ಮೂಡುಬಿದಿರೆ: ಶಿರಾಡಿಪಾಲ್‌ರವರ ಜೀವನ ನಮಗೆಲ್ಲರಿಗೂ ಆದರ್ಶದ ಪಥ ಹಾಗೂ ಪಾಠ : ಡಾ.ಧನಂಜಯ ಕುಂಬ್ಳೆ
ಮೂಡುಬಿದಿರೆ: ನಾವಿಂದು ಜಗತ್ತಿನ ಪ್ರಸಿದ್ಧ ಕವಿ ಕಾದಂಬರಿಕಾರರ ಹೆಸರುಗಳನ್ನು ನೆನಪಿನಲ್ಲಿಟ್ಟುಕೊಂಡಿರುತ್ತವೆ. ಆದರೆ ನಮ್ಮ ನಡುವೆ ಬದುಕಿ ಬಾಳಿದ ಶ್ರೇಷ್ಠ ವ್ಯಕ್ತಿಗಳ ಕೊಡುಗೆಗಳನ್ನ ಕಡೆಗಣಿಸುತ್ತೆವೆ. ಇದು ಸಲ್ಲದು. ನಮ್ಮ ನೆಲದ ಸತ್ವವನ್ನು ಬಿಟ್ಟು, ನಮ್ಮ ಬೆಳವಣಿಗೆ ಸಾಧ್ಯವಿಲ್ಲ. ಈ ನೆಲದ ಮಹತ್ವವನ್ನು ಅರಿಯದೆ, ಜಗತ್ತಿನ ಪರಿಕಲ್ಪನೆ ಅಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಹೇಳಿದರು.
ಅವರು ಗುರುವಾರ ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ಆಳ್ವಾಸ್ ಕಾಲೇಜಿನ ಹಿಂದಿ ವಿಭಾಗ ಹಾಗೂ ಕೆ ಎನ್ ಭಟ್ ಶಿರಾಡಿಪಾಲ್ ಜನ್ಮ ಶತಮನೋತ್ಸವ ಸಮಿತಿ ಏರ್ಪಡಿಸಿದ್ದ ಹಿಂದಿ ದಿವಸ್ ಕರ‍್ಯಕ್ರಮದಲ್ಲಿ ಕೆ ಎನ್ ಭಟ್ ಶಿರಾಡಿಪಾಲ್ ಜನ್ಮ ಶತಮನೋತ್ಸವ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮೂರನೇ ಕ್ಲಾಸ ಓದಿದ ಶಿರಾಡಿಪಾಲ್ ೩೮ ಕೃತಿಗಳನ್ನು ಕೊಟ್ಟಿದ್ದಾರೆ. ಅವರ ಬದುಕಿನ ಹೋರಾಟ, ಅವರ ವ್ಯಕ್ತಿತ್ವ ನಮ್ಮ ಬದುಕಿಗೆ ದಾರಿ ದೀಪ. ರವೀಂದ್ರನಾಥ ಠಾಗೋರರ ಸಾಧನಾ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದರು. ಅಂತಹ ವ್ಯಕ್ತಿತ್ವ ನಮ್ಮ ನಡುವೆ ಶಾಶ್ವತವಾಗಿ ಉಳಿಯಬೇಕೆಂದರೆ, ಅವರ ಕೃತಿಗಳೆಲ್ಲ ಒಂದು ಕಡೆ ಸಿಗಬೇಕಾದರೆ, ಶಿರಾಡಿಪಾಲ್ ಅವರ ಸಮಗ್ರ ಕೃತಿ ತರುವಲ್ಲಿ ನಾವೆಲ್ಲ ಶ್ರಮಿಸಬೇಕು. ಶಿರಾಡಿಪಾಲ್‌ರವರ ಜೀವನ ನಮಗೆಲ್ಲರಿಗೂ ಆದರ್ಶದ ಪಥ ಹಾಗೂ ಪಾಠ ಎಂದರು.
ಸಮಾರಂಭದಲ್ಲಿ ಪಾಲಡ್ಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರಾದ ಆಂಡ್ಯ್ಯೂ ಡಿ ಸೋಜ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಹಿಂದಿ ಭಾಷೆಯು ಸರ್ವರಿಗೂ ಸಹ್ಯವಾದ ಭಾಷೆ. ಈ ಭಾಷೆಯನ್ನು ನಮ್ಮ ದೇಶದ ಕೋಣೆ ಕೋಣೆಗಳಲ್ಲಿ ಬಳಸಲಾಗುತ್ತದೆ. ಈ ಭಾಷೆಯ ಮೇಲಿನ ಹಿಡಿತದಿಂದ ನಮ್ಮ ದೇಶದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲೂ ಜೀವನ ನಡೆಸಲು ಸಾಧ್ಯ ಎಂದರು.
ಉದ್ಯಮಿ ಕೆ. ಶ್ರೀಪತಿ ಭಟ್ ಮಾತನಾಡಿ, ಯಾವುದೇ ಕೆಲಸವನ್ನ ಶ್ರದ್ಧೆಯಿಂದ ಮಾಡಿದರೆ ಯಶಸ್ಸು ಖಂಡಿತ ಸಿಗುತ್ತದೆ. ಯಾವ ಕಸುಬು ಮೇಲಲ್ಲ, ಯಾವುದೂ ಕೀಳಲ್ಲ. ನಮ್ಮ ಕಣ್ಣಿಗೆ ಕಾಣುವ ದೇವರು ನಮ್ಮ ತಂದೆ ತಾಯಿಗಳು. ನಂತರದ ಸ್ಥಾನದಲ್ಲಿ ಶಿಕ್ಷಕರು ನಿಲ್ಲುತ್ತಾರೆ. ಇವರನ್ನು ಗೌರವಿಸಿ. ಅಡುಗೆ ಭಟ್ಟರಾಗಿ ನಂತರ ಬಸ್ ಏಜೆಂಟ್‌ರಾಗಿದ್ದ ಶಿರಾಡಿಪಾಲ್ ಮೂರನೇ ಕ್ಲಾಸಲ್ಲೇ ಶಾಲೆ ಬಿಟ್ಟರೂ ಮುಂದೆ ಸ್ವ ಅಧ್ಯಯನದ ಮೂಲಕ ಶಿಕ್ಷಕರಾಗಿ, ಸಾಹಿತಿಯಾಗಿ ಬೆಳೆದದ್ದು ಶ್ಲಾಘನೀಯ ಎಂದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕುರಿಯನ್ ಮಾತನಾಡಿ ಜ್ಞಾನ ಸಾಧನೆಗಿಂತ ಹಿರಿದಾದ ಸಂಪತ್ತು ಯಾವುದೂ ಇಲ್ಲ. ವಿದ್ಯಾರ್ಥಿಗಳು ತಮ್ಮ ಸುತ್ತು ಮುತ್ತ ಇರುವ ಹಿರಿಯರ ಸಾಧಕರ ಬದುಕಿನಿಂದ ಸ್ಪೂರ್ತಿಗೊಂಡು ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು. ನಾವು ತೆಗೆದುಕೊಳ್ಳುವ ಯಾವುದೇ ಸಂಕಲ್ಪವು ಪರಿಪೂರ್ಣಗೊಳ್ಳಲು ನಮ್ಮ ಶ್ರಮ ಅತೀ ಅವಶ್ಯ ಎಂದರು.
ಸನ್ಮಾನ ಸಮಿತಿ ಸಂಘಟಕ ಪತ್ರಕರ್ತ ಕೃಷ್ಣಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಮಾರಂಭದಲ್ಲಿ ಸನ್ಮಾನ ಸಮಿತಿ ಸದಸ್ಯ ಪತ್ರಕರ್ತ ಹರೀಶ್ ಕೆ ಆದೂರು, ಕೆ.ಎನ್ ಭಟ್ ಶಿರಾಡಿಪಾಲ್ ಅವರ ಶಿಷ್ಯ ಜಯರಾಜ್ ಕಂಬಳಿ, ಆಳ್ವಾಸ್ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಡಾ. ರಾಜೀವ್ ಸಿ ಉಪಸ್ಥಿತರಿದ್ದರು. ಸ್ಪರ್ಶ ಕರ‍್ಯಕ್ರಮ ನಿರೂಪಿಸಿದರು.
0 Comments