ಮೂಡುಬಿದಿರೆ: ಇನ್ನೇನು ಮೂರು ತಿಂಗಳು ಕಳೆದರೆ ಉಕ್ರೇನ್ನಿಂದ ಎಂಬಿಬಿಎಸ್ ಪದವೀಧರ ವೈದ್ಯನಾಗಿ ಮರಳಿ ತಾಯ್ನಾಡಿಗೆ ಬರುವ ಕನಸು ಕಾಣುತ್ತಿದ್ದ ಮೂಡುಬಿದಿರೆಯ 23ರ ಹರೆಯದ ಪ್ರಣವ್ ಕುಮಾರ್ ರಣರಂಗವಾಗಿರುವ ಉಕ್ರೇನ್ ನೆಲದಿಂದ ಪಾರಾಗಿ ಸುರಕ್ಷಿತವಾಗಿ ಶುಕ್ರವಾರ ಹುಟ್ಟೂರಿನ ಮಾಸ್ತಿಕಟ್ಟೆ ವಿವೇಕಾನಂದ ನಗರದ ನಿವಾಸಿಗಳಾದ ಹೆತ್ತವರನ್ನು ಸೇರಿಕೊಂಡಿದ್ದಾರೆ.
ಏನಾಗುತ್ತದೋ ಎಂಬ ಆತಂಕದಲ್ಲೇ ದಿನಕಳೆದಿದ್ದ ಹೆತ್ತವರು ಶುಕ್ರವಾರ ಬೆಳಿಗ್ಗೆ 8.45ರ ವೇಳೆಗೆ ಮಗ ಸುರಕ್ಷಿತವಾಗಿ ಮರಳಿದ್ದನ್ನು ಕಂಡು ನಿಟ್ಟುಸಿರುಬಿಟ್ಟಿದ್ದಾರೆ.
ಕನ್ನಡಿಗ ನವೀನ್ ಉಕ್ರೇನ್ನಲ್ಲಿ ಸಮರದಾಳಿಗೆ ಬಲಿಯಾದ ಸ್ಥಳಕ್ಕೆ ಪಕ್ಕದಲ್ಲೇ ಉಳಿದುಕೊಂಡಿದ್ದ ಪ್ರಣವ್ಅವರಿಗೆ ನವೀನ್ ಅವರ ಬಳಗವೂ ನೋಡಿ ಪರಿಚಯವಿತ್ತು. ಆದರೆ ಪ್ರಣವ್ ಸಂಗಡಿಗರ ಜತೆ ಉಕ್ರೇನ್ ತೊರೆದು ಬಂದ ಹಾದಿಯಲ್ಲಿ ಒಂದು ಗಂಟೆಯೊಳಗೆ ಕ್ಷಿಪಣಿದಾಳಿಗೆ ನವೀನ್ ಬಲಿಯಾದರು ಎಂಬ ಸುದ್ದಿ ಬಂದಾಗ ಪ್ರಣವ್ ಮೆಟ್ರೋ ರೈಲಿನಲ್ಲಿ ಆತಂಕದಿಂದಲೇ ಪೋಲ್ಯಾಂಡಿನತ್ತ ಮುಖ ಮಾಡಿದ್ದರು. ಮೊದಲು ದೂರದಲ್ಲಿ ಎಲ್ಲೋ ಸ್ಪೋಟದ ಸದ್ದು , ದಿನ ಕಳೆದಂತೆ ಆಸುಪಾಸಿನಲ್ಲಿ ಕೇಳಿ ಬಂದಾಗ ಆತಂಕವಾಗಿತ್ತು. ವಿಶ್ವದಲ್ಲೇ ಅತ್ಯಂತ ಆಳದಲ್ಲಿ ಮೆಟ್ರೋ ರೈಲು ಸುರಂಗ ಹೊಂದಿರುವ ಉಕ್ರೇನ್ನ ಆ ನಿಲ್ದಾಣಗಳು, ಬಂಕರ್ಗಳು ಸಮರ ತೀವ್ರಗೊಂಡಂತೆ ಜನರಿಂದ ತುಂಬಿಕೊಂಡದ್ದು, ಆಹಾರದ ಸಮಸ್ಯೆ, ಕೊರೆವ ಚಳಿ ಅದರ ನಡುವೆ ತಾಯ್ನಾಡಿನತ್ತ ಮುಖಮಾಡಿ ಹೊರಟಾಗ ಎರಡು ದಿನ ಮೊದಲು ಬೆಕೆಟೋವಾದಲ್ಲಿ ಬಂಕರಿನಲ್ಲಿ ಸಿಕ್ಕಿದ್ದ ನವೀನ್ ಇನ್ನಿಲ್ಲ ಎಂದು ರೂಂಮೇಟ್ಸ್ಗಳು ತಿಳಿಸಿದ ಸುದ್ದಿಯಿಂದ ಬೇಸರವಾಯಿತು ಎಂದರು ಪವನ್.
ಬಹುತೇಕ ನಿಂತುಕೊಂಡೇ ಹದಿನೇಳು ಗಂಟೆಗಳ ರೈಲು ಪ್ರಯಾಣ, ಅದಕ್ಕೂ ಮೊದಲು ಕಾಲ್ನಡಿಗೆಯಲ್ಲೇ ಬಹುದೂರ ನಡೆದು ರೈಲು ಹತ್ತಿದ್ದು, ಅಲ್ಲಿನ ನೂಕು ನುಗ್ಗಲು, ಪೋಲ್ಯಾಂಡಿನಿಂದ ಭಾರತೀಯ ಕೇಂದ್ರ ಸರಕಾರದ ಜೆ.ಎನ್.ಸಿಂಗ್, ಅಲ್ಲಿನ ದೇಶೀ ರಾಯಭಾರಿಗಳ ತಂಡ ಟಕರ್ ಮಾರ್ಗವಾಗಿ ದೆಹಲಿಗೆ ವಿಮಾನದಲ್ಲಿ 250 ಮಂದಿಯನ್ನು ಸುರಕ್ಷಿತವಾಗಿ ಹೊತ್ತು ತಂದದ್ದು, ದೆಹಲಿ ಕನ್ನಡ ಭವನದಲ್ಲಿ ಆತಿಥ್ಯ, ವಿಶೇಷ ಕಾಳಜಿಯಿಂದ ಕರ್ನಾಟಕ ಸರಕಾರ 16 ಕನ್ನಡಿಗರನ್ನು ಬೆಂಗಳೂರಿಗೆ ಮತ್ತೆ ವಿಮಾನದಲ್ಲಿ ಕರೆತಂದದ್ದು ಎಲ್ಲವೂ ಉಚಿತ ನೆಲೆಯಲ್ಲಿ. ಅದ್ಯಾವುದನ್ನೂ ಮರೆಯಲಾಗದು ಎನ್ನುತ್ತಾರೆ ಪ್ರಣವ್.
ಮೇ 22ಕ್ಕೆ ಫೈನಲ್ ಎಕ್ಸಾಮ್ ನಿಗದಿಯಾಗಿತ್ತು. ಆರಂಭದಲ್ಲಿ ಯುದ್ಧದ ತೀವ್ರತೆ ಗೊತ್ತಾಗಲಿಲ್ಲ. ಬಳಿಕ ಎಂಬೆಸಿ ಕಡೆಯಿಂದಲೂ ಒತ್ತಡ ಹೆಚ್ಚಾಗಿ ಉಕ್ರೇನ್ ತೊರೆಯುವುದು ಅನಿವಾರ್ಯವಾದಾಗ ದೇಶದಲ್ಲಿ ಕಫ್ಯೂರ ಆಹಾರಕ್ಕಾಗಿ ಪರದಾಟ, ಆತಂಕ ಎಲ್ಲವೂ ತೀವ್ರಗೊಂಡಿತ್ತು. ಮಾಚ್೯ 2ರಂದು ಬೆಳಿಗ್ಗೆ 8 ಮಂದಿ ಕನ್ನಡಿಗರ ಸಹಿತ 20 ಮಂದಿಯ ತಂಡ ಪಶ್ಚಿಮ ಉಕ್ರೇನ್ನತ್ತ ಹೊರಟು ಲಿವಿವ್ ಮೂಲಕ ಪೋಲೆಂಡ್ ತಲುಪಿದ್ದು ಸಾಹಸವೇ ಎಂದರು ಪ್ರಣವ್
ಉಕ್ರೇನ್ನಲ್ಲಿ ಭಾರತೀಯರಿಗೆ ವಿಶೇಷವಾಗಿ ಎಲ್ಲ ಮಹಿಳೆಯರ ಬಗ್ಗೆಯೂ ವಿಶೇಷ ಗೌರವವಿದೆ. ಇನ್ನೂ 600 ಮಂದಿ ವಿದ್ಯಾಥಿರ್ಗಳು ಉಕ್ರೇನ್ನಲ್ಲಿ ಸಿಲುಕಿದ್ದಾರೆ. ಅವರ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾರೆ. ಯುದ್ಧ ಭೂಮಿಯಿಂದ ಸಮರಕ್ಕೆ ಸಾಕ್ಷಿಯಾಗಿದ್ದು ಮರಳಿದ್ದೇನೆ. ತನ್ನ ಶೈಕ್ಷಣಿಕ ಭವಿಷ್ಯದ ಬಗ್ಗೆ ಸರಕಾರ ಈ ಬಗ್ಗೆ ಯಾವ ನಿಲುವು ತಕೊಳ್ಳುತ್ತೋ ಎನ್ನುವ ಬಗ್ಗೆಯೂ ಆತಂಕದಲ್ಲಿದ್ದಾರೆ.
ತಾವು ನಂಬಿದ ಪುತ್ತಿಗೆಯ ಶ್ರೀ ಸೋಮನಾಥೇಶ್ವರ ಹಾಗೂ ಮೂಡುಬಿದಿರೆಯ ಶ್ರೀ ಹನುಮಂತ ದೇವರು ಮಗನನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ ಎಂದು ನಿರಾಳತೆಯಿಂದ ಹೇಳಿಕೊಂಡ ಹೆತ್ತವರಾದ ಶ್ರೀನಿವಾಸ ನಾಯಕ್ ಯಶೋಧಾ ದಂಪತಿ ಮಗನನ್ನು ಮನೆಯಂಗಳಲ್ಲಿ ಕಾಣುತ್ತಿದ್ದಂತೆ ಆರತಿ ಎತ್ತಿ ಬರಮಾಡಿಕೊಂಡಿದ್ದಾರೆ. ಮಗನ ಘಟಿಕೋತ್ಸವಕ್ಕೆ ಉಕ್ರೇನ್ಗೆ ಹೋಗಬೇಕೆಂದು ಪತಿ ಬಯಸಿದ್ದರು. ಈಗಿನ ಪರಿಸ್ಥಿತಿಯಲ್ಲಿ ಮಗ ಸುರಕ್ಷಿತವಾಗಿ ಮರಳಿ ಬಂದಿದ್ದಾನೆ. ಅಷ್ಟೇ ಸಾಕು ಎಂದು ಅರೋಗ್ಯದ ನಡುವೆಯೂ ಪ್ರಣವ್ ತಾಯಿ ಯಶೋಧಾ ಧನ್ಯತೆಯಿಂದ ನಕ್ಕರು.
0 Comments