ಶ್ರೀ ಮಹಾವೀರ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ
ಮೂಡುಬಿದಿರೆ: ಕಾಲೇಜು ದಿನಗಳಲ್ಲಿ ಪಡೆದ ತರಬೇತಿ ಮುಂದಿನ ಜೀವನಕ್ಕೆ ಸಹಕಾರಿಯಾಗುತ್ತದೆ ಎಂದು ಬೆಂಗಳೂರಿನಲ್ಲಿ ಡೆಪ್ಯೂಟಿ ಸುಪರಿಟೆಂಡೆಂಟ್ ಆಫ್ ಪೋಲಿಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ, ಕಾಲೇಜಿನ ಪೂರ್ವ ವಿದ್ಯಾರ್ಥಿ ರತ್ನಾಕರ ಶೆಟ್ಟಿ ಹೇಳಿದರು.
ಅವರು ಇಲ್ಲಿಯ ಶ್ರೀ ಮಹಾವೀರ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಪಡೆದ ತರಬೇತಿ, ಮಾರ್ಗದರ್ಶನ ನಮ್ಮನ್ನು ಈ ಹಂತಕ್ಕೆ ತಂದಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಹಾಗೂ ಪೂರ್ವ ವಿದ್ಯಾರ್ಥಿ, ಶಂಕರ್ ಇಲೆಕ್ಟ್ರಾನಿಕ್ಸ್ ಪ್ರೈವೆಟ್ ಲಿಮಿಟೆಡ್ ಇದರ ಗ್ರಾಹಕ ಸಂಪರ್ಕ ಪ್ರಬಂಧಕ ಪ್ರಮೋದ್ ಶೆಣೈಯವರು ಮಾತನಾಡಿ “ಹಲವು ವರ್ಷಗಳ ನಂತರ ಕಾಲೇಜಿಗೆ ಬಂದು ಹಲವು ಹಳೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಬೆರೆಯುವುದು ಅತ್ಯಂತ ಸಂತಸ ಉಂಟುಮಾಡುತ್ತದೆ. ಇದೊಂದು ಪ್ರೀತಿಯ ಸಮ್ಮಿಲನ” ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಂಶುಪಾಲ, ಮೇಜರ್ ಡಾ. ರಾಧಾಕೃಷ್ಣ ಅಧ್ಯಕ್ಷತೆ ವಹಿಸಿದ್ದರು.
ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನಾಗರಾಜ್ ಬಿ. ಸ್ವಾಗತಿಸಿದರು. ಸುಮಾರು ೪೦ ವರ್ಷಗಳಷ್ಟು ದೀರ್ಘಕಾಲ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ ಗ್ರಂಥಪಾಲಕಿ ನಳಿನಿ ಕೆ. ಯವರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು. ಮಂಗಳೂರು ವಿ.ವಿ ಯ ಬಿ.ಎ. ಪದವಿ ಪರೀಕ್ಷೆಯಲ್ಲಿ ಎರಡನೇ ರ‍್ಯಾಂಕ್ ಪಡೆದ ರೆಶೆಲ್ ಬ್ರೆಟ್ನಿ ಫೆರ್ನಾಂಡಿಸ್ ಇವರನ್ನೂ ಇದೇ ವೇದಿಕೆಯಲ್ಲಿ ಸಮ್ಮಾನಿಸಲಾಯಿತು.
ಪೂರ್ವ ವಿದ್ಯಾರ್ಥಿ ಚಂದನಾ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ರಮೇಶ್ ಭಟ್ ಎಂ. ವಂದಿಸಿದರು. ಸಭಾಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
0 Comments