ಮೂಡುಬಿದಿರೆಯ ವಿವಿಧ ಸಂಸ್ಥೆಗಳಿಂದ ರಕ್ತದಾನ
*ಅಂಗಾಂಗ ದಾನದ ಕಡೆಗೂ ಗಮನ ಹರಿಸಿ : ಮಾಜಿ ಸಚಿವ ಜೈನ್
ಮೂಡುಬಿದಿರೆ: ರಕ್ತದಾನ ಮಾಡುವುದರಿಂದ ಓರ್ವ ವ್ಯಕ್ತಿಯ ಜೀವವನ್ನು ಉಳಿಸಲು ಸಾಧ್ಯವಿದೆ. ನಾವು ಅಂಗಾಂಗ ದಾನದ ಬಗ್ಗೆಯೂ ಗಮನಹರಿಸಬೇಕಾಗಿದೆ. ವಿದೇಶಗಳಲ್ಲಿ ಹೆಚ್ಚಿನ ಜನರು ಅಂಗಾಂಗ ದಾನ ಮಾಡುತ್ತಾರೆ.ಅಂಗಾಂಗ ದಾನ ಮಾಡುವುದರಿಂದ ಮೂರ್ನಾಲ್ಕು ಜನರನ್ನು ಬದುಕಿಸಬಹುದು ಆದ್ದರಿಂದ ತಾನೂ ಕೂಡಾ ಅಂಗಾಂಗ ದಾನ ಮಾಡುವ ಇಚ್ಛೆಯನ್ನು ಹೊಂದಿದ್ದೇನೆ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಅವರು ಹೇಳಿದರು.
ಅವರು ಮೂಡುಬಿದಿರೆಯ ವಲಯದ ವಿವಿಧ ಸಂಸ್ಥೆಗಳಾದ ಲಯನ್ಸ್ ಕ್ಲಬ್, ಭಾರತೀಯ ಕಥೋಲಿಕ್ ಯುವ ಸಂಚಲನ, ಮೆಸ್ಕಾಂ ಉಪ ವಿಭಾಗ, ಸಮಾಜ ಮಂದಿರ ಸಭಾ (ರಿ) ಹಾಗೂ ಆಳ್ವಾಸ್ ಹೆಲ್ತ್ ಸೆಂಟರ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಮಾಜ ಮಂದಿರದಲ್ಲಿ ಭಾನುವಾರ ನಡೆದ ರಕ್ತದಾನ ಶಿಬಿರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಮೂಡುಬಿದಿರೆಯಲ್ಲಿ ರಕ್ತದ ಸಂಗ್ರಹಣೆ ಹೆಚ್ಚಾಗುತ್ತಿದೆ. ಯುವಕರು ರಕ್ತದಾನ ಮಾಡಲು ಮುಂದೆ ಬರಬೇಕು ಆದರೆ ರಕ್ತದಾನ ಅಥವಾ ಅಂಗಾಂಗ ದಾನ ಸ್ವ-ಇಚ್ಛೆಯಿಂದಾಗಬೇಕು ಹೊರತು ಹಣಕ್ಕಾಗಿ ಅಲ್ಲ ಎಂದ ಅವರು ಅಂಗಾಂಗ ದಾನ ಮಾಡುವವರಿಗೆ ರಾಜ್ಯ ಸರಕಾರವು ಅಂತಿಮ ದಿನಗಳಲ್ಲಿ ಸರಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನಡೆಸಲಿದೆ ಎಂದು ತಿಳಿಸಿದರು.
ಮೂಡುಬಿದಿರೆ ಚರ್ಚಿನ ಧರ್ಮಗುರು ಓನಿಲ್ ಡಿ'ಸೋಜಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಹಿಂದೆ ರಕ್ತದಾನ ಮಾಡಲು ಜನರು ಹೆದರುತ್ತಿದ್ದರು ಆದರೆ ಈಗ ಎಲ್ಲಾ ವರ್ಗದ ಜನರೂ ಮುಂದೆ ಬರುತ್ತಿರುವುದು ಮೆಚ್ಚುವಂತಹ ಕೆಲಸ ಎಂದರು.
ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮೋಹನ್ ಟಿ., ಹೆಚ್ ಡಿ ಎಫ್ ಸಿ ಬ್ಯಾಂಕಿನ ಬ್ರಾಂಚ್ ಓಪರೇಷನಲ್ ಮೆನೇಜರ್ ಸುಶ್ಮಿತಾ ಶೆಟ್ಟಿ, ಆಳ್ವಾಸ್ ನ ರಾಜೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಲಯನ್ಸ್ ಕ್ಲಬ್ ನ ಅಧ್ಯಕ್ಷ ಜೊಸ್ಸಿ ಮಿನೇಜಸ್ ಸ್ವಾಗತಿಸಿದರು. ಲ/ಹರ್ಷ ಕಾರ್ಯಕ್ರಮ ನಿರೂಪಿಸಿದರು. ಭಾರತೀಯ ಕಥೋಲಿಕ್ ಯುವ ಸಂಚಲನದ ಬ್ರೆಂಡನ್ ಕುಟಿನ್ಹಾ ವಂದಿಸಿದರು.
0 Comments