ಮೂಡುಬಿದಿರೆಯಲ್ಲಿ ಹಲಸು-ಹಣ್ಣುಗಳ ಮಹಾ ಮೇಳ "ಸಮೃದ್ಧಿ"ಗೆ ಚಾಲನೆ
ಮೂಡುಬಿದಿರೆ: ಹಲಸು ಹಣ್ಣುಗಳ ರಾಜ. ಹಲಸಿನ ಖಾದ್ಯಗಳು ತುಳುನಾಡಿನ ವೈಶಿಷ್ಟ್ಯವಾಗಿದೆ. ಹಿಂದೆ ಬಡವರಿಗೆ ಹೊಟ್ಟೆ ತುಂಬಿಸಿಕೊಳ್ಳಲು ಹಲಸೇ ಮೂಲವಾಗಿತ್ತು. ಇದೀಗ ನಿರುದ್ಯೋಗಿಗಳಿಗೆ ಕೃಷಿ ತರಬೇತಿ, ಗೌರವಧನ ನೀಡಿ ಕೃಷಿ ಮಾಡಲು ಭೂಮಿಯನ್ನು ಒದಗಿಸಬೇಕು. ಅದು ದೇಶದ ಆಹಾರ ಮತ್ತು ನಿರುದ್ಯೋಗ ಸಮಸ್ಯೆಗಳಿಗೆ ಪರಿಹಾರವಾಗಲಿದೆ ಎಂದು ಮೂಡುಬಿದಿರೆ ಜೈನ ಮಠದ ಸ್ವಾಮೀಜಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸುಂದರಿ ಆನಂದ ಆಳ್ವ ಆವರಣದಲ್ಲಿನ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸಭಾಭವನದಲ್ಲಿ ಹಲಸು-ವೈವಿಧ್ಯಮಯ ಹಣ್ಣುಗಳ ಮಹಾಮೇಳ ಸಮಿತಿ ನೇತೃತ್ವದಲ್ಲಿ ಕೃಷಿಋಷಿ ಡಾ.ಎಲ್.ಸಿ. ಸೋನ್ಸ್ ಸ್ಮರಣಾರ್ಥ ಹಮ್ಮಿಕೊಳ್ಳಲಾದ ಹಲಸು ವೈವಿಧ್ಯಮಯ ಹಣ್ಣುಗಳು, ಆಹಾರೋತ್ಸವ ಮತ್ತು ಕೃಷಿ ಪ್ರದರ್ಶನಗಳ ಪರಿಕರಗಳ ಪ್ರದರ್ಶನ ಮತ್ತು ಮಾರಾಟ "ಸಮೃದ್ಧಿ"ಯನ್ನು ಮೋಹಿನಿ ಅಪ್ಪಾಜಿ ನಾಯ್ಕ್ ಸಭಾಂಗಣದಲ್ಲಿ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ದೇಶಿ ಹಣ್ಣು ಹಂಪಲು ರುಚಿಕರ ಮಾತ್ರವಲ್ಲ ಆರೋಗ್ಯಕರ. ಸಾತ್ವಿಕ ಆಹಾರಗಳು ಮನಸ್ಸನ್ನು ಪ್ರಫುಲ್ಲಗೊಳಿಸುತ್ತವೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮಾತನಾಡಿ, ನಾವು ಏನೇ ಕೆಲಸ ಮಾಡಿದರೂ, ಸಮಾಜ ಮತ್ತು ಭವಿಷ್ಯದ ದೃಷ್ಟಿಯಿದ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಸಾಮಾಜಿಕ ಪರಿಕಲ್ಪನೆಯ ಸಮೃದ್ಧಿಮೇಳವನ್ನು ಹಮ್ಮಿಕೊಳ್ಳಲಾಗಿದೆ. ಡಾ.ಎಲ್.ಸಿ. ಸೋನ್ಸ್ ಅವರ ಹೆಸರು ಚಿರಸ್ಥಾಯಿ ಮಾಡುವುದು ನಮ್ಮೆಲ್ಲರ ಆಶಯ ಎಂದರು.
ಡಾ.ಎಲ್.ಸಿಸೋನ್ಸ್ ಅವರ ಪತ್ನಿ ಬೆನಿಟಾ ಸೋನ್ಸ್, ಉದ್ಯಮಿ ಕೆ.ಶ್ರೀಪತಿ ಭಟ್, ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಬ್ಯಾಂಕ್‌ನ ವಿಶೇಷ ಕರ್ತವ್ಯ ಅಧಿಕಾರಿ ಚಂದ್ರಶೇಖರ್ ಎಂ., ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ, ಎಸ್‌ಕೆಡಿಆರ್‌ಡಿಪಿ ನಿರ್ದೇಶಕ ಮಹಾಬಲ ಕುಲಾಲ್, ಧನಕೀರ್ತಿ ಬಲಿಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್.ಸತೀಶ್, ಬ್ರಹ್ಮಾವರ ಕೆವಿಕೆ ಮುಖ್ಯಸ್ಥ ಡಾ.ಬಿ ಧನಂಜಯ, ಹಿರಿಯ ಕೃಷಿ ವಿಜ್ಞಾನಿ ರವಿರಾಜ್ ಶೆಟ್ಟಿ, ಕೃಷಿ ಸಲಹಾ ಸಮಿತಿ ಸದಸ್ಯ ರಾಜವರ್ಮ ಬೈಲಂಗಡಿ, ತುಳುಕೂಟ ಅಧ್ಯಕ್ಷ ಧನಕೀರ್ತಿ ಬಲಿಪ, ಮಂಗಳೂರು ಕೆವಿಕೆ ಮಾಜಿ ಮುಖ್ಯಸ್ಥ ಸುಭಾಶ್ಚಂದ್ರ ಚೌಟ ಉಪಸ್ಥಿತರಿದ್ದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ಡೀನ್ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
-
0 Comments