ಮೋಟರ್ ಸೈಕಲ್ ಕಳ್ಳರಿಬ್ಬರನ್ನು ಬಂಧಿಸಿದ ಮೂಡುಬಿದಿರೆ ಪೊಲೀಸರು
ಮೂಡುಬಿದಿರೆ: ಪುರಸಭಾ ವ್ಯಾಪ್ತಿಯಲ್ಲಿ ಎರಡು ರೋಯಲ್ ಎನ್ ಫೀಲ್ಡ್ ಮೋಟಾರು ಸೈಕಲ್ ಗಳನ್ನು ಕಳವು ಮಾಡಿದ್ದ ಕಳ್ಳರಿಬ್ಬರನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದು, ಅವರಿಂದ ಮೋಟರ್ ಸೈಕಲನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಮೂಡುಬಿದಿರೆಯ ಕೋಟೆಬಾಗಿಲು ನಿವಾಸಿಗಳಾದ ಸಯ್ಯದ್ ಝಾಕೀರ್ (೨೦) ಹಾಗೂ ಮೊಹಮ್ಮದ್ ಶಾಹೀಮ್ (೨೪) ಎಂದು ಗುರುತಿಸಲಾಗಿದೆ.
ಮೂಡಬಿದ್ರೆ ಪೊಲೀಸ್ ನಿರೀಕ್ಷಕರಿಗೆ ನ.೭ ರಂದು ಬಂದ ಖಚಿತ ಮಾಹಿತಿಯ ಮೇರೆಗೆ ಅವರು ಹಾಗೂ ಠಾಣಾ ಸಿಬ್ಬಂದಿಗಳು ಬೆಳಗಿನ ಜಾವ ಮೂಡಬಿದ್ರೆ ಠಾಣಾ ವ್ಯಾಪ್ತಿಯ ಮಾರ್ಪಾಡಿ ಗ್ರಾಮದ ಸಾವಿರ ಕಂಬದ ಬಸದಿಯ ಬಳಿ ಇರುವ ಕೊಂಡೆ ಸ್ಟ್ರೀಟ್ ಎಂಬಲ್ಲಿ ಇಬ್ಬರು ಯುವಕರನ್ನು ಹಾಗೂ ಅವರ ವಶದಲ್ಲಿದ್ದ ನಂಬ್ರ ಪ್ಲೇಟ್ ಇಲ್ಲದ ರಾಯಲ್ ಎನ್‌ಫಿಲ್ಡ್ ಕ್ಲಾಸಿಕ್ ೩೫೦ ಮೋಟಾರು ಸೈಕಲಿನ ಸಮೇತ ವಶಕ್ಕೆ ಪಡೆದಿದ್ದಾರೆ.
ಅವರನ್ನು ಕೂಲಂಕುಶವಾಗಿ ತನಿಖೆ ನಡೆಸಿದಾಗ ಅ.೨೪-೨೫ ರ ಮಧ್ಯರಾತ್ರಿ ಮೂಡಬಿದ್ರೆ ಜೈನ್ ಪೇಟೆಯ ಬಡಗ ಬಸದಿ ಎದುರು ಇರುವ ದೇವಿ ಕೃಪಾ ಅಪಾರ್ಟ್ ಮೆಟ್‌ನ ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿದ್ದ ಬೈಕನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ, ಆರೋಪಿಗಳು ವಿಚಾರಣೆಯ ವೇಳೆ ಮೂಡಬಿದ್ರೆ ಠಾಣಾ ವ್ಯಾಪ್ತಿಯ ಮಾರ್ಪಾಡಿ ಗ್ರಾಮದಲ್ಲಿರುವ ಎವರ್ ಪ್ರೈಸ್ ರೆಸಿಡೆನ್ಸ್, ಅಪಾರ್ಟ್ ಮೆಂಟ್‌ನ ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿದ್ದ ಕೆಎ-೧೯-ಯುಇ-೦೦೦೯ ನೇ ರಾಯಲ್ ಎನ್‌ಫಿಲ್ಡ್ ಕ್ಲಾಸಿಕ್ ೩೫೦ ಮೋಟಾರು ಸೈಕಲನ್ನು ಕೂಡ ಕಳವು ಮಾಡಿ ಪೇಪರ್ ಮಿಲ್ ಬಳಿ ಇರುವ ಕೀರ್ತಿ ನಗರ ಕ್ರಾಸ್ ಬಳಿ ಪೊದೆಗಳ ಮಧ್ಯೆ ಬಚ್ಚಿಟ್ಟಿರುವ ಬಗ್ಗೆ ಮಾಹಿತಿ ಕಲೆ ಹಾಕಿ ಬೈಕನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ೩,೦೦,೦೦೦ ರೂ. ಎಂದು ಅಂದಾಜಿಸಲಾಗಿದೆ.
ಕಾರ್ಯಚರಣೆಯಲ್ಲಿ ಮಂಗಳೂರು ನಗರದ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರ ಮಾರ್ಗದರ್ಶನದಲ್ಲಿ ಡಿಸಿಪಿಗಳಾದ ಸಿದಾರ್ಥ ಗೊಯಲ್ ಹಾಗೂ ದಿನೇಶ್ ಕುಮಾರ್ ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್ ನಾಯಕ್ ಅವರ ನಿರ್ದೇಶನದಲ್ಲಿ ಮೂಡಬಿದ್ರೆ ಠಾಣಾ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಹಾಗೂ ಠಾಣಾ ಅಪರಾಧ ವಿಭಾಗದ ಸಿಬ್ಬಂಧಿಯವರಾದ ಮೊಹಮ್ಮದ್ ಇಟ್ಬಾಲ್, ಮೊಹಮ್ಮದ್ ಹುಸೇನ್, ಅಕೀಲ್ ಅಹಮ್ಮದ್, ನಾಗರಾಜ್, ವೆಂಕಟೇಶ್ ಮತ್ತು ಚಂದ್ರಹಾಸ ರೈ ಭಾಗವಹಿಸಿದ್ದರು.
0 Comments