ಮೂಡುಬಿದಿರೆ: ಇಲ್ಲಿನ ಕಂದಾಯ ಇಲಾಖೆ, ಅರಣ್ಯ ಇಲಾಖೆ ಮೂಡುಬಿದಿರೆ, ಎಂಸಿಎಲ್ ಸಂಸ್ಥೆ , ರೋಟರಿ ಕ್ಲಬ್ , ಲಯನ್ಸ್ ಕ್ಲಬ್ ಹಾಗೂ ಇನ್ನರ್ ವೀಲ್ ಕ್ಲಬ್ ಮೂಡುಬಿದಿರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕು ಆಡಳಿತ ಸೌಧದ ಮುಂಭಾಗ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ಅರಣ್ಯ ಇಲಾಖೆಯು ಪರಿಸರ ದಿನಾಚರಣೆಯ ಅಂಗವಾಗಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಏರ್ಪಡಿಸಿರುವ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಶಾಸಕ ಉಮಾನಾಥ ಕೋಟ್ಯಾನ್ ಬಹುಮಾನ ಹಾಗೂ ಸಾರ್ವಜನಿಕರಿಗೆ ಗಿಡಗಳನ್ನು ವಿತರಿಸಿ ಮಾತನಾಡಿ, ಪರಿಸರ ಹಸಿರಾಗಿದ್ದರೆ ಉಸಿರು. ಹಸಿರಿಲ್ಲದಿದ್ದರೆ ಉಸಿರಿಲ್ಲ. ಪರಿಸರದಲ್ಲಿ ಮರ ಗಿಡಗಳನ್ನು ನೆಟ್ಟು ಬೆಳೆಸಿ ರಕ್ಷಿಸಿದರೆ ಸ್ವಚ್ಛ ಗಾಳಿ ನಮಗೆ ಸಿಗುತ್ತದೆ. ವಿದ್ಯಾರ್ಥಿಗಳು ಜಾಗೃತರಾಗಬೇಕು ಪರಿಸರದಲ್ಲಿರುವ ಗಿಡಗಳನ್ನು ನೆಟ್ಟು ಉಳಿಸಿ ಬೆಳೆಸುವಂತೆ ಹಿರಿಯರಿಗೂ ತಿಳಿಸಬೇಕು ಈ ನಿಟ್ಟಿನಲ್ಲಿ ಇಂದು ವಿಶ್ವ ಪರಿಸರ ದಿನದ ಸಂದರ್ಭದಲ್ಲಿ ಸಂಘ ಸಂಸ್ಥೆಗಳು ಸೇರಿ ಶ್ರದ್ಧೆಯಿಂದ ಗಿಡಗಳನ್ನು ನೆಡುವ ಮೂಲಕ ಮಾದರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ನಾವು ಇದೀಗ ಅಡುಗೆ ಅನಿಲವನ್ನು ಆಮದು ಮಾಡಿಕೊಳ್ಳುತ್ತಿದ್ದು ದುಬಾರಿಯಾಗುತ್ತಿದೆ ಮುಂದಿನ ಒಂದು ವರ್ಷದಲ್ಲಿ ಎಂಸಿಎಲ್ ಸಂಸ್ಥೆಯು ದುಬಾರಿ ವೆಚ್ಚಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಇಲ್ಲಿಯೇ ಅಡುಗೆ ಅನಿಲ ಹಾಗೂ ವಾಹನನಕ್ಕೆ ಉಪಯೋಗಿಸುವ ಇಂಧನವನ್ನು ತಯಾರಿಸಿ ಕಡಿಮೆ ಬೆಲೆಗೆ ನೀಡಲಿದೆ ಎಂದರು.
ತಾಲೂಕು ತಹಶೀಲ್ದಾರ್ ಪುಟ್ಟರಾಜು, ವಲಯಾರಣ್ಯಾಧಿಕಾರಿ ಹೇಮಗಿರಿ ಅಂಗಡಿ, ರೋಟರಿ ಕ್ಲಬ್‌ನ ಅಧ್ಯಕ್ಷ ಜೆ.ಡಬ್ಲ್ಯು.ಪಿಂಟೋ, ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್ ನ ಅಧ್ಯಕ್ಷ ರಮೇಶ್, ಕಾರ್ಯದರ್ಶಿ ಪ್ರವೀಣ್ ಪಿರೇರಾ, ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷೆ ಸಹನಾ ನಾಗರಾಜ್, ಕಾರ್ಯದರ್ಶಿ ಸರಿತಾ ಆಶೀರ್ವಾದ್, ಲಯನ್ಸ್ ಕ್ಲಬ್ ನ ಅಧ್ಯಕ್ಷ ವಿನೋದ್, ಎಂಸಿಎಲ್ ಸಂಸ್ಥೆಯ ವಸಂತ್ ಪೂಜಾರಿ, ಆರ್‌ಸಿ ಕೆಂಬಾರೆ, ಪ್ರಶಾಂತ್, ಪ್ರವೀಣ್, ವಿಶ್ವನಾಥ ಕೋಟ್ಯಾನ್, ರಾಮ್‌ಮೋಹನ್, ಸುರೇಶ್ ಬೋಳ, ವಾಸು ನಾಯ್ಕ್, ಆಲ್ವೀನ್ ಮತ್ತಿತರರು ಈ ಸಂದರ್ಭದಲ್ಲಿದ್ದರು.
ಉಪವಲಯಾರಣ್ಯಾಧಿಕಾರಿ ಮಂಜುನಾಥ ಗಾಣಿಗ ಪ್ರಾಸ್ತಾವಿಕವಾಗಿ ಮಾತನಾಡಿ ಬೀಜವನ್ನು ಬಿತ್ತಿ ಅರಣ್ಯವನ್ನು ಬೆಳೆಸುವ ಅಭಿಯಾನವನ್ನು ಅರಣ್ಯ ಇಲಾಖೆಯು ಕೈಗೊಂಡಿದೆ. ರಾಜ್ಯದ 50 ವಿಭಾಗದ 228 ವಲಯದ ಶಾಲೆಗಳು ಮತ್ತು ಸಂಘಟನೆಗಳ ಮೂಲಕ ಬೀಜವನ್ನು ಬಿತ್ತುವ ಕಾರ್ಯವನ್ನು ಕೈಗೊಳ್ಳಲಿದೆ ಎಂದರು.
ಶಿಕ್ಷಕ ಪ್ರಕಾಶ್ ನಾಯ್ಕ್ ಸ್ವಾಗತಿಸಿ ವಂದಿಸಿದರು.
0 Comments