ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಖಂಡಿಸಿ ಜೈನ ಸಮುದಾಯದಿಂದ ಮೂಡುಬಿದಿರೆಯಲ್ಲಿ ಹಕ್ಕೋತ್ತಾಯ, ಮೌನ ಪ್ರತಿಭಟನಾ ಮೆರವಣಿಗೆ
ಮೂಡುಬಿದಿರೆ : ಶ್ರೀ ಕ್ಷೇತ್ರ ಧಮ೯ಸ್ಥಳ ಹಾಗೂ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಬಗ್ಗೆ ಖಂಡಿಸಿ ಜೈನ ಧರ್ಮ ಹಿತ ರಕ್ಷಣಾ ಸಮಿತಿಯಿಂದ ಶ್ರಾವಕರ ನಡೆ, ಧರ್ಮ ರಕ್ಷಣೆ ಕಡೆ ಜಾಥಾವು ಮಂಗಳವಾರ ಮೂಡುಬಿದಿರೆಯಲ್ಲಿ ನಡೆಯಿತು.
ಮೂಡುಬಿದಿರೆ ಜೈನ ಮಠದ ಚಾರುಕೀತಿ೯ ಭಟ್ಟಾರಕ ಪಂಡಿತಾಚಾಯ೯ವಯ೯ ಸ್ವಾಮೀಜಿ ಸಾವಿರ ಕಂಬದ ಬಸದಿ ಮುಂದೆ ಜಾಥಾಕ್ಕೆ ಚಾಲನೆ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳವು ನಮ್ಮ ನಾಡಿನ ಕೋಟ್ಯಾಂತರ ಜನರ ನಂಬಿಕೆ, ಶ್ರದ್ಧೆಗಳ ಧಾರ್ಮಿಕ ಪುಣ್ಯಸ್ಥಳವಾಗಿದೆ. ಇಂಥ ಪುಣ್ಯಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಸಮಾಜದ ಅಭಿವೃದ್ಧಿಗೆ ತಮ್ಮನ್ನು ಸಮರ್ಪಿಸಿಕೊಂಡಿರುವ ಹೆಮ್ಮೆಯ ನಾಯಕರು. ಇಂಥ ಮೇರು ವ್ಯಕ್ತಿಯ ಏಳಿಗೆಯನ್ನು ಸಹಿಸಿದ ಸಮಾಜ ವಿರೋಧಿ ವಿಕೃತ ಮನಸ್ಸಿನ ಸಮಾಜ ಘಾತಕ ವ್ಯಕ್ತಿಗಳು ಸೋಷಿಯಲ್ ಮೀಡಿಯಾಗಳಲ್ಲಿ (ಯುಟ್ಯೂಬ್, ಫೇಸ್ಬುಕ್, ಇನ್ ಸ್ಟಾಗ್ರಾಮ್ ಮೊದಲಾದವುಗಳು) ಶ್ರೀಕ್ಷೇತ್ರ ಹಾಗೂ ಹೆಗ್ಗಡೆ ಅವರ ಕುರಿತು ಅಪಪ್ರಚಾರ, ನಿಂದನೆ, ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುವುದರ ಮೂಲಕ, ಸಮಾಜದಲ್ಲಿ ಅಶಾಂತಿಯನ್ನು, ಭಯದ ವಾತಾವರಣವನ್ನು ಸೃಷಿಸಿ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ನಮ್ಮ ಶ್ರದ್ದೆ ಹಾಗೂ ನಂಬಿಕೆಗಳಿಗೆ ತೀವ್ರ ಘಾಸಿಯಾಗಿದೆ. ನಮ್ಮ ಭಾವನೆಗಳಿಗೆ ಧಕ್ಕೆಯಾಗಿದ್ದು, ಅವಿಭಜಿತ ದ.ಕ.ಜಿಲ್ಲೆಯ ಹೆಚ್ಚಿನ ಹಿಂದೂ ದೇವಸ್ಥಾನ-ದೈವಸ್ಥಾನಗಳ 'ಆಡಳಿತ ಮೊಕ್ತಸರರು' ಜೈನಧರ್ಮಿಯರೇ ಆಗಿರುವುದು ಇಲ್ಲಿನ ವೈಶಿಷ್ಟ್ಯ. ಶತಮಾನಗಳ ಇಂಥ ಸಾಮಾಜಿಕ ಸಾಮರಸ್ಯವನ್ನು ಕೆಲವು ಸಮಾಜವಿರೋಧಿ, ವಿಕೃತ ಮನಸ್ಸಿನ ವಿಘ್ನಸಂತೋಷಿಗಳು ಹಾಳು ಮಾಡುವುದರ ಮೂಲಕ ಸಮಾಜದಲ್ಲಿ ಉದ್ದೇಶಪೂರ್ವಕಾಗಿ ಅಶಾಂತಿಯನ್ನು, ಭಯದ ವಾತಾವರಣವನ್ನು ಉಂಟುಮಾಡಲು ಪ್ರಯತ್ನಿಸುತ್ತಿದ್ದಾರೆ. ಹಾಗೂ ಧರ್ಮ-ಧರ್ಮಗಳ ನಡುವೆ ದ್ವೇಷಭಾವನೆಯನ್ನುಂಟುಮಾಡಿ ಸಂಘರ್ಷಕ್ಕೆ ಕಾರಣರಾಗುತ್ತಿದ್ದಾರೆ.
ಸಮಾಜ ವಿರೋಧಿ ಮನಸ್ಸಿನ, ವಿಕೃತ ಸ್ವಭಾವದ, ಸಾಮಾಜಿಕ ಜಾಲತಾಣಗಳ ವ್ಯಕ್ತಿಗಳನ್ನು ಮತ್ತು ವಿಘ್ನ ಸಂತೋಷಿಗಳ ಷಡ್ಯಂತ್ರಗಳನ್ನು ಗುರುತಿಸಿ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆ ವಿರುದ್ಧ ನಿರಂತವಾಗಿ ಸುಳ್ಳು ಆರೋಪ ಮಾಡುತ್ತಿರುವ ಕ್ರಿಮಿನಲ್ ಹಿನ್ನಲೆಯ ಮೂಲ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿರುವ ಮನವಿಪತ್ರವನ್ನು ಜೈನ ಸಮುದಾಯದ ಮುಖಂಡರು ತಾಲೂಕು ತಹಶಿಲ್ದಾರ್ ಶ್ರೀಧರ್ ಮುಂದಲಮನಿ ಅವರಿಗೆ ಮನವಿ ಸಲ್ಲಿಸಿದರು.
ಸಾವಿರ ಕಂಬದ ಬಸದಿಯಿಂದ ತಾಲೂಕು ಆಡಳಿತ ಸೌಧದವರೆಗೆ ನಡೆದ ಹಕ್ಕೋತ್ತಾಯ ಮೌನ ಪ್ರತಿಭಟನಾ ಮೆರವಣಿಗೆಯಲ್ಲಿ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಕುಲದೀಪ ಎಂ. ಚೌಟರ ಅರಮನೆ, ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪುರಸಭೆ ಸದಸ್ಯೆ ಶ್ವೇತಾ , ಮೂಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಪ್ರಮುಖರಾದ ಮಹೇಂದ್ರವರ್ಮ ಜೈನ್, ಶೈಲೇಂದ್ರ ಕುಮಾರ್, ಸಂಪತ್ ಸಾಮ್ರಾಜ್ಯ, ಕೃಷ್ಣರಾಜ ಹೆಗ್ಡೆ, ರಾಜವರ್ಮ ಬೈಲಂಗಡಿ, ಬಾಹುಬಲಿ ಪ್ರಸಾದ್, ಪಟ್ಣಶೆಟ್ಟಿ ಸುಧೇಶ್ ಕುಮಾರ್, ಅಕ್ಷಯ್ ಜೈನ್, ಆದರ್ಶ್ ಮೂಡುಬಿದಿರೆ ಶಾಂತಿ ಪ್ರಸಾದ್ ಹೆಗ್ಡೆ, ಅಭಿಜಿತ್ ಎಂ., ನಾಗವರ್ಮ ಜೈನ್, ಕೆ.ಪಿ ಜಗದೀಶ್ ಅಧಿಕಾರಿ, ವಕೀಲರಾದ ದಿವಿಜೇಂದ್ರ, ಶ್ವೇತಾ ಜೈನ್, ಸುಭಾಶ್ಚಂದ್ರ ಚೌಟ ಸಹಿತ ಸಮುದಾಯದವರು ಭಾಗವಹಿಸಿದ್ದರು.
0 Comments