ಮೂಡುಬಿದಿರೆ: ಧರ್ಮ ಜಾತಿಯ ಆಧಾರದಲ್ಲಿ ಜನರಲ್ಲಿ ಪ್ರತ್ಯೇಕತೆಯ ಭಾವನೆ ಮೂಡಿಸುವ ಕೆಲಸ ಒಂದು ಕಡೆಯಾಗುತ್ತಿರುವ ಈ ಸನ್ನಿವೇಶದಲ್ಲಿ ಎಲ್ಲ ವರ್ಗದವರನ್ನು ಒಗ್ಗೂಡಿಸುವ ಉದ್ದೇಶದಿಂದ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ 'ಭಾರತ್ ಜುಡೋ ಯಾತ್ರೆ'ಯು ಯಶಸ್ವಿಯಾಗಿದೆ. ಯಾತ್ರೆ ಪ್ರಾರಂಭದ ದಿನಗಳಲ್ಲಿ ಬಿಜೆಪಿಯವರು ರಾಹುಲ್ ಗಾಂಧಿ ಹಾಗೂ ಯಾತ್ರೆಯ ಕುರಿತು ಟ್ರೋಲ್ ಮಾಡುತ್ತಿದ್ದು, ಆ ಬಳಿಕ ಯಾತ್ರೆಗೆ ಜನರ ಸಕಾರಾತ್ಮಕ ಸ್ಪಂದನ, ಯಾತ್ರೆಯ ಯಶಸ್ಸಿಗೆ ಟ್ರೋಲ್ ಗಳು ಈ ಪ್ರಚಾರಕ್ಕೆ ಕಾರಣವಾಗಿರುವುದರಿಂದ ಟ್ರೋಲ್ ಮಾಡುವುದನ್ನು ನಿಲ್ಲಿಸಿದ್ದಾರೆ. ಜನ ಸಾಮಾನ್ಯರ ಸಮಸ್ಯೆಗಳನ್ನು ನೇರವಾಗಿ ಅರಿಯುವ ಕೆಲಸ ಯಾತ್ರೆಯಿಂದ ಆಗಿದೆ' ಎಂದು ಕೆಪಿಸಿಸಿ, ಮಾಧ್ಯಮ ಹಾಗೂ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಪದ್ಮಪ್ರಸಾದ್ ಜೈನ್ ಶುಕ್ರವಾರ ಸುದ್ದಿ ಗೋಷ್ಟಿಯಲ್ಲಿ ತಿಳಿಸಿದರು.
ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿರುವುದರಿಂದ ಪಕ್ಷ ಮತ್ತಷ್ಟು ಬಲವರ್ಧನೆಯಾಗಲಿದೆ. ರಾಜ್ಯ ಹಾಗೂ ರಾಷ್ಟ್ರ ರಾಜಕೀಯ ವಲಯದಲ್ಲಿ ಅಪಾರ ಅನುಭವ ಹೊಂದಿರುವ ಖರ್ಗೆ ಅವರು ಪಕ್ಷದ ನಿಷ್ಟಾವಂತ ಕಾರ್ಯಕರ್ತ. ನಾಲ್ಕು ಬಾರಿ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಿದಾಗಲೂ, ಯಾವುದೇ ರೀತಿಯ ಅಸಮಾಧಾನ ವ್ಯಕ್ತಪಡಿಸದೆ ಪಕ್ಷ ನಿಷ್ಠೆಯನ್ನು ಉಳಿಸಿಕೊಂಡಿದ್ದಾರೆ.ಅಂತಹ ಹಿರಿಯ ಮುತ್ಸದ್ಧಿ,ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಆರ್ಹ ವ್ಯಕ್ತಿ ಎಂದು ಹೇಳಿದರು. ಕಾಂಗ್ರೆಸ್ ಮುಖಂಡರಾದ ಅಲ್ವಿನ್ ದಿಸೋ, ಹರೀಶ್ ಪಿ, ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
0 Comments