ತನ್ನ ಆದರ್ಶ ರಾಜಕಾರಣಿ ಕೊಡ್ಗಿಯವರ ಅಗಲಿಕೆಗೆ ರಾಜ್ಯದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ನುಡಿ ನಮನ ಸಲ್ಲಿಸಿದ್ದಾರೆ.
ಕೋಟ ನುಡಿ...
ಸ್ವಾಂತ್ರತ್ಯ ಯೋಧ ದಿವಂಗತ ಶ್ರೀ ಕೃಷ್ಣರಾಯ ಕೊಡ್ಗಿಯವರ ಪ್ರೀತಿಯ ಪುತ್ರ ಅಮಾವಾಸ್ಯೆಬೈಲು ಮಚ್ಚಟ್ಟಿನ ಎ.ಜಿ. ಕೊಡ್ಗಿ ಎಂದೆ ಖ್ಯಾತರಾದ ಗೋಪಾಲ ಕೃಷ್ಣ ಕೊಡ್ಗಿಯವರು ಸರಿಸುಮಾರು ಒಂದು ವಾರದಿಂದ ಮಣಿಪಾಲದ ಕಸ್ತೂರಬಾ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಶರಾಶಯ್ಯೆಯಲ್ಲಿ ಒರಗಿದ ಭೀಷ್ಮನಂತೆ ಕಾಲನೊಡನೆ ಹೋರಾಡಿ ಕೊನೆಗೂ ಅಸ್ತಂಗತರಾಗಿದ್ದಾರೆ.
ನಾ ಕಂಡಂತೆ ಕಡಲ ತಡಿಯ ಭಾರ್ಗವ ಕೋಟ ಶಿವರಾಮ ಕಾರಂತರ ನಂತರ ಅದ್ಬುತ ಜೀವನೋತ್ಸಾಹವನ್ನು ಮೈಗೂಡಿಸಿಕೊಂಡ ಕೊಡ್ಗಿ 93ರ ಹರೆಯದಲ್ಲಿ ಇಹಲೋಕ ತ್ಯಜಿಸುತ್ತಾರೆ. ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಟ್ಟು, ಸಮಬಾಳು, ಸಮಪಾಲಿಗೆ ಪ್ರಾಧನ್ಯತೆ ನೀಡಿ, ಭೂಸುಧಾರಣೆಯಂತಹ ಕಾಯ್ದೆ ತರುವಲ್ಲಿ ದಿವಂಗತ ದೇವರಾಜ ಅರಸರ ಹೆಗಲಿ ಹೆಗಲು ಕೊಟ್ಟು ದುಡಿದ, ಸಾಮಾಜಿಕ ನ್ಯಾಯದ ಪ್ರತಿಪಾದನೆಗೆ ಒಗ್ಗಿಕೊಂಡ ಬೆರಳೆಣಿಕೆಯ ರಾಜಕಾರಣಿಗಳಲ್ಲಿ ಎ.ಜಿ. ಕೊಡ್ಗಿಯವರೊಬ್ಬರು.
ಸ್ವತಃ ಕೊಡ್ಗಿಯವರ ತಂದೆ ಕೃಷ್ಣರಾಯ ಕೊಡ್ಗಿಯವರು ಅಪಾರ ಭೂ ಹಿಡುವಳಿ ಹೊಂದಿದ್ದು, ಸಾಕಷ್ಟು ಶ್ರೀಮಂತರಾಗಿದ್ದರು. ಆದರೆ, ಎ. ಜಿ. ಕೊಡ್ಗಿಯವರು ತಮ್ಮೆಲ್ಲಾ ಆಸ್ತಿಪಾಸ್ತಿಗಳಿಗೆ ಬಡವರಿಂದ ಡಿಕ್ಲರೇಶನ್ ಕೊಡಿಸಿ ಕೂಲಿ ಮಾಡುವವರನ್ನು ಭೂ ಒಡೆಯರನ್ನಾಗಿ ಮಾಡಿ ಅಶಕ್ತರ ಬದುಕಿಗೆ ಹೊಸ ರೂಪ ಕೊಟ್ಟಿದ್ದರು.
ನಿಷ್ಠುರ ನಿಲುವು, ನೇರ ಮಾತು, ಕಂಡದನ್ನು ಕಂಡಂತೆ ಹೇಳುವ ಶಕ್ತಿ ಕೊಡ್ಗಿಯವರಲ್ಲಿ ಮನೆ ಮಾಡಿತ್ತು. ಆ ಕಾರಣಕ್ಕಾಗಿ ಕೊಡ್ಗಿಯವರು ಎಲ್ಲರಿಗೂ ಸಲ್ಲಬಹುದಾದ ವ್ಯಕ್ತಿತ್ವದ ನಡುವೆಯೂ ಅಲ್ಲಲ್ಲಿ ಸಹಜವಾದ ಅಭಿಪ್ರಾಯ ಬೇಧಗಳಿಗೆ ಒಗ್ಗಿಕೊಳ್ಳುತ್ತಾರೆ.
ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಮೂಲಕ 2 ಬಾರಿ ಶಾಸಕರಾದ ಕೊಡ್ಗಿಯವರು 1992 ರ ಸುಮಾರಿಗೆ ಬಿಜೆಪಿಯನ್ನು ಸೇರುತ್ತಾರೆ. ಕೊಡ್ಗಿಯವರನ್ನು ಅತೀ ಸನಿಹದಿಂದ ಕಂಡ ನನಗೆ ಅನ್ನಿಸಿದ್ದು, "ಸತ್ಯಾನ್ವೇಷಣೆಗಾಗಿ ಮತ್ತು ನಂಬಿದ ಸಿದ್ಧಾಂತಕ್ಕಾಗಿ ರಾಜಕಾರಣವೂ ಸೇರಿದಂತೆ ಬದುಕು ಸಾಗಿಸಿದ ಅಪರೂಪದ ವ್ಯಕ್ತಿ ಎ.ಜಿ. ಕೊಡ್ಗಿ".
ಇಂದಿರಾ ಗಾಂಧಿ ಮತ್ತು ದೇವರಾಜ ಅರಸರ ನಡುವೆ ಅಭಿಪ್ರಾಯ ಬೇಧಗಳು ಸೃಷ್ಟಿಯಾದಾಗ ದೇವರಾಜ ಅರಸರ ಭೂಸುಧಾರಣೆಯಂತಹ ಬಡವರ ಕಲ್ಯಾಣ ಯೋಜನೆಗೆ ಮನಸೋತ ಕೊಡ್ಗಿ ಜನಭ್ರಿಪಾಯವನ್ನು ಲೆಕ್ಕಿಸದೆ ಅರಸರನ್ನು ಬೆಂಬಲಿಸುತ್ತಾರೆ. ಗುಂಡರಾಯರ ಸರ್ಕಾರವನ್ನು ಸದನದಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಾರೆ ಮತ್ತು ಸರ್ಕಾರಕ್ಕೆ ಕಿವಿಹಿಂಡುವಲ್ಲಿ ಸ್ವತಃ ದೇವರಾಜ ಅರಸರಿಂದ ಶಭಾಹಸ್ ಗಿರಿ ಪಡೆಯುತ್ತಾರೆ. ಕೊಡ್ಗಿಯವರ ಒಂದೊಂದು ಹೆಜ್ಜೆಯು ಇಂದಿನ ರಾಜಕಾರಣಿಗಳು ಹಿಂತಿರುಗಿ ನೋಡುವಂತೆ ದಾಖಲಾಗಿ ಬಿಟ್ಟಿದೆ.
ವರಾಹಿ ಮೂಲಕ ಸಮುದ್ರ ಸೇರುವ ನೀರನ್ನು ಸೌಭಾಗ್ಯ ಸಂಜೀವಿನಿ ಯೋಜನೆಯ ಮುಖಾಂತರ ಅವಳಿ ಜಿಲ್ಲೆಗಳಲ್ಲಿ ನದಿ ಜೋಡಣೆಯ ಕಾರ್ಯಕ್ರಮವನ್ನು ಕೊಡ್ಗಿ 20 ವರ್ಷಗಳ ಹಿಂದೆಯೇ ರೂಪಿಸಿದ್ದರು. ಜಾರ್ಜ್ ಫರ್ನಾಂಡಿಸ್, ಆಸ್ಕರ್ ಫರ್ನಾಂಡಿಸ್ ಸಹಿತ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರ ತನಕ ಯೋಜನೆಯ ಸ್ವರೂಪ ಸರ್ಕಾರ ಒಪ್ಪಿಕೊಂಡಿತು. ದುರದೃಷ್ಟಕ್ಕೆ ಕೊಡ್ಗಿಯವರ ಇಚ್ಛಾಶಕ್ತಿಯ ಪರವಾಗಿ ಧ್ವನಿಗೂಡಿಸುವಲ್ಲಿ ಗಟ್ಟಿತನದ ನಿಲುವು ವ್ಯಕ್ತವಾಗುವುದು ವಿಳಂಬವಾದ್ದರಿಂದ ಅವಳಿ ಜಿಲ್ಲೆಗಳ ಏತಾ ನೀರಾವರಿ ಯೋಜನೆ ವಿಳಂಬವಾದದ್ದು ಸತ್ಯ.
ಸ್ವತಃ ಕೃಷಿಯಲ್ಲಿ ಆಸಕ್ತಿ ಹೊಂದಿದ ಕೊಡ್ಗಿಯವರು ಅಮಾವಾಸೆಬೈಲು ಎಂಬ ಪುಟ್ಟ ಗ್ರಾಮದಲ್ಲಿ ಕೃಷಿಗೆ ಕೊಟ್ಟ ಪ್ರಾಧ್ಯನತೆ, ಹೈನುಗಾರಿಕೆಯಲ್ಲಿ ಪಟ್ಟ ಶ್ರಮ, ತೆಂಗು, ಕಂಗು ಸೇರಿದಂತೆ ಕೃಷಿಕಾಯಕದಲ್ಲಿ ಮಾಡಿದ ಸಾಧನೆ ಅವಿಸ್ಮರಣೀಯ. ಕೊಡ್ಗಿಯವರ ಮನಸ್ಸಿನಲ್ಲಿ ಒಮ್ಮೆ ಏನಾದರೂ ಹೊಕ್ಕು ಬಿಟ್ಟರೆ ಗುರಿತಲುಪುವರೆಗೆ ಕೊಡ್ಗಿ ತನ್ನ ಚಿಂತನೆಯನ್ನು ಕೈಬಿಡುವುದಿಲ್ಲ.
ಕೆ.ಎಂ. ಉಡುಪರ ಒಡನಾಟದ ಮೂಲಕ ಸೋಲಾರ್ ಶಕ್ತಿಯನ್ನು ಪರಿಚಯಿಸಿಕೊಂಡ ಕೊಡ್ಗಿ ಅಮಾವಾಸೆಬೈಲು ಎಂಬ ಪುಟ್ಟ ಗ್ರಾಮದಲ್ಲಿ ನಾಲ್ಕೈದು ಸಾವಿರ ಮನೆಗಳಿಗೆ ಅಂದರೆ ಗ್ರಾಮದ ಎಲ್ಲಾ ಮನೆಗಳಿಗೆ, ಶಾಲೆಗಳಿಗೆ, ಆಸ್ಪತ್ರೆಗಳಿಗೆ ಒಟ್ಟಾರೆ ಇಡೀ ಅಮಾವಾಸೆಬೈಲು ಪ್ರದೇಶಕ್ಕೆ ಪೂರ್ಣ ಸೋಲಾರಿಕರಣ ಮಾಡುವ ಮೂಲಕ ರಾಜ್ಯದಲ್ಲಿ ಮಾತ್ರವಲ್ಲ ಭಾರತ ದೇಶದಲ್ಲಿಯೇ ಮಾದರಿ ಎಂಬ ಗೌರವಕ್ಕೆ ಪಾತ್ರರಾಗುತ್ತಾರೆ.
ಸಹಕಾರಿ ಕ್ಷೇತ್ರದಲ್ಲಿ ಕೊಡ್ಗಿಯವರ ಶ್ರಮ ಅಸಾಧಾರಣ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಕೊಡ್ಗಿಯವರು ತನ್ನನ್ನು ತೊಡಗಿಸಿಕೊಂಡ ರೀತಿಯಿಂದಾಗಿ ಕರ್ನಾಟಕ ರಾಜ್ಯದ ಮೂರನೇ ಹಣಕಾಸು ಆಯೋಗದ ಅಧ್ಯಕ್ಷಗಿರಿಯವರೆಗೆ ಕೊಡ್ಗಿಯವರು ತಲುಪುತ್ತಾರೆ. ಹಣಕಾಸು ಆಯೋಗದ ನೇತೃತ್ವ ವಹಿಸಿದ ಕೊಡ್ಗಿ ರಾಜ್ಯದ ಮೂಲೆ ಮೂಲೆಯಲ್ಲಿ ತಿರುಗಾಟ ಮಾಡಿ ಪ್ರತಿಗ್ರಾಮ ಪಂಚಾಯತ್‌ಗಳು ಒಂದು ಸರ್ಕಾರದಂತೆ ಕೆಲಸ ಮಾಡುವುದು ಹೇಗೆ ಎಂಬ ಹೊಸ ಕಲ್ಪನೆಯನ್ನು ಸೃಷ್ಟಿ ಮಾಡಿ ಪಂಚಾಯತ್ ಪ್ರತಿನಿಧಿಗಳ ಮುಂದಿಟ್ಟರು.
ಕೊಡ್ಗಿ ಎಂಬ ನಿಷ್ಟುರವಾದಿ ಮಾಂತ್ರಿಕನ ಬದುಕಿನ ಜೊತೆ ಹೆಜ್ಜೆ ಹಾಕಿದ ಅನೇಕ ಹಿರಿಯ ಜೀವಗಳು ಇಂದು ನೆನಪಿಸಿಕೊಳ್ಳುವುದನೇಂದರೆ ಎ.ಜಿ. ಕೊಡ್ಗಿ ರಾಜಕಾರಣವೆಂಬ ಚದುರಂಗದಾಟದ ನಡುವೆ ಪರಿಶುದ್ಧ ಹಸ್ತದ ಪ್ರಾಮಾಣಿಕ ರಾಜಕಾರಣದ ಪಳಯುಳಿಕೆ ಏನಾದರೂ ನಿನ್ನೆಯವರೆಗೆ ಉಳಿದಿದ್ದರೆ ಆ ಪಳೆಯುಳಿಕೆಯ ಪ್ರತಿರೂಪವೇ ಏ.ಜಿ. ಕೊಡ್ಗಿ.
ಹಲವು ಸವಾಲುಗಳ ನಡುವೆಯು ಲೋಕಾಯುಕ್ತರಾಗಿ ಕರ್ನಾಟಕ ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿ ಸಂಚಲನ ಸೃಷ್ಟಿ ಮಾಡಿದ ಮಾಜಿ ಲೋಕಾಯುಕ್ತ ಶ್ರೀ ಸಂತೋಷ್ ಕುಮಾರ್ ಹೆಗಡೆಯವರು ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುತ್ತ “ಭ್ರಷ್ಟಾಚಾರ ರಹಿತವೆಂಬ ರಾಜಕಾರಣ ಸಮಾಜದಲ್ಲಿ ಉಳಿದಿಲ್ಲ ಎಂಬ ನನ್ನ ಭಾವನೆ ಪುನರ್ ವಿಮರ್ಶೆ ಮಾಡಿಕೊಳ್ಳಲು ಎ.ಜಿ. ಕೊಡ್ಗಿ ಕಾರಣ. ಕೊಡ್ಗಿಯಂತಹ ನಾಯಕ ಸಮಾಜದ ಮಧ್ಯೆ ಇದ್ದಾರೆ ಎನ್ನುವುದೇ ನನಗಿರುವ ಏಕೈಕ ಸಮಾಧಾನ” ಎಂದು ಉದ್ಘರಿಸಿದ್ದರು.
ಕೊಡ್ಗಿಯವರ ರಾಜಕಾರಣದ ಚಕ್ರವ್ಯೂಹದಲ್ಲಿ ಸಾಧಿಸುವ ಛಲ ಊಹಿಸಲು ಅಸಾಧ್ಯ. ಕುಂದಾಪುರದಲ್ಲಿ ಸ್ವತಃ ತಾನೇ ಸ್ಪರ್ಧಿಸಿದ್ದರು ಗೆಲವು ಸಾಧ್ಯವಿಲ್ಲ ಎಂದರಿತ ಕೊಡ್ಗಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ತನ್ನ ಪಟ್ಟ ಶಿಷ್ಯ ಹಾಲಾಡಿ ಶ್ರೀನಿವಾಸ ಶೆಟ್ಟಿಯವರನ್ನು ಕುಂದಾಪುರದ ರಾಜಕಾರಣದ ರಣರಂಗಕ್ಕೆ ಕರೆತರುತ್ತಾರೆ. ತನ್ನ ಸೋಲಿನ ನೋವನ್ನು ಮರೆತು ಹಾಲಾಡಿ ಶ್ರೀನಿವಾಸ ಶೆಟ್ಟಿಯವರನ್ನು ಕುಂದಾಪುರದ ಶಾಸಕರನ್ನಾಗಿ ಮಾಡುತ್ತಾರೆ.
ಕಾಂಗ್ರೆಸ್ ಪಕ್ಷವನ್ನು ಬಿಟ್ಟುಬಂದ ನಂತರ ತನ್ನ ಹಳೆಯ ಗೆಳೆಯ ಆಸ್ಕರ್ ಗೆಲುವಿನ ನಾಗಾಲೋಟ ತಡೆಯಲು ಐ.ಎಂ. ಜಯರಾಮ್ ಶೆಟ್ಟರನ್ನು ಆಸ್ಕರ್ ಎದುರು ನಿಲ್ಲಿಸಿ, ಮಾತ್ರವಲ್ಲ ಗೆಲ್ಲಿಸಿ ಮುಗುಳ್ನಗುತ್ತಾರೆ. ಅಪಾರ ಜನಸಂಪರ್ಕ ಹೊಂದಿದ ಅಂದಿನ ಸಂಸದ ಶ್ರೀ ವಿನಯ ಕುಮಾರ ಸೊರಕೆಯವರೆದುರು ಅಭ್ಯರ್ಥಿಗಳಿಗಾಗಿ ತಡಕಡುತ್ತಿರುವಾಗ ಕೊಡ್ಗಿ ಹೊಸ ವ್ಯೂಹ ಒಂದನ್ನು ರಚಿಸಿ ಶ್ರೀಮತಿ ಮನೋರಮಾ ಮಧ್ವರಾಜ್ ರವರನ್ನು ಕಾಂಗ್ರೆಸ್ ನಿಂದ ಕರೆತಂದು ಬಿಜೆಪಿಯಲ್ಲಿ ನಿಲ್ಲಿಸಿ ಗೆಲುವು ಪಡೆದು ಹೊಸ ದಾಖಲೆ ಬರೆಯುತ್ತಾರೆ.
ಅಗಾಧ ಅನುಭವ, ಆರ್ಥಿಕ ಸಂಪತ್ತು, ರಾಜಕೀಯ ಬಲಾಢ್ಯ ಶಕ್ತಿಗಳನ್ನು ಹೊಂದಿರುವ ಕೊಡ್ಗಿ ಬಿಜೆಪಿ ಸೇರಿ ಹೊಸ ಸಂಚಲನ ಉಂಟು ಮಾಡುತ್ತಿರುವಾಗಲೇ ನನಗವರ ಪರಿಚಯ ಆಗಿತ್ತು. ಸಾಮಾನ್ಯ ತಾಲೂಕು ಪಂಚಾಯತ್ ಸದಸ್ಯನಾಗಿದ್ದ ನನ್ನನ್ನು ತಿದ್ದಿ ತೀಡಿ, ಬುದ್ಧಿ ಹೇಳಿ ನನ್ನ ತಪ್ಪುಗಳನ್ನೆಲ್ಲವನ್ನು ಸರಿಪಡಿಸಿ ಬ್ರಹ್ಮಾವರ ಕ್ಷೇತ್ರದಲ್ಲಿ ವಿಧಾನಸಭೆಯ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿಸುವಲ್ಲಿ ಡಾಕ್ಟರ್ ವಿ.ಎಸ್. ಆಚಾರ್ಯರ ಜೊತೆಗೂಡಿ ಕೊಡ್ಗಿಯವರು ನನ್ನಲ್ಲಿ ವಿಶ್ವಾಸ ತುಂಬಿದ್ದರು. ನಿನ್ನಂತ ಸಾಮಾನ್ಯನೊಬ್ಬ ವಿಧಾನಸೌಧದಲ್ಲಿ ಬಡವರ ಧ್ವನಿಯಾಗಿ ಮಾತನಾಡುವುದನ್ನು ಕೇಳುವ ಆಸೆ ನನಗಿದೆ ಎಂದಿದ್ದರು. ನನ್ನ ಹಲವು ಸೋಲು-ಗೆಲುವುಗಳ ನಡುವೆ ಕರ್ನಾಟಕದಲ್ಲಿ ಕ್ಯಾಬಿನೆಟ್ ದರ್ಜೆಯ ಮಂತ್ರಿಯಾಗಿ ಕೆಲಸ ಮಾಡುವ ಎತ್ತರದ ಜವಾಬ್ದಾರಿಯವರೆಗೂ ಕೊಡ್ಗಿಯವರ ಮಾರ್ಗದರ್ಶನ ಇತ್ತು.
ಕುಂದಾಪುರದ ಹಾಲಾಡಿ ಶ್ರೀನಿವಾಸ ಶೆಟ್ಟರು, ಬೈಂದೂರಿನ ಜಯರಾಮ ಶೆಟ್ಟರು, ಲಕ್ಷ್ಮೀನಾರಾಯಣರ ಸಹಿತ ಕೊಡ್ಗಿಯವರು ನೂರಾರು ಕಾರ್ಯಕರ್ತರನ್ನು ಸೃಷ್ಟಿಸಿದ್ದರು.
ಇಂದು ಕೊಡ್ಗಿ ಇನ್ನಿಲ್ಲವಾಗುತ್ತಲೇ ಪರಿಶುದ್ಧ ರಾಜಕಾರಣದ ಆದರ್ಶ ದೀಪವೊಂದು ಆರಿಹೋದ ಅನುಭವ ಆಗುತ್ತದೆ. ಮಚ್ಚಟ್ಟಿನ ಸ್ವಾತಂತ್ರ್ಯ ಯೋಧನ ಮನೆಯಿಂದ ಎದ್ದುಬಂದ ಜನಪರ ಹೋರಾಟಗಾರನೊಬ್ಬ, ಸಮಾಜದ ಓರೆ ಕೋರೆಗಳನ್ನು ತಿದ್ದಿ, ತನ್ನ ಬಂಡಾಯದ ಭಾವನೆಗಳಿಂದ ಸಾಮಾಜಿಕ ನ್ಯಾಯದ ಪರಿಕಲ್ಪನೆಯೊಡನೆ ನಾಗರಿಕ ಸಮಾಜವನ್ನು ಸೃಷ್ಟಿ ಮಾಡಲು ದುಡಿದ ಬಗೆ, ಪಟ್ಟ ಶ್ರಮ, ಎಲ್ಲವೂ ಕೊಡ್ಗಿಯವರ ಹೆಜ್ಜೆ ಗುರುತಿನೊಂದಿಗೆ ನೆನಪಾಗಿ ಉಳಿಯಲಿ. ಕೊಡ್ಗಿಯವರೇ ಸ್ವತಃ ಕಟ್ಟಿದ ಸ್ವರ್ಗ ಎಂಬ ಮನೆ ತನ್ನೊಡೆಯನ ನೆನಪುಗಳನ್ನು ಹಸಿರು ಕಾನನದ ನಡುವೆ ಅಚ್ಚಳಿಯದೆ ಉಳಿಸಲಿದೆ. ಕೊಡ್ಗಿ ಮತ್ತೊಮ್ಮೆ ಹುಟ್ಟಿ ಬರಲಿ.
-ಕೋಟ
0 Comments