ಮೂಡುಬಿದಿರೆ: ಇಲ್ಲಿನ ಪುರಸಭಾ ವ್ಯಾಪ್ತಿಯ ಪ್ರಾಂತ್ಯ ಗ್ರಾಮದ ಸರ್ವೇ ನಂಬ್ರ : 20/6 ರಲ್ಲಿ 0.17.17 ಎಕ್ರೆ ವಿಸ್ತೀರ್ಣದ ಸ್ಥಳವನ್ನು ವಾಸ್ತವ್ಯಕ್ಕಾಗಿ ಭೂ ಪರಿವರ್ತನೆಗೊಳಿಸಿ ವಾಸದ ಮನೆ ಕಟ್ಟಲು ಜೂನ್ 2022ರಂದು ತಪ್ಸೀನಾ ಕೋಂ ಬದ್ರುದ್ದೀನ್ , ನಾಗಬ್ರಹ್ಮ ಸ್ಥಾನ ರಸ್ತೆ ಮೂಡುಬಿದಿರೆ ಇವರು ಪರವಾನಿಗೆಯನ್ನು ಪಡೆದುಕೊಂಡು, ಪರವಾನಿಗೆಯನ್ನು ದುರುಪಯೋಗೊಳಿಸಿ, ಅನುಮೋದಿತ ನಕ್ಷೆಗೆ ವಿರುದ್ಧವಾಗಿ ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಿಸುತ್ತಿರುವುದನ್ನು ಗಮನಿಸಿದ ಪುರಸಭೆಯು ಈ ಬಗ್ಗೆ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಈಗಾಗಲೇ ನೋಟಿಸ್ ನೀಡಿರುತ್ತದೆ ಎಂದು ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸದ್ರಿ ಪರವಾನಿಗೆಯನ್ನು ಪರಿಷ್ಕೃತಗೊಳಿಸಿ, ಶೈಕ್ಷಣಿಕ ಉದ್ದೇಶದ ಕಟ್ಟಡಕ್ಕೆ ಪರವಾನಿಗೆಗೆ ಎರಡು ತಿಂಗಳ ಹಿಂದೆ ಪುರಸಭೆಗೆ ಅರ್ಜಿ ಸಲ್ಲಿಸಿರುತ್ತಾರೆ. ಈ ಬಗ್ಗೆ ಪುರಸಭೆಯ ಕಿರಿಯ ಅಭಿಯಂತರರು ಸ್ಥಳ ಪರಿಶೀಲನೆ ನಡೆಸಿ ಆರ್ಜಿದಾರರಿಗೆ ಶೈಕ್ಷಣಿಕ ಉದ್ದೇಶದ ಕಟ್ಟಡ ಕಟ್ಟುವರೆ ಪರವಾನಿಗೆ ನೀಡಲು ಕೆಲವೊಂದು ಕಾನೂನಾತ್ಮಕ ಅಡಚಣೆಗಳು ಇರುವುದನ್ನು ಗಮನಿಸಿ ಕೆಲವೊಂದು ದಾಖಲೆಗಳ ಸಹಿತ ಏಳು ದಿನಗಳ ಒಳಗೆ ಅವಶ್ಯವುಳ್ಳ ದಾಖಲೆಗಳನ್ನು ನವೆಂಬರ್ 21 ರ ಒಳಗೆ ಸಲ್ಲಿಸುವಂತೆ ನೋಟಿಸ್ ನೀಡಿದ್ದು,
ಈ ಮಧ್ಯೆ ಅಲ್ಲಿನ ಸುಮಾರು 17 ಜನ ಗಾಮಸ್ಥರು ಮತ್ತು ಹಿಂದೂ ಜಾಗರಣಾ ವೇದಿಕೆಯವರು ವಾಸ್ತವ್ಯಕ್ಕೆ ಮನೆ ಕಟ್ಟಲು ಪುರಸಭೆಯಿಂದ ಪರವಾನಿಗೆ ಪಡಕೊಂಡು ಅದರ ಬದಲು ಕಾನೂನು ಬಾಹಿರವಾಗಿ ಅಲ್ ಮಫಾಝ್ ವುಮೆನ್ ಶೆರಿಯತ್ ಕಾಲೇಜನ್ನು ನಡೆಸುತ್ತಿರುವ ಬಗ್ಗೆ ಲಿಖಿತ ಆಕ್ಷೇಪಣೆ ಅರ್ಜಿಯನ್ನು ಸಲ್ಲಿಸಿರುತ್ತಾರೆ. ಈ ಕುರಿತು ಮೂಡುಬಿದಿರೆ ಆರಕ್ಷಕ ಠಾಣಾಧಿಕಾರಿಗಳು ಪುರಸಭಾ ಮುಖ್ಯಾಧಿಕಾರಿ ಸಹಿತ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಪ್ರಸ್ತಾವಿತ ಸ್ಥಳದಲ್ಲಿ ನಿರ್ಮಿಸುತ್ತಿರುವ ಕಟ್ಟಡವು ಅನಧಿಕೃತವಾಗಿದೆ ಎಂಬ ವರದಿಯನ್ನು ನೀಡಿರುತ್ತಾರೆ. ತದನಂತರ ಅನಧಿಕೃತ ಕಟ್ಟಡಕ್ಕೆ ನೀಡಿರುವ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸುವಂತೆ ಕ್ರಮ ಕೈಗೊಂಡಿರುತ್ತದೆ.
ಅಕ್ಟೋಬರ್ 30 ರಂದು ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಇದೊಂದು ಗಂಭೀರ ಪ್ರಕರಣ ಎಂದು ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ತೀರ್ಮಾನಿಸಲಾಗಿದೆ ಎಂದು ಪ್ರಸಾದ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 Comments