ನರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿವೆ ಎರಡು ಬಡ ಜೀವಗಳು
*ಚಿಕಿತ್ಸೆಗೆ ಸ್ಪಂದಿಸಬೇಕಿದೆ ಸಹೃದಯಗಳು
ಮೂಡುಬಿದಿರೆ : ತಾಲೂಕಿನ ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಂದೇ ಕುಟುಂಬದ ತಾಯಿ ಮತ್ತು ಮಗ ನರ ಸಂಬಂಧಿ ಕಾಯಿಲೆಗೆ ತುತ್ತಾಗಿ ಬಳಲುತ್ತಿರುವ ದೃಶ್ಯ ಕಂಡು ಬಂದಿದೆ.
ನೆಲ್ಲಿಕಾರು ಗ್ರಾಮ ಪಂಚಾಯತ್ ಸಮೀಪದ ಮಾಂಟ್ರಾಡಿ ಇಂದಿರಾನಗರದ 5 ಸೆಂಟ್ಸ್ ನ ನಿವಾಸಿ ಕೂಲಿ ಕಾರ್ಮಿಕ ಮಾಧವ ಹರಿಜನ ಎಂಬವರ ಹೆಂಡತಿ ನಲವತ್ತರ ಹರೆಯದ ನಳಿನಿ ಮತ್ತು ಇಪ್ಪತ್ತೆರಡರ ಹರೆಯ ಪುತ್ರ ಮನೋಜ್ ಎಂಬವರೇ ನರ ಸಂಬಂಧಿ ಕಾಯಿಲೆಗೆ ತುತ್ತಾಗಿ ನೋವನ್ನು ಅನುಭವಿಸುತ್ತಿರುವವರು.
ನಳಿನಿ ಅವರು ಈ ಹಿಂದೆ ಬೀಡಿ ಕಟ್ಟಿ ಜೀವನ ನಡೆಸುತ್ತಿದ್ದರು. ಆದರೆ ಅವರಿಗೆ ಆಗಾಗ್ಗೆ ತಲೆ ನೋವು ಕಂಡು ಬರುತ್ತಿತ್ತು ಈ ಬಗ್ಗೆ ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದ ಅವರಿಗೆ "ನಿಮಗೆ ಶೀತ ಆಗದಿರುವುದರಿಂದ ತಲೆ ನೋವು ಕಂಡು ಬರುತ್ತಿದೆ" ಎಂದು ತಿಳಿಸಿದ್ದರಲ್ಲದೆ ಶಸ್ತ್ರ ಚಿಕಿತ್ಸೆ ಮಾಡಬೇಕಾಗಿದೆ ಎಂದಿದ್ದಾರೆ ಆದರೆ ಶಸ್ತ್ರ ಚಿಕಿತ್ಸೆ ಮಾಡಿದ ನಂತರ ಸ್ವಲ್ಪ ದಿನ ಆರಾಮವಾಗಿದ್ದ ಅವರಿಗೆ ಗುತ್ತಿಗೆಯ ಬಳಿ ನರದ ಸಮಸ್ಯೆ ಕಂಡು ಬಂದಿತ್ತು ಇದಕ್ಕೆ ಆಸ್ಪತ್ರೆಯಲ್ಲಿ ಪೈಪನ್ನು ಅಳವಡಿಸಲಾಗಿದ್ದು ಅದೂ ಈಗಲೂ ಇದೆ ಆದರೆ ನರದ ಸಮಸ್ಯೆಯು ನಿವಾರಣೆಯಾಗದೆ ಕೈ ಕಾಲಿನಲ್ಲಿ ಬಲವಿಲ್ಲದೆ ನಡೆದಾಡಲು ಅಸಾಧ್ಯವಾಗಿರುವುದರಿಂದ ಮಲಗಿದ್ದಲ್ಲಿಯೇ ಇರುತ್ತಾರೆ.
ಇನ್ನು ಮಗನ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ದ್ವಿತೀಯ ಪಿಯುಸಿ ಶಿಕ್ಷಣದ ನಂತರ ಐಟಿಐ ಶಿಕ್ಷಣವನ್ನು ಪಡೆದು ಉದ್ಯೋಗದ ನಿಮಿತ್ತ ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಬೇಕಾಗಿದ್ದ ಮನೋಜ್ ಗೆ ಎರಡು ವರ್ಷಗಳ ಹಿಂದೆ ಜ್ವರ ಕಾಣಿಸಿಕೊಂಡು ನಂತರ ಕಾಲಿನಲ್ಲಿ ಬಲ ಇಲ್ಲದಂತ್ತಾಗಿದೆ. ಕುತ್ತಿಗೆ ಭಾಗದಲ್ಲಿರುವ ನರದಲ್ಲಿ ಸಮಸ್ಯೆ ಕಂಡು ಬಂದಿದ್ದು ತಲೆ ಭಾಗವು ಸರಿಯಾಗಿ ನಿಲ್ಲದೆ ಅಲುಗಾಡುತ್ತಿದೆ ಅಲ್ಲದೆ ಮಾತನಾಡಲು ಸರಿಯಾಗಿ ಆಗುತ್ತಿಲ್ಲ. ಹಾಗೂ ಮನೆಯ ಒಳಗಡೆ ಅತ್ತಿಂದಿತ್ತ ತೆವಳಿಕೊಂಡೇ ಹೋಗಬೇಕಾದಂತಹ ಪರಿಸ್ಥಿತಿ.
ಮಾಧವ ಅವರು ಕೂಲಿ ಮಾಡಿ ಬಂದರೆ ಮಾತ್ರ ಹೊಟ್ಟೆ ತುಂಬಲು ಸಾಧ್ಯ ಆದ್ದರಿಂದ ಅವರು ಮಗಳು ವಿಜೇತ ದ್ವಿತೀಯ ಪಿಯುಸಿ ವರೆಗೆ ಶಿಕ್ಷಣ ಪಡೆದಿದ್ದರೂ ಮನೆಯಲ್ಲಿ ಉಳಿದು ತನ್ನ ತಾಯಿ ಮತ್ತು ಸಹೋದರನ ಹಾರೈಕೆಯಲ್ಲಿಯೇ ದಿನ ಕಳೆಯುತ್ತಿದ್ದಾರೆ.
ತಗಡು ಶೀಟ್ ಹಾಕಿದ ಎರಡು ಕೋಣೆಗಳಿರುವ ಮನೆಯಲ್ಲಿಯೇ ಇವರು ಜೀವನ ಸಾಗಿಸುತ್ತಿದ್ದಾರೆ. ರೇಶನ್ ಕಾಡ್ ೯ ಗೆ "ತಮ್ಮ್" ಕೊಡಲು ನಳಿನಿ ಅವರಿಗೆ ಹೋಗಲು ಅಸಾಧ್ಯವಾಗಿರುವುದರಿಂದ ಪಡಿತರವೂ ಈ ಕುಟುಂಬಕ್ಕೆ ಸಿಗುತ್ತಿಲ್ಲ ಮತ್ತು ಪಡಿತರ ಚೀಟಿಯ ಸಮಸ್ಯೆಯಿಂದಾಗಿ ನಳಿನಿ ಅವರಿಗೆ ಚಿಕಿತ್ಸೆಗಾಗಿ ಬಂದಿರುವ ಹಣವೂ ಪಂಚಾಯತ್ ನಿಂದ ಪಡೆದುಕೊಳ್ಳಲು ಕಷ್ಟ ಸಾಧ್ಯವಾಗಿದೆ ಇಂತಹ ಅಸಹಾಯಕ ಪರಿಸ್ಥಿತಿಯಲ್ಲಿ ಈ ಕುಟುಂಬವು ಜೀವನ ಸಾಗಿಸುತ್ತಿದೆ.
ನರದ ಸಮಸ್ಯೆಯಿಂದ ಬಳಲುತ್ತಿರುವ ಈ ತಾಯಿ ಮಗನಿಗೆ ಚಿಕಿತ್ಸೆ ನೀಡಲು ಯಾರಾದರೂ ಮುಂದೆ ಬರುತ್ತಾರೆಂಬ ನಿರೀಕ್ಷೆಯಲ್ಲಿ ಈ ಕುಟುಂಬ ಕಾಯುತ್ತಿದ್ದು ಇದಕ್ಕೆ ಸಹೃದಯರು ಸ್ಪಂದಿಸಬೇಕಾಗಿದೆ.
ವರದಿ : ಪ್ರೇಮಶ್ರೀ ಕಲ್ಲಬೆಟ್ಟು
0 Comments