ಕೊರಗ ಕುಟುಂಬಕ್ಕೆ "ವಿದ್ಯುತ್ ಸಂಪರ್ಕ" ನೀಡಲು ಮುಂದೆ ಬಂದ ಗುತ್ತಿಗೆದಾರ
* ಕಾನೂನು ತೊಡಕು ನಿವಾರಣೆಗೆ ತಹಶೀಲ್ದಾರ್ ಭರವಸೆ
ಮೂಡುಬಿದಿರೆ : ವಿದ್ಯುತ್ ಸಂಪರ್ಕವಿಲ್ಲದೆ ಕಾಲ ಕಳೆಯುತ್ತಿರುವ ಮಾಸ್ತಿಕಟ್ಟೆಯ ಕೊರಗ ಕುಟುಂಬಕ್ಕೆ ತನ್ನ ಖರ್ಚಿನಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವುದಾಗಿ ಮೂಡುಬಿದಿರೆಯ ಅನ್ನಪೂರ್ಣೇಶ್ವರಿ ಇಲೆಕ್ಟ್ರಿಕಲ್ಸ್ ನ ಮಾಲಕ, ಗುತ್ತಿಗೆದಾರ ಸತ್ಯಪ್ರಕಾಶ್ ಹೆಗ್ಡೆ ಅವರು ಮುಂದೆ ಬಂದಿದ್ದಾರೆ.
ಸರಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವುದರಿಂದ ಅವರಿಗೆ ಪುರಸಭೆಯಿಂದ ಡೋರ್ ನಂಬರ್ ನೀಡಿರಲಿಲ್ಲ ಅಲ್ಲದೆ ಪಡಿತರ ಚೀಟಿಯು ಇಲ್ಲ ಇದರಿಂದಾಗಿ ವಿದ್ಯುತ್ ಸಂಪರ್ಕ ನೀಡಲು ಕೊರತೆಯಾಗಿತ್ತು.
ವಿದ್ಯುತ್ ಸಂಪರ್ಕವಿಲ್ಲದೆ ಡೀಸೆಲ್ ಬೆಳಕಿನಲ್ಲಿ ಕಾಲ ಕಳೆಯುತ್ತಿರುವ ಕೊರಗ ಕುಟುಂಬದ ಸಮಸ್ಯೆಯ ಬಗ್ಗೆ "ಮಾಧ್ಯಮ" ದ ಮೂಲಕ ತಿಳಿದುಕೊಂಡ ಮೂಡುಬಿದಿರೆ ತಹಶೀಲ್ದಾರ್ ಶ್ರೀಧರ ಮುಂದಲಮನಿ ಅವರು ಸಮಸ್ಯೆಗೆ ಸ್ಪಂದಿಸಿ ಕಾನೂನಿನ ತೊಡಕನ್ನು ನಿವಾರಿಸಿ "ಬೆಳಕು" ಯೋಜನೆಯಡಿ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವುದಾಗಿ ಭರವಸೆಯನ್ನು ನೀಡಿದ್ದಲ್ಲದೆ ಮೆಸ್ಕಾಂ ಇಲಾಖಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿ ತಕ್ಷಣ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಕೊಡುವಂತೆ ತಿಳಿಸಿದರು.
ಹಿನ್ನೆಲೆ : ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಮಾಸ್ತಿಕಟ್ಟೆಯಲ್ಲಿ ಕಳೆದ ಮೂವತ್ತೈದು ವರ್ಷಗಳಿಂದ ವಾಸವಿದ್ದ ಕೊರಗ ಜನಾಂಗದ ದಿ.ತನಿಯ ಎಂಬವರ ಪುತ್ರ ಪ್ರಸಾದ್ ಎಂಬವರೇ ತನ್ನ ಮನೆಗೆ ಬೆಳಕಿನ ಆಶ್ರಯವಿಲ್ಲದೆ ಜೀವನ ನಡೆಸುತ್ತಿದ್ದರು. ತಮ್ಮ ಹೆತ್ತವರಿದ್ದ ಗುಡಿಸಲಿನ ಬಳಿಯಲ್ಲೇ ಕಳೆದ ಹತ್ತು ವರ್ಷಗಳ ಹಿಂದೆ ತಾನು ಕೂಲಿ ಕೆಲಸ ಮಾಡಿ ಉಳಿಸಿಟ್ಟ ಹಣದಲ್ಲಿ ಸಿಮೆಂಟ್ ಸೀಟನ್ನು ಹಾಸಿದ ಮನೆಯನ್ನು ನಿರ್ಮಿಸಿದ್ದರು.
ರೇಶನ್ ನಲ್ಲಿ ಸೀಮೆ ಎಣ್ಣೆಯೂ ಸಿಗದಿರುವುದರಿಂದ ರಾತ್ರಿ ಡೀಸೆಲ್ ನ್ನು ಬಳಸಿ ಆ ಮೂಲಕ ಬೆಳಕನ್ನು ಕಂಡುಕೊಂಡಿದ್ದರು. ದಿನ ಕಳೆದಂತೆ ಮನೆಗೆ ವಿದ್ಯುತ್ ಸಂಪರ್ಕದ ಅಗತ್ಯತೆಯನ್ನು ಅರಿತ ಪ್ರಸಾದ್ ಅವರು ಪುರಸಭೆಗೆ ಅರ್ಜಿಯನ್ನು ಸಲ್ಲಿಸಿದ್ದರು. ಅರ್ಜಿ ನೀಡಿ ತುಂಬಾ ಸಮಯವಾದ ಕಾರಣ ವಿಚಾರಣೆಗೆಂದು ಪುರಸಭೆಗೆ ಹೋಗಿದ್ದರು. ಆದರೆ ಪುರಸಭೆಯಲ್ಲಿ ಅವರು ನೀಡಿದ ಅರ್ಜಿಯೇ ಕಾಣೆಯಾಗಿತ್ತು ಅಲ್ಲದೆ ಮತ್ತೊಮ್ಮೆ ಅರ್ಜಿಯನ್ನು ಸಲ್ಲಿಸುವಂತೆ ಅಧಿಕಾರಿಗಳು ತಿಳಿಸಿದ್ದರು.
ನಂತರ ವಿಚಾರಿಸಿದಾಗ ಪ್ರಸಾದ್ ಅವರು ಮನೆ ನಿರ್ಮಿಸಿರುವ ಜಾಗವು ಸರಕಾರಿ ಜಾಗವೆಂದು ತಿಳಿಸಿದ್ದಾರೆನ್ನಲಾಗಿದೆ ಇದರಿಂದಾಗಿ ಈ ಕುಟುಂಬಕ್ಕೆ ವಿದ್ಯುತ್ ಸಂಪರ್ಕವನ್ನು ನೀಡುತ್ತಿಲ್ಲವೆಂದು ತಿಳಿದು ಬಂದಿತ್ತು.
ಈ ಕುರಿತು "ವೈಭವ" ವೆಬ್ ಸೈಟ್ ಮಂಗಳವಾರ ಸಂಜೆ ಸುದ್ದಿಯನ್ನು ಬಿತ್ತರಿಸಿ ಗಮನ ಸೆಳೆದಿತ್ತು ಇದೀಗ ಸುದ್ದಿಯು ಫಲಶೃತಿಯನ್ನು ಕಂಡಿದೆ.
0 Comments