸಕಿ ಬಿಂದು ಬಿ.ನಾಯರ್ ಗೌರವ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಗಣೇಶ್ ನಾಯಕ್ , ಬ್ಯಾಂಕಿನ ಕಾರ್ಯನಿರ್ವಹಣಾಧಿಕಾರಿ ರಘುವೀರ ಕಾಮತ್, ಕೆ.ವಿ.ವಿ.ಕೇಂದ್ರದ ಕಾರ್ಯದರ್ಶಿ ಬಿ.ಅಭಯಕುಮಾರ್ ಉಪಸ್ಥಿತರಿದ್ದರು.
ಕೆ.ವಿ.ವಿ.ಕೇಂದ್ರದ ಅಧ್ಯಕ್ಷ ಗುಣಪಾಲ ಮುದ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಚೇತನಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ಬಿಂದು ಬಿ.ನಾಯರ್ ಅವರು ವಿದ್ಯಾರ್ಥಿಗಳಿಗೆ ಕೃಷಿ ಖುಷಿ ರಸಪ್ರಶ್ನೆಯನ್ನು ನಡೆಸಿಕೊಟ್ಟರು. ವಿಜೇತ ವಿದ್ಯಾರ್ಥಿಗಳಿಗೆ ಬ್ಯಾಂಕಿನ ವಿಶೇಷ ಕರ್ತವ್ಯಾಧಿಕಾರಿ ಚಂದ್ರಶೇಖರ ಎಂ ಬಹುಮಾನವನ್ನು ವಿತರಿಸಿದರು.
0 Comments