ಮೂಡುಬಿದಿರೆ: ಆಳ್ವಾಸ್ ಕಾಲೇಜಿನಲ್ಲಿ ಗ್ರಂಥಪಾಲಕರ ದಿನಾಚರಣೆ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ: ಆಳ್ವಾಸ್ ಕಾಲೇಜಿನಲ್ಲಿ ಗ್ರಂಥಪಾಲಕರ ದಿನಾಚರಣೆ

‘ಗ್ರಂಥಾಲಯ ಸೂಪರ್‌ಮಾರ್ಕೆಟ್‌ನಂತಿರಲಿ’




 ಮೂಡುಬಿದಿರೆ: ಗ್ರಂಥಾಲಯ ಸೂಪರ್‌ಮಾರ್ಕೆಟ್‌ನಂತೆ  ಇರಬೇಕು. ಇಲ್ಲಿ ಬಹು ಆಯ್ಕೆಗಳಿಗೆ ಅವಕಾಶವಿರಬೇಕು  ಎಂದು ಮಂಗಳೂರು ಬೆಸೆಂಟ್ ಸಂಧ್ಯಾ ಕಾಲೇಜಿನ ಆಯ್ಕೆ ಶ್ರೇಣಿ ಗ್ರಂಥಪಾಲಕ ಡಾ.ವಾಸಪ್ಪ ಗೌಡ ಹೇಳಿದರು. 

ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ‘ಗ್ರಂಥಪಾಲಕರ ದಿನ’ದಲ್ಲಿ ಅವರು ಮಾತನಾಡಿದರು. 

ಗ್ರಂಥಾಲಯವು ಓದುಗರಿಗೆ ಸದಾ ತೆರೆದಿರಬೇಕು. ಪುಸ್ತಕಗಳ ಆಯ್ಕೆಯು ಸುಲಭವಾಗಿರಬೇಕು. ಓದುವ ಹುಮ್ಮಸ್ಸು ಮೂಡಿಸಬೇಕು. ಸೂಪರ್ ಮಾರುಕಟ್ಟೆ ಮಾದರಿಯಲ್ಲಿ ಗಮನಸೆಳೆಯಬೇಕು ಎಂಬುದು ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್. ರಂಗನಾಥನ್ ಅವರ ಆಶಯವೂ ಆಗಿತ್ತು ಎಂದು ಅವರು ವಿವರಿಸಿದರು. 

ರಂಗನಾಥನ್ ಅವರು ಭಾರತದಲ್ಲಿ ಹೊಸ ಗ್ರಂಥಾಲಯ ವ್ಯವಸ್ಥೆಯನ್ನು ರೂಪಿಸಿದರು. ಗ್ರಂಥಾಲಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದರು.  ವಿವಿಧ ರಾಜ್ಯಗಳ ಗ್ರಂಥಾಲಯ ಸಂಬಂಧಿ ಹಲವಾರು ಮಸೂದೆಗಳ ಕರಡು ರಚಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.  ಆ ಕಾಲದಲ್ಲಿ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನದ ರಾಷ್ಟ್ರೀಯ ಪ್ರಾಧ್ಯಾಪಕರಾಗಿದ್ದರು ಎಂದರು. 

ವಿದ್ಯಾರ್ಥಿಗಳೇ ದೇಶದ ಭವಿಷ್ಯ. ಸರಸ್ವತಿ ಮೂಲಕ ಲಕ್ಷ್ಮೀಯನ್ನು ಒಲಿಸಿಕೊಳ್ಳಬೇಕು. ಪಡೆದ ಜ್ಞಾನವನ್ನು ಪ್ರಾಯೋಗಿಕವಾಗಿ ಬಳಸಬೇಕು. ಆ ಮೂಲಕ ಗಳಿಸಬೇಕು. ಒಳ್ಳೆಯ ಅಭ್ಯಾಸ ಬೆಳೆಸಿಕೊಳ್ಳಿ ಎಂದ ಅವರು, ‘ಓದು’  ನನ್ನ ಯಶಸ್ಸಿನ ಸೂತ್ರ ಎಂದು ವಾರೆನ್ ಬಫೆಟ್ ಹೇಳಿದ ಮಾತನ್ನು ಉಲ್ಲೇಖಿಸಿದರು. ದಿನಕ್ಕೆ ಕನಿಷ್ಠ ಮೂರು ಗಂಟೆ ಓದಬೇಕು. ಸ್ಪಷ್ಟ ಗುರಿ ಹೊಂದಿರಬೇಕು ಎಂದರು. 

ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ, ನಿಗದಿತ ಸಮಯದಲ್ಲಿ, ನಿರ್ದಿಷ್ಟ ಸ್ಥಳದಲ್ಲಿ ನಿರಂತರ ಅವಧಿ ವರೆಗೆ ಓದುವ ಅಭ್ಯಾಸ ರೂಢಿಸಿಕೊಂಡಾಗ ಓದು ಬದುಕಿನ ಭಾಗವಾಗುತ್ತದೆ ಎಂದರು. 

ಓದು ದೈನಂದಿನ ಚಟುವಟಿಕೆಯಾದಾಗ, ಬಹು ಆಯಾಮದ ಕೆಲಸ- ಕಾರ್ಯಗಳನ್ನು ಯಶಸ್ವಿಯಾಗಿ ಮಾಡಲು ಸಾಧ್ಯವಾಗುತ್ತದೆ ಎಂದರು. 

ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಬದ್ಧತೆ ಹೊಂದಿದ ವ್ಯಕ್ತಿ ಮಾತ್ರ ವಿಭಿನ್ನ ಸಾಧನೆ ಮಾಡಲು ಸಾಧ್ಯ. ವಿಭಿನ್ನ ಕಾರ್ಯ ಮಾಡಿದಾಗ ಮಾತ್ರ ಯಶಸ್ಸು ಪಡೆಯಲು ಸಾಧ್ಯ ಎಂದರು. 

ಆಳ್ವಾಸ್ ಕಾಲೇಜಿನ ಮುಖ್ಯ ಗ್ರಂಥಪಾಲಕಿ ಶ್ಯಾಮಲತಾ ಇದ್ದರು. ಶ್ರಾವ್ಯ ಸ್ವಾಗತಿಸಿ, ಲಾವಣ್ಯ ವಂದಿಸಿ, ಹರ್ಷಿತಾ ನಿರೂಪಿಸಿದರು.  

ಇಂಗ್ಲಿಷ್ ಪ್ರಬಂಧ ಸ್ಪರ್ಧೆಯಲ್ಲಿ ಪೂಜಾ ಭಟ್ ಪ್ರಥಮ, ಶ್ರಾವ್ಯ ಭಟ್ ನಿಶಾಂತ್ ದ್ವಿತೀಯ ಸ್ಥಾನ ಪಡೆದರು.  ಕನ್ನಡ ಪ್ರಬಂಧದಲ್ಲಿ ವಿನೀತ್ ಪ್ರಥಮ ಹಾಗೂ ಶಶಾಂಕ್ ದ್ವಿತೀಯ ಸ್ಥಾನ ಪಡೆದರು.

Post a Comment

0 Comments