ಡೀಮ್ಡ್ ಫಾರೆಸ್ಟ್ ಸಂಪೂರ್ಣವಾಗಿ ರದ್ದುಗೊಳಿಸುವವರೆಗೂ ರೈತರ ಹೋರಾಟ ನಿಲ್ಲದು- ಮೂಡುಬಿದಿರೆಯಲ್ಲಿ ಮೊಳಗಿದ ಅನ್ನದಾತನ ರಣಕಹಳೆ.!

 

ಮೂಡುಬಿದಿರೆ: ದ.ಕ ಜಿಲ್ಲೆಯ ರೈತರಿಗೆ ಕುಮ್ಕಿ ಹಕ್ಕಿಗೆ  ಆತನೇ ಹಕ್ಕುದಾರನೆಂದು ಘೋಷಿಸಿ ಹಕ್ಕುಪತ್ರವನ್ನು ನೀಡಬೇಕು ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಸರಕಾರವು ಈಡೇರಿಸಬೇಕೆಂದು  ಆಗ್ರಹಿಸಿ  ಮೂಡುಬಿದಿರೆ ತಾಲೂಕಿನಾದ್ಯಾಂತ ರೈತರ ಬೃಹತ್ ಹಕ್ಕೊತ್ತಾಯ ಜಾಥಾ ಗುರುವಾರ ನಡೆಯಿತು.

 ರಾಜ್ಯ ಪ್ರಾಂತ ರೈತ ಸಂಘದ ಸಂಘಟನಾ ಕಾರ್ಯದರ್ಶಿ ನಾರಾಯಣ ಸ್ವಾಮಿ  ಜಾಥಾವನ್ನುದ್ದೇಶಿಸಿ ಮಾತನಾಡಿ

ಕುಮ್ಕಿ ವ್ಯಾಪ್ತಿಗೊಳಪಟ್ಟ ಎಲ್ಲಾ ಸರಕಾರಿ ಜಮೀನನ್ನು ಡೀಮ್ಡ್ ಫಾರೆಸ್ಟ್ ಪಟ್ಟಿಯಿಂದ ತೆಗೆದು, ಡೀಮ್ಡ್ ಫಾರೆಸ್ಟ್ ಕಾನೂನನ್ನು ಸಂಪೂರ್ಣ ರದ್ದುಗೊಳಿಸಬೇಕು. ಅದನ್ನು ಸಂಪೂರ್ಣವಾಗಿ ತೆಗಿಯುವವರೆಗೂ ರೈತರ ಹೋರಾಟ ನಿರಂತರವಾಗಿ ನಡೆಯುತ್ತಿರುತ್ತದೆ. ಇದರೊಂದಿಗೆ ರೈತರಿಗೆ ಕುಮ್ಕಿ ಹಕ್ಕನ್ನು ಘೋಷಿಸಲಾಗುವುದೆಂದು ಹೇಳಲಾಗಿದ್ದು, ಆದರೆ ಇದನ್ನು ವಿಧಾನಸಭೆಯಲ್ಲಿ ಘೋಷಿಸಲಾಗಿದ್ದು, ಆದರೆ ವಿಧಾನಪರಿಷತ್ತಿನಲ್ಲಿ ಇದುವರೆಗೂ ಕಡ್ಡಾಯವಾಗಿ ಅನುಮೋದನೆ ಸಿಕ್ಕಿಲ್ಲ ಎಂದ ಅವರು  ಹೋರಾಟವನ್ನು ಜಿಲ್ಲೆಯಲ್ಲಿ ಮೂಡುಬಿದಿರೆಯಿಂದ ಆರಂಭಿಸಿ, ನಂತರ ಪ್ರತೀ ತಾಲೂಕಿನಲ್ಲಿ ರೈತರ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದರು.

    ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್ ರಾಜು ಹಾಡ್ಯಾ ಮಾತನಾಡಿ ಲಾಭದಾಯಕ ಬೆಳೆಗಳ ಲಾಭವನ್ನು ರೈತರಿಗೆ ಸಿಗುವಂತೆ ಮಾಡಬೇಕು, ರೈತ ಉಪಯೋಗಿಸುವ ಪೈಪು ಮತ್ತಿತರ ಸಲಕರಣೆಗಳಿಗೆ ಜಿಎಸ್ ಟಿ ವಿಧಿಸಬಾರದು ಎಂದ ಅವರು ಕೃಷಿಕರ ಬೇಡಿಕೆಗಳನ್ನು ಈಡೇರಿಸದಿದ್ದರೆ ನಿಮ್ಮ ವಿರುದ್ಧ ನಿಲ್ಲಲು ನಮಗೆ ತಿಳಿದೆದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ನಿಕಟಪೂರ್ವ ಅಧ್ಯಕ್ಷ ಕೆ.ಕೃಷ್ಣರಾಜ ಹೆಗ್ಡೆ, ದ.ಕ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಾಂತಿಪ್ರಸಾದ್ ಹೆಗ್ಡೆ, ಸಂಘದ ತಾಲೂಕು ಉಪಾಧ್ಯಕ್ಷ ವಲೇರಿಯನ್ ಕುಟಿನ್ಹಾ, ತಾ.ಪ್ರಧಾನ ಕಾರ್ಯದರ್ಶಿ ವಸಂತ್ ಭಟ್, ತಾ.ಸಂ.ಕಾರ್ಯದರ್ಶಿ ಸುಖಾನಂದ ಶೆಟ್ಟಿ, ಕಾರ್ಯಕಾರಿ ಸದಸ್ಯ ಜೋಯ್ಲಸ್ ಡಿ'ಸೋಜಾ ತಾಕೋಡೆ, ಪ್ರವೀಣ್ ಭಟ್ ಕಾನಂಗಿ ಅಳಿಯೂರು, ವಿವಿಧ ಘಟಕಗಳ ಅಧ್ಯಕ್ಷರುಗಳು, ಮೂಡುಬಿದಿರೆಯ 8 ಗ್ರಾಮಗಳ ರೈತ ಪ್ರಮುಖರು ಜಾಥಾದಲ್ಲಿ  ಪಾಲ್ಗೊಂಡರು. ಜಾಥಾವು ಸಮಾಜ ಮಂದಿರದಿಂದ ಆರಂಭಗೊಂಡು ಮೂಡುಬಿದಿರೆ ಹೊಸ ಬಸ್ ನಿಲ್ದಾಣದಿಂದ ಅಮರಶ್ರೀ ಟಾಕೀಸ್  ಮೂಲಕ ಹಳೆ ಪೊಲೀಸ್ ಠಾಣೆಯಿಂದ  ತಾಲೂಕು ಕಛೇರಿಯನ್ನು ತಲುಪಿ ತಾಲೂಕು ತಹಶೀಲ್ದಾರ್ ಸಚ್ಚಿದಾನಂದ ಸತ್ಯಪ್ಪ ಕುಚನೂರು ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು  ಸಲ್ಲಿಸಲಾಯಿತು. 

Post a Comment

0 Comments

Advertisement