ಮೂಡುಬಿದಿರೆ : ಯಕ್ಷಗಾನದ ಗುರುದಂಪತಿ ಹರಿನಾರಾಯಣ ಬೈಪಾಡಿತ್ತಾಯ ಹಾಗೂ ಲೀ ಲಾವತಿ ಬೈಪಾಡಿತ್ತಾಯರ ಹೆಸರಿನಲ್ಲಿ ಡಿಜಿ ಯಕ್ಷ ಫೌಂಡೇಶನ್(ರಿ)ವತಿಯಿಂದ ನೀಡಲಾಗುವ 'ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿ'ಯನ್ನು ಈ ವರ್ಷ ಹಿರಿಯ ಮದ್ದಳೆಗಾರ ಪೆರುವಾಯಿ ನಾರಾಯಣ ಭಟ್ ಅವರಿಗೆ ನೀಡಿ ಗೌರವಿಸಲಾಗುವುದು ಎಂದು ಡಿಜಿ ಯಕ್ಷ ಫೌಂಡೇಶನ ನಿರ್ದೇಶಕ ಅವಿನಾಶ್ ಬೈಪಡಿತ್ತಾಯ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನವೆಂಬರ್ 12ರಂದು ಅಪರಾಹ್ನ 2ಗಂಟೆಗೆ ಆಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಐ.ಎಲ್ ಹೆಗಡೆ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ನಾರಾಯಣ ಭಟ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ರೂ10,076 ನಗದು ಮತ್ತು ಸ್ಮರಣಿಯನ್ನು ಒಳಗೊಂಡಿರುತ್ತದೆ.
ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಆಶೀರ್ವಚನ ನೀಡಲಿದ್ದು ಮದ್ದಳೆಗಾರ, ಕರ್ನಾಟಕ ಬ್ಯಾಕ್ ಅಧಿಕಾರಿ ಕೃಷ್ಣಪ್ರಕಾಶ್ ಉಳಿತ್ತಾಯ ಅಥ ನಂದನಾ ಭಾಷಣ ಮಾಡಲಿದ್ದಾರೆ. ಉದ್ಯಮಿ ಶ್ರೀಪತಿ ಭಟ್ ಉಪಸ್ಥಿತರಿರುವರು. ಸಂಜೆ 5ರಿಂದ ಯಕ್ಷಗುರು ಕರ್ಗಲ್ಲು ವಿಶ್ವೇಶ್ವರ ಭಟ್ ನಿರ್ದೇಶನದಲ್ಲಿ ಬಜಪೆ ತಲಕಳದ ಶ್ರೀಶ ಯಕ್ಷ ಕಳಿಕಾ ಕೇಂದ್ರದ ಮಕ್ಕಳಿಂದ ಹೊಸ್ತೋಟ ಮಂಜುನಾಥ ಭಾಗವತ ವಿರಚಿತ ''ಶ್ರೀ ಶಿವಲೀಲಾ' ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಹಿರಿಯ ಯಕ್ಷ ಗುರು ದಂಪತಿ ಹರಿ ನಾರಾಯಣ ಬೈಪಾಡಿತ್ತಾಯ- ಲೀಲಾವತಿ ಬೈಪಾಡಿತ್ತಾಯ, ಪ್ರಶಸ್ತಿ ಪ್ರದಾನ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಕೊಂಕಣಾಜೆ ಮತ್ತು ಕಾರ್ಯದರ್ಶಿ ಆನಂದ ಗುಡಿಗಾರ್ ಕೆರ್ವಾಶೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
0 Comments