ಮೂಡುಬಿದಿರೆ: ಹದಿಹರೆಯದಲ್ಲಿ ವ್ಯವಸ್ಥೆಯ ವಿರುದ್ಧ ಅಸಹನೆ, ಅಕ್ರೋಷ ಇರುತ್ತದೆ. ಹಲವಾರು ಸವಾಲುಗಳನ್ನು ನಾವು ಈ ವಯಸ್ಸಿನಲ್ಲಿ ಎದುರಿಸುತ್ತೇವೆ. ಆದರೆ ನಿಮ್ಮ ಸಿಟ್ಟನ್ನು ಧನಾತ್ಮಕ ಉದ್ದೇಶಕ್ಕಾಗಿ ವಿನಿಯೋಗಿಸುವುದರ ಮೂಲಕ ಜೀವನದಲ್ಲಿ ಸಾರ್ಥಕ್ಯವನ್ನು ಕಾಣಬಹುದು ಎಂದು ಮಾಜಿ ಪತ್ರಕರ್ತೆ, ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ವಕ್ತಾರೆ, ಸಾಮಾಜಿಕ ಕಾರ್ಯಕರ್ತೆ ಶಾಜಿಯಾ ಇಲ್ಮಿ ಹೇಳಿದರು.
ಅವರು ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಸೋಮವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೇವಲ ತನ್ನ ಏಳಿಗೆಯನ್ನಷ್ಟೇ ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಿದರೆ ಸವಾಲುಗಳೆದುರಾದಾಗ ಎದೆಗುಂದುತ್ತೇವೆ. ಯಾವಾಗ ಉಳಿದವರ ಹಿತದಲ್ಲಿ ನಮ್ಮ ಹಿತ ಅಡಗಿರುವುದೋ ಆಗ ಮಾತ್ರ ಸವಾಲುಗಳನ್ನು ಮೀರಿ ಮುನ್ನಡೆಯಲು ಸಾಧ್ಯ. ಭಾರತದಲ್ಲಿ ಎಷ್ಟೇ ವೈವಿಧ್ಯತೆ ಇದ್ದರೂ ನಮ್ಮೆಲ್ಲರನ್ನು ಬೆಸೆಯುವ ತಂತು ಆಧ್ಯಾತ್ಮ. ನಮ್ಮ ಬಾಹ್ಯ ಪ್ರಪಂಚಕ್ಕಿಂತ ನಮ್ಮ ಆಂತರಿಕ ಪ್ರಪಂಚ ಬಹಳ ಮುಖ್ಯವಾಗುತ್ತದೆ. ಈ ಭಾರತೀಯ ದರ್ಶನ ನಮ್ಮನ್ನು ಬಹಳ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದರು. ಸದಾ ಬದಲಾಗುತ್ತಿರುವ ಈ ಜಗತ್ತಿನಲ್ಲಿ ವೃತ್ತಿಯನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿನಿಯೋರ್ವಳು ಕೇಳಿದ ಪ್ರಶ್ನೆಗೆ ಅವರು ಉತ್ತರಿಸುತ್ತಾ, ವೃತ್ತಿಯನ್ನು ನಾವು ಪ್ರೀತಿಸಿದಾಗಲಷ್ಟೇ ನಮ್ಮ ಬದುಕು ಹಸನಾಗುತ್ತದೆ. ಹಾಗಾಗಿ ಯಾವ ಕೆಲಸ ನಮಗೆ ಹಣಕ್ಕಿಂತ ನೆಮ್ಮದಿ ತಂದು ಕೊಡುತ್ತದೆ ಎಂದು ನಮ್ಮನ್ನು ನಾವೇ ಕೇಳಿಕೊಳ್ಳಬೇಕು ಉಳಿದವರನ್ನು ಮೆಚ್ಚಿಸುವ ಧಾವಂತದಲ್ಲಿ ನಮ್ಮತನವನ್ನು ನಾವು ಕಳೆದುಕೊಳ್ಳಬಾರದು ಎಂದರು.
ಓರ್ವ ಮಹಿಳೆಯಾಗಿ ಬಹಳಷ್ಟು ಸವಾಲುಗಳ ನಡುವೆ ಹೇಗೆ ಸಾಧನೆಗೈಯಲು ಸಾಧ್ಯ? ಎಂದು ಇನ್ನೋರ್ವ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ವಿದ್ಯಾರ್ಥಿಯಾಗಿದ್ದಾಗ ಲಿಂಗ ತಾರತಮ್ಯ ಸೇರಿದಂತೆ ಅನೇಕ ಸಮಸ್ಯೆಗಳನ್ನು ಸ್ವತ: ಅನುಭವಿಸಿದ್ದುದರಿಂದ ಅಂತಹ ಅನ್ಯಾಯಗಳನ್ನು ಇತರರು ಅನುಭವಿಸದಂತೆ ಮಾಡಲು ಅವರಿಗಾಗಿ ಶ್ರಮಿಸಬೇಕು ಎಂದೆನಿಸಿತು. ಆ ಉದ್ದೇಶವೇ ನನ್ನ ಬದುಕಿಗೆ ಪ್ರೇರಣೆ. ಇನ್ನು ಹತ್ತು ವರ್ಷಗಳಲ್ಲಿ ನೀವೆಲ್ಲರೂ ನೀವು ನಿರೀಕ್ಷಿಸದೆ ಇರುವ ಮಟ್ಟದಲ್ಲಿ ಸಾಧನೆಯ ಹಾದಿಯಲ್ಲಿ ಬೆಳೆದು ನಿಲ್ಲುತ್ತೀರಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಮಾತನಾಡಿ ಧೃಢ ಸಂಕಲ್ಪ, ಛಲ ಇದ್ದಲ್ಲಿ ಬಡವ ಶ್ರೀಮಂತ, ಗಂಡು ಹೆಣ್ಣೆಂಬ ಭೇದವಿಲ್ಲದೆ ಯಾರು ಬೇಕಾದರೂ ಯಶಸ್ಸಿನ ಮೆಟ್ಟಿಲನ್ನು ಏರಬಹುದು ಎನ್ನುವುದಕ್ಕೆ ಶಾಜಿಯಾ ಅವರು ಉತ್ತಮ ನಿದರ್ಶನ. ಇವರ ಬದುಕು, ಸಾಧನೆ ನಿಮಗೆಲ್ಲರಿಗೂ ಮಾದರಿಯಾಗಲಿ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಶಾಜಿಯಾ ಇಲ್ಮಿಯವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಬಿ.ಜೆ.ಪಿ ಜಿಲ್ಲಾ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಅಕಾಡೆಮಿಕ್ ಡೈರೆಕ್ಟರ್ ಡಾ|ಸಂಪತ್ ಕುಮಾರ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿಕ್ರಮ್ ನಾಯಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
0 Comments