ಮೂಡುಬಿದಿರೆ : ಸಮರ್ಪಕ ಕಸ ವಿಲೇವಾರಿಯಿಂದ ಮಾತ್ರ ಸ್ವಚ್ಛತೆಯನ್ನು ಕಾಪಾಡಲು ಸಾಧ್ಯವಿಲ್ಲ. ಕಾರ್ಖಾನೆ ಮತ್ತು ವಸತಿ ಸಮುಚ್ಛಯಗಳ ಮಲೀನ ನೀರನ್ನು ನದಿ ಮತ್ತಿತರ ನೀರಿನ ಮೂಲಗಳಿಗೆ ಹರಿಯಬಿಡುವುದರಿಂದ ಈ ನೀರು ಕಲುಷಿತಗೊಳ್ಳುತ್ತಿದೆ. ಇಂತಹ ನೀರನ್ನೇ ಕುಡಿಯುವುದರಿಂದ ಬಹಳಷ್ಟು ಮಾರಕ ರೋಗಗಳು ನಮ್ಮನ್ನು ಭಾದಿಸುತ್ತವೆ. ಹೀಗಾಗಿ ವಸತಿ ಸಮುಚ್ಛಯಗಳ ನಿರ್ಮಾಣದ ಸಂದರ್ಭದಲ್ಲಿ ನೀರಿನ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಮೂಡುಬಿದಿರೆ ಪುರಸಭೆ ವತಿಯಿಂದ ಶುಕ್ರವಾರ ಕನ್ನಡ ಭವನದಲ್ಲಿ ಸ್ವಚ್ಛ ಸರ್ವೇಕ್ಷಣೆಯ ಅಂಗವಾಗಿ ನಡೆಸಿದ ವಿವಿಧ ಸ್ಪರ್ದೆಗಳಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮತ್ತು ಸ್ವಚ್ಛತೆಗಾಗಿ ದುಡಿದವರು ಮತ್ತು ಸಂಘ-ಸಂಸ್ಥೆಗಳ ಗೌರವ ಸಮರ್ಪಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಕೈ ಮತ್ತು ಮನಸ್ಸು ಸ್ವಚ್ಛವಾಗಿರಬೇಕು ಆಗ ಹಲವು ಸಮಸ್ಯೆಗಳು ಪರಿಹಾರವಾಗುತ್ತದೆ. ಕಸವಿಲೇವಾರಿಯ ಜವಾಬ್ದಾರಿಯು ಕೇವಲ ಅಧಿಕಾರಿಗಳಿಗೆ ಮಾತ್ರ ಸೀಮಿತವಾಗದೆ ಪ್ರತಿಯೊಬ್ಬರು ಇದನ್ನು ತಮ್ಮ ಕರ್ತವ್ಯವೆಂದು ಅರಿತುಕೊಳ್ಳಬೇಕು. ಬೆಳೆಯುತ್ತಿರುವ ನಗರ ಮೂಡುಬಿದಿರೆ ಈ ಪರಿಸರವು ಸ್ವಚ್ಛತೆಯಲ್ಲಿ ರಾಷ್ಟçಕ್ಕೆ ಮಾದರಿಯಾಗುವಂತೆ ಆಗಬೇಕಾಗಿದೆ ಆದ್ದರಿಂದ ನಮ್ಮ ಪರಿಸರವನ್ನು ನಾವೇ ಸ್ವಚ್ಛವಾಗಿಡಬೇಕು ಎಂದರು.
ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮರ್ಪಕ ಕಸ ವಿಲೇವಾರಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕಸದಿಂದಾಗಿ ದೇಶದಲ್ಲಿ ಹಲವು ಸಮಸ್ಯೆಗಳು ಉದ್ಭವಿಸುತ್ತವೆ ಎಂಬುದರ ಬಗ್ಗೆ ವಿವಿಧ ದೇಶಗಳ ವಿಜ್ಙಾನಿಗಳು ಈಗಾಗಲೇ ಹೇಳಿದ್ದಾರೆ. ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಜನರು ಕಸ ವಿಲೇವಾರಿಯಲ್ಲಿ ಪುರಸಭೆಗೆ ಸಹಕಾರ ನೀಡುತ್ತಿದ್ದಾರೆ. ಅಲ್ಲದೆ ಕಳೆದ ಒಂದೂವರೆ ವರ್ಷಗಳಿಂದ ಪುರಸಭಾ ಸದಸ್ಯರ ಮಾರ್ಗದರ್ಶನದಂತೆ ೨೩ ವಾರ್ಡುಗಳಲ್ಲೂ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡಿ ಯಶಸ್ವಿಗೊಳಿಸಿದ್ದಾರೆ ಎಂದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್ ಮಾತನಾಡಿದರು. ಪುರಸಭಾ ಉಪಾಧ್ಯಕ್ಷೆ ಸುಜಾತ ಶಶಿಧರ್, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಪುರಸಭೆಯ ಮುಖ್ಯಾಧಿಕಾರಿ ಇಂದು ಎಂ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಪರಿಸರ ಇಂಜಿನಿಯರ್ ಶಿಲ್ಪಾ ಕಾರ್ಯಕ್ರಮ ನಿರ್ವಹಿಸಿದರು. ಪುರಸಭಾ ಸದಸ್ಯರು ಸ್ವಚ್ಛತಾ ರಾಯಭಾರಿಗಳು, ವಿವಿಧ ಸಂಘ-ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದರು.
0 Comments