ಮಥುರಾ: ವಾರಾಣಸಿಯಲ್ಲಿ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಸಮೀಕ್ಷೆ ನಡೆಸಲು ಕೋರ್ಟ್ ಆದೇಶ ನೀಡಿ, ಸಮೀಕ್ಷೆ ಪೂರ್ಣಗೊಂಡ ಬೆನ್ನಲ್ಲೇ ಅಂತಹದೇ ಅರ್ಜಿ ಮಥುರಾ ಕೋರ್ಟ್ನಲ್ಲಿ ದಾಖಲಾಗಿದೆ. ಈ ಅರ್ಜಿಯನ್ನು ವಿಚಾರಣೆಗೆ ಒಳಪಡಿಸಲು ನ್ಯಾಯಾಲಯ ಒಪ್ಪಿಕೊಂಡಿದೆ. ಕೃಷ್ಣ ಜನ್ಮಭೂಮಿಗೆ ಹೊಂದಿಕೊಂಡಂತೆ ಇರುವ ಶಹಿ ಈದ್ಗಾ ಮಸೀದಿಯಲ್ಲಿ ಕೂಡ ವಿಡಿಯೋಗ್ರಫಿ ಮಾಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಲಾಗಿದೆ.
ಮನೀಶ್ ಯಾದವ್, ಮಹೇಂದ್ರ ಪ್ರತಾಪ್ ಸಿಂಗ್ ಮತ್ತು ದಿನೇಶ್ ಶರ್ಮಾ ಸೇರಿದಂತೆ ಅರ್ಜಿದಾರರು ಮಥುರಾದ ಶಹಿ ಬಾಗ್ ಮಸೀದಿ ಆವರಣದಲ್ಲಿ ವಿಡಿಯೋ ಸಮೀಕ್ಷೆ ನಡೆಸಲು ಅಡ್ವೊಕೇಟ್ ಕಮಿಷನರ್ ಅವರನ್ನು ನೇಮಕ ಮಾಡುವಂತೆ ಮನವಿ ಮಾಡಿದ್ದಾರೆ.
13.37 ಎಕರೆ ಭೂಮಿಯಲ್ಲಿ ಹರಡಿಕೊಂಡಿದ್ದ ಶ್ರೀಕೃಷ್ಣ ಜನ್ಮಭೂಮಿ ದೇವಸ್ಥಾನದ ಭಾಗವೊಂದನ್ನು ನೆಲಸಮ ಮಾಡಿದ ಬಳಿಕ ಶಹಿ ಈದ್ಗಾ ಮಸೀದಿಯನ್ನು ಕಟ್ಟಲಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ. ಈ ಭೂಮಿಯನ್ನು ದೇವಸ್ಥಾನಕ್ಕೆ ಮರಳಿ ನೀಡಲು ಮಸೀದಿಯನ್ನು ತೆರವುಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಶ್ರೀಕೃಷ್ಣ ಜನ್ಮಭೂಮಿ ಮತ್ತು ಶಹಿ ಈದ್ಗಾ ಮಸೀದಿ ವಿವಾದಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನೂ ನಾಲ್ಕು ತಿಂಗಳ ಒಳಗೆ ವಿಲೇವಾರಿ ಮಾಡುವಂತೆ ಅಲಹಾಬಾದ್ ಹೈಕೋರ್ಟ್ನ ಲಖನೌ ಪೀಠವು ಮಥುರಾ ನ್ಯಾಯಾಲಯಕ್ಕೆ ಮೇ 12ರಂದು ನಿರ್ದೇಶನ ನೀಡಿತ್ತು. ಶ್ರೀಕೃಷ್ಣ ಜನ್ಮಭೂಮಿ- ಶಹಿ ಈದ್ಗಾ ಮಸೀದಿಯ ಎಲ್ಲ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಕೋರ್ಟ್, ಈ ಸೂಚನೆ ಕೊಟ್ಟಿತ್ತು.
ಸುನ್ನಿ ವಕ್ಫ್ ಮಂಡಳಿ ಮತ್ತು ಇತರೆ ಕಕ್ಷಿದಾರರು ವಿಚಾರಣೆಯಲ್ಲಿ ಭಾಗಿಯಾಗದೆ ಇದ್ದರೆ ಅಥವಾ ಪ್ರಕರಣಕ್ಕೆ ತಡೆ ನೀಡುವ ಪ್ರಯತ್ನಗಳು ನಡೆಯದೆ ಇದ್ದರೆ, ಅರ್ಜಿದಾರರ ಪರವಾಗಿ ಆದೇಶಗಳನ್ನು ನೀಡಬಹುದು ಎಂದು ಹೈಕೋರ್ಟ್ ಹೇಳಿತ್ತು. ನಾರಾಯಣಿ ಸೇನಾದ ರಾಷ್ಟ್ರೀಯ ಅಧ್ಯಕ್ಷ ಮನೀಶ್ ಯಾದವ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಈ ಸೂಚನೆ ನೀಡಿತ್ತು. ಇದುವರೆಗೂ ಶ್ರೀಕೃಷ್ಣ ಜನ್ಮಭೂಮಿ ಮತ್ತು ಶಹಿ ಈದ್ಗಾ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಮಥುರಾ ನ್ಯಾಯಾಲಯದಲ್ಲಿ 9 ಪ್ರಕರಣಗಳು ದಾಖಲಾಗಿವೆ.
0 Comments