ಗ್ರಾಮಸ್ಥರಿಲ್ಲದ ಪುತ್ತಿಗೆ ಗ್ರಾಮಸಭೆ ಸಭೆಯನ್ನು ಮುಂದೂಡುವಂತೆ ಆಗ್ರಹಿಸಿದ ಮಾಜಿ ಅಧ್ಯಕ್ಷ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ : ಅಧಿಕಾರಿಗಳು, ಗ್ರಾ.ಪಂ ಸದಸ್ಯರು ಸೇರಿ ವೇದಿಕೆಯಲ್ಲಿ ಗ್ರಾಮಸ್ಥರಿಗಿಂತಲೂ ಅಧಿಕ ಜನ ಇದ್ದೀರಿ ಆದರೆ ಗ್ರಾಮಸಭೆಗೆ ಬೇಕಾಗಿರುವ ಗ್ರಾಮಸ್ಥರೇ ಇಲ್ಲದಿರುವಾಗ ಗ್ರಾಮಸಭೆ ಯಾರಿಗೆ ? ಕೋರಂ ಇಲ್ಲವೆಂದು ಗ್ರಾಮಸಭೆಯನ್ನು ಮುಂದೂಡುವಂತೆ ಮಾಜಿ ಅಧ್ಯಕ್ಷ ಶಶಿಧರ್ ನಾಯಕ್ ಆಗ್ರಹಿಸಿದ ಘಟನೆ  ಮಂಗಳವಾರ ಪುತ್ತಿಗೆ ಗ್ರಾಮಸಭೆಯಲ್ಲಿ  ನಡೆದಿದೆ. 

ಪುತ್ತಿಗೆ ಗ್ರಾ.ಪಂಚಾಯತ್ ಅಧ್ಯಕ್ಷ ಪ್ರವೀಣ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಗುಡ್ಡೆಯಂಗಡಿ ವಿಶ್ವಕರ್ಮ ಸಭಾಭವನದಲ್ಲಿ ನಡೆದ ಗ್ರಾಮಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸಹಿತ ಗ್ರಾಮಸ್ಥರು ೨೫ ಜನ ಭಾಗವಹಿಸಿದ್ದು ಈ ಬಗ್ಗೆ ಪಂಚಾಯತ್‌ನ ಮಾಜಿ ಅಧ್ಯಕ್ಷ ಶಶಿಧರ್ ನಾಯಕ್, ಗ್ರಾಮಸ್ಥ ವಾಸುವೇವ ಭಟ್ ಹಾಗೂ ಮಾಜಿ ಸದಸ್ಯ ನಾಗವರ್ಮ ಜೈನ್ ಮಾತನಾಡಿ ಗ್ರಾಮಸಭೆ ಇರುವ ಬಗ್ಗೆ ಗ್ರಾಮಸ್ಥರಿಗೆ ಸರಿಯಾಗಿ ಮಾಹಿತಿಯನ್ನು ನೀಡಿಲ್ಲ. ನಾವು ಅಧಿಕಾರದಲ್ಲಿದ್ದಾಗ ಗ್ರಾಮಸ್ಥರನ್ನು ಗ್ರಾಮಸಭೆಗೆ ೧೦೦ರಷ್ಟು ಜನರನ್ನು ಸೇರಿಸುತ್ತಿದ್ದೆವು ಎಂದು ನೋಡೆಲ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. 

  ಗ್ರಾಮಸಭೆಗೆ ಗ್ರಾಮಸ್ಥರು ಬೇಕು. ಸಭೆಯನ್ನು ಆರಂಭಿಸಿದ ನಂತರ ಗ್ರಾಮಸ್ಥರು ಸೇರಬಹುದೆಂಬ ನಿರೀಕ್ಷೆಯಿಂದ ಸಭೆಯನ್ನು ಮುಂದುವರಿಸಲಾಯಿತು. ಮುಂದಿನ ಗ್ರಾಮಸಭೆಯಲ್ಲಿ ಹೆಚ್ಚಿನ ಜನರನ್ನು ಸೇರುವಂತೆ ಪಂಚಾಯತ್‌ಗೆ ಸೂಚನೆ ನೀಡಲಾಗಿದೆ ಎಂದು ನೋಡೆಲ್ ಅಧಿಕಾರಿ, ತಾ.ಪಂ.ಮುಖ್ಯಕಾರ್ಯನಿರ್ವಾಹಣಾಧಿಕಾರಿ ದಯಾವತಿ ತಿಳಿಸಿದರು. ತಾವು ಗ್ರಾಮಸಭೆ ಇರುವ ಬಗ್ಗೆ ಮಾಹಿತಿಯ ನೋಟೀಸನ್ನು ಗ್ರಾಮಸ್ಥರಿಗೆ ನೀಡಿದ್ದೇವೆ. ಅವರು ಬರದಿದ್ದರೆ ನಾವು ಅವರನ್ನು ಮನೆಯಿಂದ ಕರೆದುಕೊಂಡು ಬರಲು ಸಾಧ್ಯವಿಲ್ಲ. ಗ್ರಾಮಸ್ಥರು ಬರದಿದ್ದರೆ ಸಮಸ್ಯೆಗಳು ಇಲ್ಲವೆಂಬ ಅರ್ಥ ನೀಡುತ್ತದೆ ಎಂದು ಪಂಚಾಯತ್ ಅಧ್ಯಕ್ಷ ಪ್ರವೀಣ್ ಶೆಟ್ಟಿ ಹೇಳಿದರು. 

  ಪಾಲಡ್ಕ ಸಮುದಾಯ ಆರೋಗ್ಯಕೇಂದ್ರದ ವೈದ್ಯಾಧಿಕಾರಿ ಡಾ.ತ್ರಿವೇಣಿ, ಕ್ಷೇತ್ರ ಶಿಕ್ಷಣಾಧಿಕಾರಿ ದೇವರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪುತ್ತಿಗೆ ವಲಯದ ಮೇಲ್ವೀಚಾರಕಿ ಕಾತ್ಯಾಯಿನಿ, ಮೆಸ್ಕಾಂ ಅಧಿಕಾರಿ ತಮ್ಮ ಇಲಾಖಾ ಮಾಹಿತಿಯನ್ನು ನೀಡಿದರು.

  ಗ್ರಾ.ಪಂ.ಉಪಾಧ್ಯಕ್ಷೆ ತಾಹಿರಾಬಾನು ಮತ್ತು ಸದಸ್ಯರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನೀತಾ ಕೋಟ್ಯಾನ್ ವರದಿ ಹಾಗೂ ಖರ್ಚು ವೆಚ್ಚದ ಮಾಹಿತಿ ನೀಡಿದರು. ಸಿಬಂಧಿ ಶ್ರೀಧರ್ ಎ. ಸ್ವಾಗತಿಸಿದರು. ಸಂಜೀವ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments