ಮೂಡುಬಿದಿರೆ: ಸಮೀಪದ ಕೊಡಂಗಲ್ಲುವಿನಲ್ಲಿ ಎರಡು ಬೈಕ್ ಗಳ ನಡುವಿನ ಮುಖಾಮುಖಿ ಢಿಕ್ಕಿಯ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೋರ್ವ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸೋಮವಾರದಂದು ನಡೆದಿದೆ.
ಮೃತ ವ್ಯಕ್ತಿಯಾದ ರವೀಂದ್ರ ಪೂಜಾರಿ(35) ಬೆಳ್ತಂಗಡಿ ತಾಲೂಕಿನ ಹೊಸಂಗಡಿಯ ಪೆರಿಂಜೆ ಸಮೀಪದ ಎದುರುಗುಡ್ಡೆ ನಿವಾಸಿ. ದ್ವಿಚಕ್ರ ವಾಹನದ ಹಿಂಬದಿಯಲ್ಲಿದ್ದ ಇವರ ಸಹೋದರ ರಾಜೇಂದ್ರ ಪೂಜಾರಿ ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರು ಸೋಮವಾರ ಮೂಡಬಿದಿರೆ ಕಡೆಗೆ ತನ್ನ ದ್ವಿಚಕ್ರ ವಾಹನದಲ್ಲಿ ಸಹೋದರನನ್ನು ಕೂರಿಸಿಕೊಂಡು ಮೂಡಬಿದಿರೆ ಕಡೆಗೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಕೊಡಂಗಲ್ಲು ಸಮೀಪ ಎದುರುಗಡೆಯಿಂದ ಬಂದ ಬೈಕ್ ಢಿಕ್ಕಿಯೊಡೆಯಿತು ಎಂದು ತಿಳಿದುಬಂದಿದೆ. ಮೃತರು ತಂದೆ, ಪತ್ನಿ, ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವನ್ನು ಅಗಲಿದ್ದಾರೆ.
ಮೃತ ರವೀಂದ್ರ ಪೂಜಾರಿಯವರ ಎರಡು ಕಣ್ಣುಗಳನ್ನು ಮನೆಯವರು ಸ್ವಇಚ್ಚೆಯಿಂದ ದಾನ ಮಾಡಲು ನಿರ್ಧರಿಸಿದ್ದು, ಈ ಮೂಲಕ ನೋವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
0 Comments