ಮೂಡುಬಿದಿರೆಯ ರಾಜಬೀದಿಯಲ್ಲಿ ಮೊಸರ ಕುಡಿಕೆಗಳನ್ನು ಒಡೆದ ಯಕ್ಷಗಾನೀಯ ಕೃಷ್ಣ
ಮೂಡುಬಿದಿರೆ: ನಾಡಿಗೆ ಮಾದರಿಯಾಗಿ ಕರಾವಳಿಯ ಮೂಡುಬಿದಿರೆಯ ರಾಜಬೀದಿಯಲ್ಲಿ ಕಟ್ಟಿರುವ ಮೊಸರ ಕುಡಿಕೆಗಳನ್ನು ಶ್ರೀ ಕೃಷ್ಣ ಯಕ್ಷಗಾನೀಯ ವೇಷ ಧರಿಸಿ ಹಿಮ್ಮೇಳದೊಂದಿಗೆ ಹೆಜ್ಜೆ ಹಾಕಿ ಕುಣಿಯುತ್ತಾ ಚಕ್ರಾಯುಧದಿಂದ ಒಡೆಯುವ ವಿಶೇಷ ಮೊಸರು ಕುಡಿಕೆ ಉತ್ಸವವು ಗುರುವಾರ ಮೂಡುಬಿದಿರೆಯಲ್ಲಿ ನಡೆಯಿತು.
ಶತಮಾನ ಪೂರೈಸಿ ಮುನ್ನಡೆದಿರುವ ಈ ವಿಶಿಷ್ಟ ಉತ್ಸವ ಇಲ್ಲಿನ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವಕ್ಕೆ ಪೂರಕವಾಗಿ ನಡೆದು ಬರುತ್ತಿದೆ.
ಪೇಟೆಯ ಬೀದಿಗೆ ಅಡ್ಡಲಾಗಿ ಕಂಬಗಳನ್ನು ನಿಲ್ಲಿಸಿ ಹಗ್ಗಗಳಲ್ಲಿ ಕಟ್ಟಿರುವ ತೂಗುವ ಮೊಸರ ಕುಡಿಕೆಗಳನ್ನು ಶ್ರೀಕೃಷ್ಣನೇ ಇಲ್ಲಿ ಯಕ್ಷಗಾನೀಯ ಚೆಂಡೆ ಮದ್ದಳೆ ಜಾಗಟೆಯ ಹಿಮ್ಮೇಳಕ್ಕೆ ಕುಣಿದು ಹಗ್ಗ ಜಗ್ಗಾಡುತ್ತಾ ಸತಾಯಿಸುವವರನ್ನೂ ಮಣಿಸಿ ಜಿಗಿಯುತ್ತಾ ಜಿಗಿಯುತ್ತಾ ಮಡಿಕೆಗಳನ್ನು ಒಡೆಯುವ ಸೊಬಗು ಮೂಡುಬಿದಿರೆಯಲ್ಲಿ ಅಲ್ಲದೆ ಬೇರೆಲ್ಲೂ ಕಾಣುವುದು ಅಸಾಧ್ಯ.
ಉತ್ಸವಕ್ಕೆ ಪೂರಕವಾಗಿ ಶ್ರೀಕೃಷ್ಣ ಫ್ರೆಂಡ್ಸ್ ಸರ್ಕಲ್ ವತಿಯಿಂದ ಪೇಟೆಯ ಕೆನರಾ ಬ್ಯಾಂಕ್ ಜಂಕ್ಷನ್ ಬಳಿ ತನ್ನ 37 ನೇ ವರ್ಷದ ಸಾಂಸ್ಕೃತಿಕ ಕಲಾಪವನ್ನು ಆಯೋಜಿಸಿತ್ತು. ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ಬೆಳಿಗ್ಗೆ ಭಜನಾ ಕಾರ್ಯಕ್ರಮ,ಸ್ಯಾಕ್ರೋಫೋನ್ ವಾದನ, ಸಂಗೀತ ಗಾನ ಸಂಭ್ರಮ ನಡೆಯಿತು.
.
0 Comments