ನವೆಂಬರ್ 19ರಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟ (AIBEA) ದೇಶದಾದ್ಯಂತ ಮುಷ್ಕರಕ್ಕೆ ಕರೆ ನೀಡಲಾಗಿದೆ..
ಪರಿಣಾಮವಾಗಿ ಎಟಿಎಂ ಸೇರಿದಂತೆ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನವೆಂಬರ್ 19ರಂದು ಮುಷ್ಕರದಲ್ಲಿ ಭಾಗಿಯಾಗುವಂತೆ ಎಐಬಿಇಎ ತನ್ನ ಸದಸ್ಯರಿಗೆ ಕರೆ ನೀಡಿರುವುದು ಗಮನಕ್ಕೆ ಬಂದಿದೆ ಎಂದು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡ ತಿಳಿಸಿದೆ.
ಕಚೇರಿಗಳು ಮತ್ತು ಶಾಖೆಗಳಲ್ಲಿ ಬ್ಯಾಂಕಿಂಗ್ ಸೇವೆಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳುತ್ತೇವೆ. ಆದಾಗ್ಯೂ, ಮುಷ್ಕರ ತೀವ್ರಗೊಂಡಲ್ಲಿ ಸೇವೆಗಳಲ್ಲಿ ವ್ಯತ್ಯಯವಾಗಬಹುದು ಎಂದು ಬ್ಯಾಂಕ್ ಆಫ್ ಬರೋಡ ಹೇಳಿದೆ.
ಸೇವಾ ಭದ್ರತೆ ನೀಡುವಂತೆ ಸರ್ಕಾರವನ್ನು ಆಗ್ರಹಿಸಿ ಮತ್ತು ಒಕ್ಕೂಟದಲ್ಲಿ ಸಕ್ರಿಯರಾಗಿರುವ ಬ್ಯಾಂಕ್ ಉದ್ಯೋಗಿಗಳ ಮೇಲೆ ಹೆಚ್ಚುತ್ತಿರುವ ದಾಳಿಗಳನ್ನು ಖಂಡಿಸಿ ನವೆಂಬರ್ 19ರಂದು ಮುಷ್ಕರ ಹಮ್ಮಿಕೊಳ್ಳುವುದಾಗಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ಈ ಹಿಂದೆ ಅಕ್ಟೋಬರ್ನಲ್ಲಿ ತಿಳಿಸಿದ್ದರು.
ಒಕ್ಕೂಟದ ಸದಸ್ಯರ ಮೇಲಿನ ದಾಳಿಗೆ ಖಂಡನೆ.
ಒಕ್ಕೂಟದಲ್ಲಿ ಗುರುತಿಸಿಕೊಂಡಿರುವ ಮತ್ತು ಸಕ್ರಿಯರಾಗಿರುವ ಬ್ಯಾಂಕ್ ಉದ್ಯೋಗಿಗಳ ಮೇಲೆ ಇತ್ತೀಚಿನ ದಿನಗಳಲ್ಲಿ ದಾಳಿಗಳು ಹೆಚ್ಚುತ್ತಿವೆ. ಇವುಗಳ ಹಿಂದೆ ಬಲವಾದ ಕಾರಣವಿದೆ. ಇವುಗಳು ವ್ಯವಸ್ಥಿತ ಮತ್ತು ಹುಚ್ಚುತನದಿಂದ ಕೂಡಿದ ದಾಳಿಗಳು. ಈ ದಾಳಿಗಳ ವಿರುದ್ಧ ನಾವು ಪ್ರತಿಭಟಿಸಬೇಕಿದೆ. ಒಟ್ಟಾರೆಯಾಗಿ ಈ ಉದ್ದೇಶಿತ ದಾಳಿಗಳನ್ನು ತಡೆಯಲು ಬ್ಯಾಂಕ್ ಉದ್ಯೋಗಿಗಳ ಸಂಘದ ಮಟ್ಟದಲ್ಲಿ ನಾವು ಪ್ರಯತ್ನಿಸಬೇಕಿದೆ. ನಾವು ಈ ದಾಳಿಗಳನ್ನು ಒಗ್ಗಟ್ಟಿನಿಂದ ವಿರೋಧಿಸಬೇಕು, ಹಿಮ್ಮೆಟ್ಟಿಸಬೇಕು ಎಂದು ಸಿ.ಎಚ್. ವೆಂಕಟಾಚಲಂ ಹೇಳಿರುವುದಾಗಿ ‘ಐಎಎನ್ಎಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಒಕ್ಕೂಟದ ನಾಯಕರನ್ನು ಸೊನಾಲಿ ಬ್ಯಾಂಕ್, ಎಂಯುಎಫ್ಜಿ ಬ್ಯಾಂಕ್, ಫೆಡೆರಲ್ ಬ್ಯಾಂಕ್ ಹಾಗೂ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ಗಳಿಂದ ವಜಾಗೊಳಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ನಿಯಮಗಳನ್ನು ಉಲ್ಲಂಘಿಸಿ 3,300 ಗುಮಾಸ್ತರನ್ನು ವರ್ಗಾವಣೆ ಮಾಡಲಾಗಿದೆ ಎಂದು ಅವರು ದೂರಿದ್ದಾರೆ.
ಬ್ಯಾಂಕ್ ಉದ್ಯೋಗಿಗಳಿಂದ ಪ್ರತಿಭಟನೆ
ಮುಷ್ಕರದಂದು ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟದ ಸದಸ್ಯರು ವಿವಿಧ ರೀತಿಯ ಪ್ರತಿಭಟನೆಗಳನ್ನೂ ನಡೆಸಲಿದ್ದಾರೆ ಎಂದು ವೆಂಕಟಾಚಲಂ ಹೇಳಿದ್ದಾರೆ.
0 Comments