ರಾಜ್ಯಮಟ್ಟದ 43ನೇ ವರ್ಷದ ಕಬ್ಸ್ ಬುಲ್ ಬುಲ್ಸ್ ಉತ್ಸವ
ಮೂಡುಬಿದಿರೆ : ಪಠ್ಯದ ಜ್ಞಾನದ ಜೊತೆ ಪಠ್ಯೇತರ ಚಟುವಟಿಕೆ ಮೂಲಕ ಮನಸ್ಸು ಕಟ್ಟಿದಾಗ ಅತ್ಯುತ್ತಮ ನಾಗರಿಕನಾಗಲು ಸಾಧ್ಯ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ಆಯುಕ್ತ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಹೇಳಿದರು.
ಅವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಹಾಗೂ ಮೂಡುಬಿದಿರೆ ಘಟಕವು ನಗರದ ಸ್ಕೌಟ್ಸ್-ಗೈಡ್ಸ್ ಕನ್ನಡ ಭವನದಲ್ಲಿ ಹಮ್ಮಿಕೊಂಡ 43 ನೇ ರಾಜ್ಯಮಟ್ಟದ ಕಬ್ಸ್- ಬುಲ್‍ಬುಲ್ಸ್ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕನ್ನಡ, ವಿಜ್ಞಾನ, ಗಣಿತ, ವಾಣಿಜ್ಯ ಸೇರಿದಂತೆ ಯಾವುದೇ ವಿಷಯ ಇರಲಿ, ಅವು ನೀಡುವ ಜ್ಞಾನ ಬುದ್ಧಿಗೆ ಮಾತ್ರ. ಮನುಷ್ಯನಿಗೆ ಜ್ಞಾನ, ಬುದ್ಧಿಯ ಜೊತೆ ಮನಸ್ಸು ಬೇಕು ಎಂದರು.
ಮಾಜಿ ಸಚಿವ ಅಭಯ ಚಂದ್ರ ಜೈನ್ ಮಾತನಾಡಿ, ಎಳೆಯ ವಯಸ್ಸಿನಲ್ಲಿಯೇ ಬದುಕು ಕಟ್ಟುವ ಧೈರ್ಯ ನೀಡುವ ಚಿಂತನೆಯನ್ನು ಈ ಶಿಬಿರ ಹೊಂದಿದೆ. ಮೂಡುಬಿದಿರೆಗೆ ಬಂದ ನೀವು ಖಂಡಿತಾ ಒಳ್ಳೆಯ ಅನುಭವ ಪಡೆಯುತ್ತೀರಿ ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ ಬಂಟ್ವಾಳ ಜಿಲ್ಲಾ ನೋಡಲ್ ಅಧಿಕಾರಿ ಶ್ರೀನಿವಾಸ ಅಡಿಗ ಮಾತನಾಡಿ, ಮಕ್ಕಳು ಜ್ಞಾನ, ಸೂಕ್ಷ್ಮತೆ ಹಾಗೂ ಸೃಜನಶೀಲತೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಮೂಡುಬಿದಿರೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಎಚ್. ಎಸ್ ಮಾತನಾಡಿ, ನಾವು ಸಂಘ ಜೀವಿಗಳು, ಬೇರೆ ಬೇರೆ ಜಿಲ್ಲೆಯ ವಿದ್ಯಾರ್ಥಿಗಳು ಬೇರೆ ಬೇರೆ ಆಚಾರ ವಿಚಾರಗಳನ್ನು ಹೊಂದಿರುತ್ತಾರೆ ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಕೆ. ಗಂಗಪ್ಪ ಗೌಡ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳ ನಡವಳಿಕೆಯಲ್ಲಿ ಸೇವಾ ಭಾವ ಹೆಚ್ಚಿಸುವ ಉದ್ದೇಶ ಹೊಂದಿದೆ ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಜಂಟಿ ಕಾರ್ಯದರ್ಶಿ ಕೃಪಾ ವಿಜಯ್, ಸಂಘಟನಾ ಆಯುಕ್ತ ಪ್ರಭಾಕರ್ ಭಟ್, ಸಂಘಟನಾ ಆಯುಕ್ತೆ
ಮಂಜುಳಾ, ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ ಕೆ, ಪರೀಕ್ಷಾ ಮೇಲ್ವಿಚಾರಕಿ ಹೊನ್ನಮ್ಮ, ಜಿಲ್ಲಾ ಉಪಾಧ್ಯಕ್ಷ ವಿಮಲಾ ರಂಗಯ್ಯ, ಕೋಶಾಧಿಕಾರಿ ಅನಿಲ್ ಕುಮಾರ್, ಜಿಲ್ಲಾ ತರಬೇತಿ ಆಯುಕ್ತ ಪ್ರತೀಮ್ ಕುಮಾರ್, ಬಂಟ್ವಾಳ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಬಿ. ಎಂ ತುಂಬೆ, ಮೂಡುಬಿದಿರೆ ಸ್ಥಳೀಯ ಸಂಸ್ಥೆಯ
ಕಾರ್ಯದರ್ಶಿ ಭಾರತಿ, ಕಬ್ಸ್ ಶಿಬಿರ ನಾಯಕ ರಾಮರಾವ್, ನಾಯಕಿ ಸಿಸಿರಾ ಲೊರಿನಾ ಇದ್ದರು.
ಮೂಡುಬಿದಿರೆ ಸ್ಥಳೀಯ ಸಂಸ್ಥೆಯ ಕೋಶಾಧಿಕಾರಿ ನವೀನ್‍ಚಂದ್ರ ಅಂಬೂರಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಸಂಸ್ಥೆಯ ಪದಾಧಿಕಾರಿ ಮಹಮ್ಮದ್ ತುಂಬೆ ಸ್ವಾಗತಿಸಿ, ಜಿಲ್ಲಾ ಜಂಟಿ ಕಾರ್ಯದರ್ಶಿ ಜಯವಂತಿ ಸೋನ್ಸ್ ವಂದಿಸಿದರು.
0 Comments