ಮೂಡುಬಿದಿರೆ: ರಾಷ್ಟ್ರವನ್ನು ಸರಿಯಾಗಿ ಪ್ರಶ್ನಿಸಿದ ಚಿಂತಕ ಮಹಾತ್ಮ ಗಾಂಧೀಜಿ ಎಂದು ಮಂಗಳೂರು ವಿಶ್ವವಿದ್ಯಾಲಯದ ನೆಹರು ಚಿಂತನ ಕೇಂದ್ರದ ಪ್ರಭಾರ ನಿರ್ದೇಶಕ ಪ್ರೊ ರಾಜಾರಾಮ್ ತೋಳ್ಪಾಡಿ ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ನೆಹರು ಚಿಂತನ ಕೇಂದ್ರ, ಗಾಂಧಿ ಅಧ್ಯಯನ ಕೇಂದ್ರ ಮತ್ತು ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಜಂಟಿ ಸಹಯೋಗದಲ್ಲಿ ಆಯೋಜಿಸಿದ್ದ `ಗಾಂಧಿ ಚಿಂತನ ಯಾನ-2022' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಗಾಂಧೀಜಿಯವರು ರಾಷ್ಟçವನ್ನು ಸರಿಯಾದ ರೀತಿಯಲ್ಲಿ ಪ್ರಶ್ನಿಸುವ ಚಿಂತಕರಾಗಿದ್ದರು. ಹಲವು ಕಾರಣಗಳಿಂದ ಗಾಂಧೀಜಿ ನಮಗೆ ಮಾದರಿಯಾಗಿದ್ದಾರೆ. ಪ್ರಸ್ತುತ ಕಾಲ ಘಟ್ಟದಲ್ಲಿ ಗಾಂಧೀಜಿಯವರ ಧೋರಣೆಗಳ ಬಗ್ಗೆ ಜನರಲ್ಲಿ ನಿರ್ಲಕ್ಷ್ಯವಿದೆ. ಈ ನಿಟ್ಟಿನಲ್ಲಿ ವ್ಯಕ್ತವಾಗಿ ಅವ್ಯಕ್ತವಾಗಿ ಗಾಂಧೀಜಿ ಏಕೆ ಬೇಕು ಎನ್ನುವುದರ ಅರಿವು ಮೂಡಿಸಬೇಕಿದೆ ಎಂದರು.
ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಗಾಂಧಿ ಅಹಿಂಸೆ ಮೂಲಕ ಹಿಂಸೆ ಗೆದ್ದವರು. ಗಾಂಧಿ ಬದುಕಿನ ಮೌಲ್ಯವನ್ನು ಯುವಜನತೆಗೆ ತಿಳಿಸಬೇಕು. ಭಾರತದಲ್ಲಿ ವ್ಯಕ್ತಿಯನ್ನು ಪೂಜಿಸುವುದು ಮಾತ್ರವಲ್ಲ ತತ್ವಗಳನ್ನು ಪೂಜಿಸುವವರು ಇದ್ದಾರೆ. ಕೆಲವೊಮ್ಮೆ ವ್ಯಕ್ತಿ ತತ್ವ ಒಂದೇ ಆಗಿರುತ್ತದೆ. ಅದಕ್ಕೆ ಉತ್ತಮ ಉದಾಹರಣೆ ಗಾಂದಿ ಅವರ ಚಿಂತನೆಗಳ ಅರಿವಿಲ್ಲದೆ ಇದ್ದರೆ ಎಷ್ಟು ಚಿಂತನೆ ಮಾಡಿದರೂ ವ್ಯರ್ಥ ಎಂದರು.
ವಿಚಾರಗೋಷ್ಠಿಯಲ್ಲಿ `ಸತ್ಯಾಗ್ರಹ ಮತ್ತು ಸ್ವರಾಜ್ಯ' ಕುರಿತು ಮಾತನಾಡಿದ ಶ್ರೀರಂಗಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಮಹಮ್ಮದ್ ಮುಸ್ತಫಾ, ಗಾಂಧಿ ರಾಜಕೀಯ ಮತ್ತು ನೀತಿಶಾಸ್ತ್ರ ಬೇರೆ ಎನ್ನುವುದನ್ನು ಒಪ್ಪಿಕೊಂಡಿಲ್ಲಾ. ವ್ಯಕ್ತಿ ಶ್ರೇಷ್ಠ ಎನ್ನುವುದು ಅವರ ವಿಚಾರವಲ್ಲ, ಆತ ಸಮಾಜದ ಒಂದು ಭಾಗ ಯಾವುದೇ ಬದಲಾವಣೆ ಸಮಾಜದಲ್ಲಿ ಆಗಬೇಕಾದರೆ ಅದು ವ್ಯಕ್ತಿಯಿಂದ ಮಾತ್ರ ಸಾಧ್ಯ ಎಂದು ನಂಬಿದವರು. ಯಾವ ಪರಿವರ್ತನೆಯನ್ನು ಸಮಾಜದಲ್ಲಿ ಬಯಸುತ್ತೇವೆಯೋ ಮೊದಲು ಆ ಸುಧಾರಣೆ ನಮ್ಮಲ್ಲಿ ಆಗಬೇಕು ಎಂಬ ಬಯಕೆ ಹೊಂದಿದವರು ಗಾಂಧೀಜಿ ಎಂದರು.
`ಲೋಕಹಿತ ಚಿಂತನೆ ಮತ್ತು ಮಹಾತ್ಮ' ವಿಷಯದ ಬಗ್ಗೆ ಮಾತನಾಡಿದ ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ ನಿತ್ಯಾನಂದ ಬಿ.ಶೆಟ್ಟಿ ಮಾತನಾಡಿ ರಾಜಕೀಯ ಮತ್ತು ಚಿಂತನೆ ಒಂದೇ ಎಂದು ಭಾವಿಸಿದವರು ಬಾಪುಜೀ. ಅವರು ಸಮಾಜದ ಆಗು-ಹೋಗುವನ್ನು ಸದಾ ಪ್ರಶ್ನಿಸುವವರಾಗಿದ್ದರು ಇವರ ಆಶಯ ಅರಿಯದವರು ಇವತ್ತು ಅವರ ಬಗ್ಗೆ ಅವಹೇಳನ ಮಾಡುತ್ತಿರುವುದು ಸಲ್ಲದು ಎಂದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಪದವಿ ಕಾಲೇಜಿನ ಪ್ರಾಶುಂಪಾಲ ಡಾ. ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
0 Comments