ಪರಿಸರ ದಿನಾಚರಣೆಗೆ :
ಮೂಡುಬಿದಿರೆ ಉಪವಿಭಾಗದಿಂದ 1.90 ಲಕ್ಷ ಸಸಿಗಳನ್ನು ವಿತರಿಸಲು ಸಿದ್ಧತೆ
ಮೂಡುಬಿದಿರೆ: ನೆಡುತೋಪು ಬೆಳೆಸುವುದು, ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಮೊದಲಾದ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನಕ್ಕಾಗಿ ಆರಣ್ಯ ಇಲಾಖೆಯ ಮೂಡುಬಿದಿರೆ ಉಪವಿಭಾಗದ ವತಿಯಿಂದ ಒಟ್ಟು 1,90,000 ಸಸಿಗಳನ್ನು ವಿತರಿಸಿ ಬೆಳೆಸಲು ಸಕಲ ಸಿದ್ಧತೆ ನಡೆದಿದೆ.
ಅರಣ್ಯ ಇಲಾಖೆಯ ವತಿಯಿಂದ ವನಮಹೋತ್ಸವ ಆಚರಣೆಯನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಉಪವಿಭಾಗ ಕಾರ್ಕಳ ವಲಯದ ಶಿರ್ಲಾಲು, ಮೂಡುಬಿದಿರೆ ವಲಯದ ಕುತ್ತೂರು, ವೇಣೂರು ವಲಯದ ಅಳದಂಗಡಿ ಮತ್ತು ಹೆಬ್ರಿ ವಲಯದ ಮಡಾಮಕ್ಕಿ ಸಸ್ಯಕ್ಷೇತ್ರಗಳಲ್ಲಿ ಉಪಯುಕ್ತ ಸಸಿಗಳನ್ನು ಬೆಳೆಸಲಾಗಿದೆ. ಈ ಪೈಕಿ ಸಾರ್ವಜನಿಕರಿಗೆ ವಿತರಿಸಲು ಒಟ್ಟು 20,000 ಸಸಿಗಳನ್ನು ಸಿದ್ಧಪಡಿಸಲಾಗಿದೆ.
ನೇರಳೆ, ಹಲಸು, ಮಹಾಗನಿ, ಕಿರಾಲ ಬೋಗಿ, ದಾಲ್ಮೀ, ಹೆಬ್ಬಲಸು, ಧೂಪ, ಸಾಗುವಾನಿ, ಪುನರ್ಪುಳಿ, ಸಂಪಿಗೆ, ನೆಲ್ಲಿ ಮೊದಲಾದ ಗಿಡಗಳು ಲಭ್ಯ ಇವೆ.
ಕೃಷಿ ಅರಣ್ಯ ಪ್ರೊತ್ಸಾಹ ಯೋಜನೆ ಇಲಾಖೆಯಲ್ಲಿ ಜಾರಿಯಲ್ಲಿರುವ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಪ್ರಕಾರ, ಪರಿಸರ ದಿನಾಚರಣೆಗೆ ಸಿದ್ಧತೆ ನಡೆಯಲಿದ್ದು
ಜೂ.5ರಂದು ಪರಿಸರ ದಿನಾಚರಣೆ ಕಡಲಕೆರೆ ನಿಸರ್ಗಧಾಮದಲ್ಲಿ ನಡೆಯಲಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆ ರೋಟರಿ ಕ್ಲಬ್, ಸಿಡಿಡಿ ಇಂಡಿಯಾ, ಪುರಸಭೆ ಅರಣ್ಯ ಇಲಾಖೆ ಸಹಿತ ಸರಕಾರಿ ಇಲಾಖಾಧಿಕಾರಿಗಳ ಇವರ ಸಹಕಾರದಲ್ಲಿ ಸುಮಾರು 500 ಮಂದಿ ಪಾಲ್ಗೊಳ್ಳಲಿದ್ದಾರೆ. 120 ಗಿಡಗಳನ್ನು ಅಂದು ನೆಟ್ಟು ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಕುಂದಾಪುರ ವಿಭಾಗದಲ್ಲಿ ಈ ಸಾಲಿನಲ್ಲಿ 150ಕ್ಕೂ ಅಧಿಕ ವನಮಹೋತ್ಸವ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆದಿದೆ ಎಂದು
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೂಡುಬಿದಿರೆ ಸತೀಶ್ ಎನ್ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ವಿತರಿಸಲಾಗುವ ಸಸಿಗಳನ್ನು ಪಡೆದುಕೊಂಡ ಪ್ರತೀ ಫಲಾನುಭವಿಗೆ ಬದುಕಿ ಉಳಿದಿರುವ ಪ್ರತೀ ಸಸಿಗೆ ಪ್ರಥಮ ವರ್ಷದಲ್ಲಿ 35 ರೂ. ಎರಡನೇ ವರ್ಷ 40 ರೂ., ಮೂರನೇ ವರ್ಷಕ್ಕೆ 50 ರೂ. ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿಯಲ್ಲಿದೆ. ಸಾರ್ವಜನಿಕರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡು ಹಸುರೀಕರಣದಲ್ಲಿ ಇಲಾಖೆಯೊಂದಿಗೆ ಕೈ ಜೋಡಿಸಬೇಕಾಗಿ ಮೂಡುಬಿದಿರೆ ವಲಯ ಅರಣ್ಯಾಧಿಕಾರಿ ದಿನೇಶ್ ವಿನಂತಿಸಿದ್ದಾರೆ.
ಸಾಮಾಜಿಕ ಅರಣ್ಯ ಇಲಾಖೆಯಿಂದ 32000 ಗಿಡಗಳನ್ನು ಬೆಳೆಸಲಾಗಿದ್ದು ಇದರಲ್ಲಿ ಮೂರು ಸಾವಿರ ಗಿಡಗಳನ್ನು ರಸ್ತೆ ಬದಿಗಳಲ್ಲಿ ನೆಡಲಾಗುವುದು, ಮೂವತ್ತು ಸಾವಿರ ಗಿಡಗಳನ್ನು ವಿತರಿಸಲಾಗುವುದು ಎಂದು ಸಾಮಾಜಿಕ ಅರಣ್ಯ ಇಲಾಖೆಯ ಸಹಾಯಕ ವಲಯಾರಣ್ಯಾಧಿಕಾರಿ ಆನಂದ್ ತಿಳಿಸಿದ್ದಾರೆ.
0 Comments