ನೇತಾಜಿ ಬ್ರಿಗೇಡ್ ದೀಪಾವಳಿ ಉತ್ಸವ
ನೇತಾಜಿ ಬ್ರಿಗೇಡ್ ನಿಂದ 4ನೇ ವರ್ಷದ ದೀಪಾವಳಿ ಉತ್ಸವ
ಮೂಡುಬಿದಿರೆ: ನೇತಾಜಿ ಬ್ರಿಗೇಡ್ (ರಿ) ಮೂಡುಬಿದಿರೆ ಇದರ ವತಿಯಿಂದ 4ನೇ ವರ್ಷದ ದೀಪಾವಳಿ ಉತ್ಸವ ಹಾಗೂ ಒಂಟಿಕಟ್ಟೆಯ ಶ್ರೀ ಗಜಾನನ ಭಜನಾ ಮಂಡಳಿಯಿಂದ ಕುಣಿತಾ ಭಜನಾ ಕಾರ್ಯಕ್ರಮವು ಭಾನುವಾರ ರಾತ್ರಿ ಸ್ವರಾಜ್ಯ ಮೈದಾನದ ಚಿಣ್ಣರ ಕಿರು ಉದ್ಯಾನವನದಲ್ಲಿ ನಡೆಯಿತು.
ಹಿರಿಯ ಪತ್ರಕರ್ತ ಧನಂಜಯ ಮೂಡುಬಿದಿರೆ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮೆಣಸು ಬೆಳೆಯುತ್ತಿದ್ದ, ಆಟವಾಡುತ್ತಿದ್ದ ಸ್ವರಾಜ್ಯ ಮೈದಾನವು ಸ್ವಾತಂತ್ರ್ಯ ಸಿಕ್ಕಿದ ನಂತರ ಉತ್ತಮ ಕೆಲಸಗಳಿಗೆ ಬಳಕೆಯಾಗುತ್ತಿದೆ. ಇಲ್ಲಿ ದೀಪಾವಳಿಯ ಸಂಭ್ರಮದಲ್ಲಿ ಭಾರತ ಮಾತೆಗೂ ಪುಷ್ಪ ನಮನ ಸಲ್ಲಿಸುವ ಮೂಲಕ ಭಾರತೆಮಾತೆ ಮತ್ತು ಸ್ವರಾಜ್ಯ ಮೈದಾನಕ್ಕಿರುವ ಅವಿನಾವಭಾವ ಸಂಬಂಧವನ್ನು ಎತ್ತಿ ತೋರಿಸುತ್ತಿದೆ ಎಂದರು.
ಮೂಡುಬಿದಿರೆ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಕೆ ಶ್ರೀಪತಿ ಭಟ್ ಅವರ ಅಧ್ಯಕ್ಷತೆ ವಹಿಸಿದ್ದರು.
ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಯೋಗೀಶ್ ಕೈರೋಡಿ ಪ್ರಧಾನ ಭಾಷಣಗಾರರಾಗಿ ಭಾಗವಹಿಸಿ ಮಾತನಾಡಿ ಹಿಂದೆ ತುಳುವರಿಗೆ ಪರ್ಬವೆಂಬರೆ ಅದೊಂದು ದೊಡ್ಡ ಹಬ್ಬವಾಗಿತ್ತು. ಹಿಂದೆ ಆಚರಣೆ ಮಾಡುತ್ತಿದ್ದ ಹಬ್ಬಕ್ಕೂ ಈಗ ಆಚರಿಸುತ್ತಿರುವ ಹಬ್ಬಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಕೃಷಿ ಬದುಕಿನಿಂದ ಬಂದ ಹಿರಿಯರು ತಮ್ಮ ಬದುಕಲ್ಲಿ ಸವಾಲು, ಕಷ್ಟಗಳನ್ನು ಎದುರಿಸಿ ಬದುಕನ್ನು ಪ್ರೀತಿಸಿ ಬದುಕಿದ್ದರು ಹೊರತು ಎಂದಿಗೂ ಪಲಾಯನವಾದಿಗಳಾಗಿರಲಿಲ್ಲ. ಆದರೆ ನಾವಿಂದು ನಮ್ಮಲ್ಲಿ ಶಕ್ತಿ ಇಲ್ಲದಿದ್ದರೂ ವೈಭವದ ಜೀವನಕ್ಕೆ ಮಾರುಹೋಗಿ ಸಾಲದ ಹೊರೆಯಲ್ಲಿ ಬದುಕುತ್ತಿರುವುದು ವಿಪರ್ಯಾಸ ಎಂದ ಅವರು ದೀಪಾವಳಿಯ ಸಾಂಸ್ಕೃತಿಕ ಮಹತ್ವದ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ಸ್ವರಾಜ್ಯ ಮೈದಾನ ಸಮೀಪದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸುದರ್ಶನ್ ಎಂ.ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಜನ್ಮಭೂಮಿ ಅಯೋಧ್ಯೆಯಲ್ಲಿ ದೀಪವನ್ನು ಬೆಳಗಿಸುವುದರಲ್ಲಿ ಗಿನ್ನಿಸ್ ದಾಖಲೆ ಆಗಿರುವ ಸುವರ್ಣ ಕಾಲಘಟ್ಟದಲ್ಲಿ ನೇತಾಜಿ ಬ್ರಿಗೇಡ್ ನವರು ದೀಪವನ್ನು ಬೆಳಗಿಸಿ ಕತ್ತಲೆಯನ್ನು ದೂರ ಮಾಡಿದಂತೆ ನಮ್ಮಮನಸಿನಲ್ಲಿರುವ ಅಂಧಕಾರವನ್ನು ಹೋಗಲಾಡಿಸಿ ಬೆಳಕು ನಮ್ಮ ಹೃದಯದಲ್ಲಿ ನಿತ್ಯ ನಿರಂತರ ಪ್ರಜ್ವಲಿಸುವಂತೆ ಮಾಡಿದ್ದಾರೆ ಆ ಮೂಲಕ ರಾಷ್ಟ್ರ ಬೆಳಗಬೇಕೆಂಬ ದೃಷ್ಠಿಯಿಂದ ಉತ್ತಮ ಕಾರ್ಯವನ್ನು ಕೈಗೊಂಡಿರುವುದು ಶ್ಲಾಘನೀಯ ಎಂದರು.
ಪುರಸಭಾ ವಾಡ್೯ ಸದಸ್ಯರಾದ ರಾಜೇಶ್ ನಾಯಕ್, ವಿದ್ಯುತ್ ಗುತ್ತಿಗೆದಾರ ಸಂಘದ ಅಧ್ಯಕ್ಷರಾದ ನವೀನ್ ಕರ್ಕೇರ ಉದ್ಯಮಿಗಳಾದ ಸತ್ಯ ಪ್ರಕಾಶ್ ಹೆಗ್ಡೆ, ವೆಂಕಟರಮಣ ದೇವಸ್ಥಾನದ ಮೊಕ್ತೇಸರರಾದ ಕೆ ಅಶೋಕ್ ಕಾಮತ್, ಹಿರಿಯ ಸಾಹಿತಿ ಸದಾನಂದ ನಾರಾವಿ, ಪುರಸಭಾ ಸದಸ್ಯರಾದ ದಿವ್ಯ ಜಗದೀಶ್ ಎಂ.ಕೆ, ನವೀನ್ ಶೆಟ್ಟಿ ಪುರಸಭಾ ಸ್ವಚ್ಛತಾ ರಾಯಭಾರಿ ಸಂಧ್ಯಾ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಕ್ಲೇರೆನ್ಸ್ ಡಿಸೋಜಾ ಕಾರ್ಯಕ್ರಮ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ನೇತಾಜಿ ಬ್ರಿಗೇಡ್ ನ ಸಂಚಾಲಕ ರಾಹುಲ್ ಕುಲಾಲ್ ವಂದಿಸಿದರು.
ಉದ್ಯಾನವನದ ಒಳಗೆ ಮತ್ತು ಹೊರಗೆ ಹಣತೆಗಳನ್ನು ಹಚ್ಚಿ ಇಡೀ ಪರಿಸರವನ್ನು ಹೂವಿನ ರಂಗೋಲಿಗಳಿಂದ ಅಲಂಕರಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಒಂಟಿಕಟ್ಟೆಯ ಗಜಾನನ ಭಜನಾ ಮಂಡಳಿ ಸಾರಥ್ಯದಿಂದ ಆಕರ್ಷಕ ಹಾಗೂ ಭಕ್ತಿ ಪ್ರಧಾನವಾದ ಕುಣಿತ ಭಜನಾ ಕಾರ್ಯಕ್ರಮವನ್ನು ನೆರವೇರಿತು.
0 Comments