ಶಿರ್ತಾಡಿ: ಶ್ರೀ ಕ್ಷೇತ್ರ ಅರ್ಜುನಾಪುರಾಧೀಶನಿಗೆ ನಾಳೆಯಿಂದ ವೈಭವದ ಬ್ರಹ್ಮಕಲಶೋತ್ಸವ
ಮೂಡುಬಿದಿರೆ: ತಾಲೂಕಿನ ಶಿರ್ತಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಶಿರ್ತಾಡಿ-ವಾಲ್ಪಾಡಿಯ ಶ್ರೀ ಕ್ಷೇತ್ರ ಅರ್ಜುನಾಪುರ ಶ್ರೀ ಮಹಾಲಿಂಗ ದೇವಸ್ಥಾನದಲ್ಲಿ ಹತ್ತು ದಿನಗಳ ಕಾಲ ನಡೆಯಲಿರುವ ನಾಳೆ (17 26)ಯಿಂದ ಆರಂಭಗೊಂಡು ಹತ್ತು ದಿನಗಳ ಕಾಲ ಸಂಭ್ರಮದಿಂದ ನಡೆಯಲಿರುವ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಸಂಭ್ರಮದಿಂದ ಆರಂಭಗೊಳ್ಳಲಿದ್ದು ಸಿದ್ಧತೆಗಳು ಪೂರ್ಣಗೊಂಡಿವೆ.
ಮೂಡುಬಿದಿರೆಯಿಂದ ಶಿರ್ತಾಡಿ, ವಾಲ್ಪಾಡಿ, ಅಳಿಯೂರು ಸಹಿತ ಸುತ್ತಮುತ್ತಲ ಗ್ರಾಮಗಳಲ್ಲಿ ಈ ಹತ್ತು ದಿನಗಳಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಕಳೆದ ಎರಡು ವರ್ಷಗಳಿಂದ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳ ಮೂಲಕ ತಯಾರಿ ನಡೆಯುತ್ತಾ ಬಂದಿದ್ದು ಇದೀಗ ಸುಸಜ್ಜಿತವಾಗಿ ದೇವಸ್ಥಾನ ಸಜ್ಜುಗೊಂಡಿದೆ.
ಇತಿಹಾಸ: ಮಧ್ಯಮ ಪಾಂಡವನಾದ ಅರ್ಜುನನು ಇಲ್ಲಿ ತಪಸ್ಸು ಮಾಡಿದ್ದನೆಂದೂ ಹಾಗಾಗಿ ಇಲ್ಲಿಗೆ ಅರ್ಜುನಾಪುರ ಎಂಬ ಹೆಸರು ಬಂತೆಂದೂ ಹೇಳಲಾಗುತ್ತದೆ. ಅಲ್ಲದೆ ಸಾವಿರಾರು ವರ್ಷಗಳಿಂದ ಇಲ್ಲಿ ಲಿಂಗಸ್ವರೂಪಿಯಾಗಿರುವ ಈಶ್ವರನ ಆರಾಧನೆಯು ಮಹಾಲಿಂಗೇಶ್ವರ ಎಂಬ ಹೆಸರಿನಿಂದ ನಡೆಯುತ್ತಿದೆ. ಇತಿಹಾಸ ತಜ್ಞರು ಇಲ್ಲಿ ಸುಮಾರು 5 ಸಾವಿರ ವರ್ಷಗಳಿಂದ ಜನವಸತಿ ಇತ್ತೆಂದು ಅಭಿಪ್ರಾಯ ಪಡುತ್ತಾರೆ. ಕೇವಲ ಎರಡು ಮೈಲಿ ಅಂತರದಲ್ಲೇ ಕೊಣಾಜೆಕಲ್ಲು ಇರುವುದರಿಂದ ಮಧ್ಯಮ ಅರ್ಜುನ ತಪಸ್ಸು ಮಾಡಿದ ಸ್ಥಳ ಎಂಬ ನಂಬಿಕೆಗೆ ಐತಿಹಾಸಿಕ ಬಲ ದೊರಕುತ್ತದೆ ಎಂದು ಹೇಳಲಾಗುತ್ತಿದೆ.
ವಿಜಯನಗರದ ಕೃಷ್ಣದೇವರಾಯನ ಕಾಲದಲ್ಲಿ ಈ ಅರ್ಜುನಾಪುರಾಧೀಶನ ಲಿಖಿತ ದಾಖಲೆಗಳು ಸಿಗುತ್ತದೆ. ಕ್ರಿ.ಶ. 1529- 30 ರಲ್ಲಿ ಅಂದಿನ ಭಕ್ತಜನರು ಹೊನ್ನಿನ 75 ವರಹಗಳಲ್ಲಿ ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಿರುವ ಬಗ್ಗೆ ತಿಳಿದು ಬಂದಿರುವುದರಿಂದಾಗಿ ಈ ದೇವಾಲಯದ ಪ್ರಾಚೀನತೆಯನ್ನು ತಿಳಿಯಬಹುದಾಗಿದೆ.
1996 ರಲ್ಲಿ ಜೀರ್ಣೋದ್ಧಾರವಾಗಿದ್ದು ಇದೀಗ ಅಂದರೆ ಇಪ್ಪತ್ತೇಳು ವರ್ಷಗಳ ಬಳಿಕ ಮತ್ತೆ ಸಂಪೂರ್ಣ ಜೀರ್ಣೋದ್ಧಾರ ಕಾರ್ಯ ನಡೆದಿದೆ.
ಸುಮಾರು ಆರೂವರೆ ಕೋಟಿ ರೂ. ಅಂದಾಜು ವೆಚ್ಚದಲ್ಲಿ ಜೀರ್ಣೋದ್ಧಾರ ಕಾಮಗಾರಿ ನಡೆದಿದ್ದು ಕಳೆದ ಮೂರ್ನಾಲ್ಕು ತಿಂಗಳಿಂದ ದೇವಸ್ಥಾನದಲ್ಲಿ ಪ್ರತಿನಿತ್ಯ ಊರ ಭಕ್ತರು ಸೇವೆಯ ಮೂಲಕ ಬೇರೆ ಬೇರೆ ಕೆಲಸಗಳನ್ನು ಸ್ವಯಂ ಮನಸ್ಸಿನಿಂದ ಮಾಡುತ್ತಾ ಬಂದಿದ್ದರು. ಯುವಕರು, ಯುವತಿಯರು, ಮಹಿಳೆಯರು, ಗಂಡಸರು, ಮಕ್ಕಳು ಹೀಗೆ ಎಲ್ಲರೂ ಒಂದಾಗಿ ಸೇವಾ ಕಾರ್ಯದಲ್ಲಿ ನಿರತರಾಗಿದ್ದು ರಾತ್ರಿ ಹಗಲು ಇಲ್ಲಿ ಕೆಲಸಗಳು ನಡೆದಿದೆ. ಗ್ರಾಮದ ಹೆಚ್ಚಿನ ಜನರು ಕಳೆದ ಕೆಲ ತಿಂಗಳಿಂದ ಬ್ರಹ್ಮಕಲಶೋತ್ಸವವರೆಗೆ ಮಾಂಸಾಹಾರ ಸೇವನೆ ತ್ಯಜಿಸುವ ಸಂಕಲ್ಪವನ್ನೂ ಮಾಡಿದ್ದಾರೆ.
ಕೋಂಕೆ ನಾರಾಯಣ ಶೆಟ್ಟಿ ಅವರು ಇಲ್ಲಿನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿದ್ದುಕೊಂಡು ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರ ಅವಿರತ ಶ್ರಮ, ಸಹಕಾರದ ಫಲದಿಂದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಸಮೀಪಿಸಿದೆ.
ಪ್ರವೇಶದ್ವಾರ ಸಹಿತ ದೇವಾಲಯವನ್ನು ಸಂಪೂರ್ಣ ಶಿಲಾಮಯವಾಗಿ ಕಟ್ಟಲಾಗಿದೆ.
ಹತ್ತು ದಿವಸಗಳಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯಲಿದ್ದು ಈ ಭಾಗದ ಸರ್ವ ಧರ್ಮಿಯರೂ ಈ ಸಂಭ್ರಮದಲ್ಲಿ ಭಾಗವಹಿಸಲಿದ್ದಾರೆ.
0 Comments