ಮೂಡುಬಿದಿರೆ : ಕರ್ನಾಟಕ ಸರಕಾರವು ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯಲು ತೀರ್ಮಾನಿಸಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್-ಬಜರಂಗದಳದಿಂದ ಬೃಹತ್ ಪ್ರತಿಭಟನೆ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಮಂಗಳವಾರ ನಡೆಯಿತು.
ಜಿಲ್ಲಾ ವಿಹಿಂಪ ಮಂಗಳೂರು ವಿಭಾಗ ಕಾರ್ಯದರ್ಶಿ ದೇವಿ ಪ್ರಸಾದ್ ಶೆಟ್ಟಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ರಾಜ್ಯದಲ್ಲಿ ಬೆಲೆ ಏರಿಕೆ ಸಮಸ್ಯೆ ಇದೆ. ಸಿದ್ಧರಾಮಯ್ಯ ಸರಕಾರ ಐದು ಗ್ಯಾರಂಟಿಗಳನ್ನು ಈಡೇರಿಸಲು ಸಾಧ್ಯವಾಗದೆ ಇರುವುದರಿಂದ ಮತಾಂತರ ನಿಷೇಧ ಕಾಯ್ದೆಯನ್ನು ವಾಪಾಸ್ ಪಡೆಯಲು ಹೊರಡುವ ಮೂಲಕ ರಾಜ್ಯದ ಜನರ ದಿಕ್ಕನ್ನು ತಪ್ಪಿಸಲು ಹೊರಟಿದೆ ಆದರೆ ಯಾವುದೇ ಪರಿಸ್ಥಿತಿ ಬಂದರೂ ದೇಶದಲ್ಲಿ ಮತ್ತೊಮ್ಮೆ ರಾಷ್ಟ್ರಾಂತರಕ್ಕೆ ಅವಕಾಶ ಸಿಗಲು ವಿಹಿಂಪ, ಬಜರಂಗದಳ ಬಿಡುವುದಿಲ್ಲ ಹಾಗೂ ಮತಾಂತರ ನಿಷೇಧ ಕಾಯ್ದೆಯನ್ನು ವಾಪಾಸ್ ಪಡೆಯುವ ಮೂಲಕ ಅನ್ಯಧರ್ಮಿಯರಿಂದ ಹಿಂದೂ ಧರ್ಮವನ್ನು ಧಮನ ಮಾಡಲು ಹೊರಟರೆ ಬೃಹತ್ ಹೋರಾಟವನ್ನು ಮಾಡುವೆವು ಎಂದು ಎಚ್ಚರಿಸಿದರು.
ಈ ಮೂಲಕ ಸಿದ್ಧರಾಮಯ್ಯ ಸರಕಾರವು ಮತಾಂತರ ನಿಷೇಧ ಕಾಯ್ದೆಯನ್ನು ವಾಪಾಸ್ ಪಡೆಯುವ ನಿರ್ಧಾರದಿಂದ ತಕ್ಷಣ ಹೊರ ಬರಬೇಕು. ಹಿಂದೂ ಧರ್ಮ, ಹಿಂದೂ ಸಮಾಜ ಹಾಗೂ ನಮ್ಮ ದೇಶವನ್ನು ಉಳಿಸುವ ಕೆಲಸಕ್ಕೆ ಸಹಕಾರ ನೀಡಬೇಕೆಂದು ಆಗ್ರಹಿಸಿದರು.
ವಿಹಿಂಪ ಕಾರ್ಯಧ್ಯಕ್ಷ ಶ್ಯಾಮ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿಹಿಂಪ ತಾಲೂಕು ಕಾರ್ಯದರ್ಶಿ ಸುಚೇತನ್ ಜೈನ್, ಬಜರಂಗದಳ ಮೂಡುಬಿದಿರೆ ಪ್ರಖಂಡದ ತಾಲೂಕು ಸಂಯೋಜಕ ಅಭಿಲಾಷ್ ಅರ್ಜುನಾಪುರ, ಮೂಡುಬಿದಿರೆ ತಾಲೂಕು ಸಾಪ್ತಾಹಿಕ್ ಪ್ರಮುಖ್ ಪ್ರವೀಣ್ ಬೋರುಗುಡ್ಡೆ, ತಾಲೂಕು ಅಖಾಡ ಪ್ರಮುಖ್ ಸಂಜಯ್ ಹೆಗ್ಡೆ,ತಾಲೂಕು ಸತ್ಸಂಗ ಪ್ರಮುಖ್ ಶೇಖರ್ ನೆಲ್ಲಿಗುಡ್ಡೆ, ಬಜರಂಗದಳ ನಗರ ಸಂಯೋಜಕ ವಿಜೇಶ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
0 Comments