ಮೂಡುಬಿದಿರೆ : ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ರಾಜ್ಯದ ಸ್ಥಳೀಯ ಸಂಸ್ಥೆಗಳನ್ನು ಸ್ವಚ್ಛ ಮತ್ತು ಸುಂದರವಾಗಿಸುವ ನಿಟ್ಟಿನಲ್ಲಿ ಅಮೃತ ನಿರ್ಮಲ ನಗರ ಯೋಜನೆಯಲ್ಲಿ ಮೂಡುಬಿದಿರೆ ಪುರಸಭೆಗೆ ಮಂಜೂರಾಗಿರುವ ರೂ ೧ ಕೋ.ವೆಚ್ಚದಲ್ಲಿ ನಡೆಯಲಿರುವ ೧೧ ಕಾಮಗಾರಿಗಳಿಗೆ ಶಾಸಕ ಎ.ಉಮಾನಾಥ ಕೋಟ್ಯಾನ್ ಮಂಗಳವಾರ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಗುದ್ದಲಿಪೂಜೆಯನ್ನು ನೆರವೇರಿಸಿದರು.
ನಂತರ ಮಾತನಾಡಿದ ಶಾಸಕ ಕೋಟ್ಯಾನ್ ಮೂಡುಬಿದಿರೆ ನಗರದ ಇನ್ನರ್‌ವ್ಹೀಲ್ ಕ್ಲಬ್ ವೃತ್ತದಿಂದ ಬಸ್ ನಿಲ್ದಾಣದವರೆಗೆ ಇರುವ ಬ್ಯಾರಿಕೇಡನ್ನು ತೆಗೆದು ರಸ್ತೆಯ ಮಧ್ಯ ಭಾಗಕ್ಕೆ ಡಿವೈಡರನ್ನು ಹಾಕಿ ವಿದ್ಯುತ್ ದೀಪಗಳಿಂದ ಅಲಂಕರಿಸುವ ನಿಟ್ಟಿನಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಪುರಸಭೆಯ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳನ್ನು ಮಾಡಲಾಗುವುದು. ಅಲ್ಲದೆ ಪುರಸಭೆಯ ಹಳೆ ಬಿಲ್ಡಿಂಗ್‌ನ್ನು ಕಮರ್ಷಿಯಲ್ ಕಾಂಪ್ಲೆಕ್ಸ್ ಆಗಿ ಮಾರ್ಪಾಡಿಸಲಾಗುವುದು ಎಂದ ಅವರು ಒಟ್ಟಾರೆಯಾಗಿ ಮೂಡುಬಿದಿರೆಯು ಸ್ವಚ್ಛ ಹಾಗೂ ಸುಂದರವನ್ನಾಗಿಸುವ ನಿಟ್ಟಿನಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ಪುರಸಭಾ ಉಪಾಧ್ಯಕ್ಷೆ ಸುಜಾತ ಶಶಿಕಿರಣ್, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಪುರಸಭಾ ಸದಸ್ಯರಾದ ಸೌಮ್ಯ ಶೆಟ್ಟಿ, ಶ್ವೇತಾ ಕುಮಾರಿ, ದಿವ್ಯಾ ಜಗದೀಶ್, ನವೀನ್ ಶೆಟ್ಟಿ, ಬಿಜೆಪಿ ಮುಖಂಡರಾದ ಲಕ್ಷ್ಮಣ್ ಪೂಜಾರಿ, ಶಶಿಧರ್ ಅಂಚನ್, ರಾಘವ ಹೆಗ್ಡೆ, ಗಿರೀಶ್ ಕುಮಾರ್, ಪುರಸಭಾ ಮುಖ್ಯಾಧಿಕಾರಿ ಇಂದು.ಎಂ ಎಂಜಿನಿಯರ್ ಪದ್ಮನಾಭ ಗಾಣಿಗ, ಪುರಸಭಾ ಆರೋಗ್ಯ ನಿರೀಕ್ಷಕ ರಾಜೇಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
0 Comments