ಮೂಡುಬಿದಿರೆ : ಒಂಟಿಕಟ್ಟೆಯ ರಾಣಿ ಅಬ್ಬಕ ಸಂಸ್ಕೃತಿ ಗ್ರಾಮದಲ್ಲಿ ನಡೆಯಲಿರುವ ಹೊನಲು ಬೆಳಕಿನ ಕೋಟಿ-ಚೆನ್ನಯ ಕಂಬಳವನ್ನು ಶೂನ್ಯ ತ್ಯಾಜ್ಯ ಮಾಡುವ ನಿಟ್ಟಿನಲ್ಲಿ ಕಂಬಳ ಸಮಿತಿ ಹಾಗೂ ಪುರಸಭೆಯು ಕಂಬಳ ಕ್ರೀಡಾಂಗಣದ ಗುತ್ತು ಮನೆಯಲ್ಲಿ ಬುಧವಾರ ವ್ಯಾಪಾರಸ್ಥರಿಗೆ, ಸ್ವಯಂ ಸೇವಕರಿಗೆ ಮತ್ತು ಪರಿಸರ ಪೂರಕ ಮಾರಾಟಗಾರರಿಗೆ ಸಭೆ ನಡೆಸಿತು.
ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್ ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಸ್ವಚ್ಛ ಮೂಡುಬಿದಿರೆಗಾಗಿ ಎಲ್ಲರೂ ಶ್ರಮಿಸಿ, ಮಾರ್ಕೆಟಿಗೆ ಹೋಗುವಾಗ ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ಬಳಸದೆ ಬಟ್ಟೆಯ ಚೀಲಗಳನ್ನು ಬಳಸಿ, ಒಟ್ಟಾರೆಯಾಗಿ ಈ ಬಾರಿಯ ಕಂಬಳದಲ್ಲಿ ಶೂನ್ಯ ತ್ಯಾಜ್ಯದ ಕಡೆಗೆ ಎಲ್ಲರ ಚಿತ್ತವಿರಲಿ ಎಂದರು.
ಮೂಡುಬಿದಿರೆ ಕೋಟಿ-ಚೆನ್ನಯ ಕಂಬಳ ಸಮಿತಿಯ ಕಾರ್ಯದರ್ಶಿ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ ಮಾತನಾಡಿ ಮೂಡುಬಿದಿರೆ ಪುರಸಭೆಯು ಸ್ವಚ್ಛ ಮೂಡುಬಿದಿರೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಸ್ವಚ್ಛತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ. ಈ ಬಾರಿಯ ಕಂಬಳದಲ್ಲಿ ಶೂನ್ಯ ತ್ಯಾಜ್ಯ ಕಂಬಳವನ್ನು ಮಾಡಿ ದೇಶಕ್ಕೆ ಮಾದರಿಯಾಗುವಂತೆ ನೋಡಿಕೊಳ್ಳಲಿದೆ. ಇದನ್ನು ಜನರು ಅಥವಾ ವ್ಯಾಪಾರಸ್ಥರು ಕಂಬಳಕ್ಕೆ ಮಾತ್ರ ಸೀಮಿತಗೊಳಸಬಾರದು ಬದಲಾಗಿ ಇತರ ಕಾರ್ಯಕ್ರಮದಲ್ಲಿ ಕೂಡಾ ಆಯೋಜಕರು ಇದನ್ನೇ ಮುಂದುವರಿಸಿಕೊಂಡು ಹೋಗಬೇಕು ಎಂದರು.
ಕೋಟಿ-ಚೆನ್ನಯ ಕಂಬಳದಲ್ಲಿ ಏಕ ಬಳಕೆಯ ವಸ್ತುಗಳನ್ನು ಬಳಸದ ಮರುಬಳಕೆಯ ವಸ್ತುಗಳನ್ನು ಬಳಸುವ ಮೂಲಕ ಶೂನ್ಯ ತ್ಯಾಜ್ಯದ ಕಂಬಳವನ್ನಾಗಿ ಆಯೋಜಿಸಿ ಮಾದರಿಯಾಗುವಂತೆ ಮಾಡಲು ತಾವು ಸಂಪೂರ್ಣವಾಗಿ ಬೆಂಬಲವನ್ನು ನೀಡುತ್ತೇವೆಂದು ವ್ಯಾಪಾರಸ್ಥರ ಪರವಾಗಿ ಭರತ್ ಅವರು ಭರವಸೆಯನ್ನು ನೀಡಿದರು.
ಪುರಸಭೆಯ ಪರಿಸರ ಅಭಿಯಂತರೆ ಶಿಲ್ಪಾ ಮಾತನಾಡಿ ನೀರಿನ ವ್ಯವಸ್ಥೆಯನ್ನು ಪುರಸಭೆಯು ಭರಿಸುತ್ತದೆ. ವಿವಿಧ ರೀತಿಯ ಪಾನೀಯಗಳನ್ನು ಗ್ರಾಹಕರಿಗೆ ನೀಡಲು ತೆಂಗಿನ ಗೆರೆಟೆಗಳನ್ನು ಬಳಸಬಹುದು. ಹೆಚ್ಚುವರಿ ಬಳಕೆಗೆ ಬೇಕಾಗುವಂತಹ ಉತ್ಪನ್ನಗಳ ನ್ನು ಮೊದಲೇ ತಿಳಿಸಿದರೆ ಸ್ವಚ್ಛತಾ ರಾಯಭಾರಿಯಾದ ಸಂಧ್ಯಾ ಅವರಲ್ಲಿ ತಿಳಿಸಿ ವ್ಯವಸ್ಥೆಯನ್ನು ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಅಲ್ಲದೆ ಕಸವನ್ನು ಹಾಕಲು ಸ್ವಯಂಸೇವಕರು ಗೋಣಿ ಚೀಲಗಳನ್ನು ತರಲಾಗುವುದೆಂದು ತಿಳಿಸಿದರು. ಪುರಸಭಾ ಮುಖ್ಯಾಧಿಕಾರಿ ಇಂದು ಎಂ, ನೇತಾಜಿ ಬ್ರಿಗೇಡ್‌ನ ರಾಹುಲ್ ಕುಲಾಲ್, ಉದ್ಯಮಿ ಗೋಪಾಲ್ ಎಂ., ಉದ್ಯಮಿ ಕಿರಣ್, ಸ್ಪೂರ್ತಿ ವಿಶೇಷ ಶಾಲೆಯ ಸ್ಥಾಪಕ ಪ್ರಕಾಶ್ ಶೆಟ್ಟಿಗಾರ್ ಮತ್ತು ವ್ಯಾಪಾರಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು.
0 Comments