ವಾಲ್ಪಾಡಿಯ ಸುನೀತಾ ಭಂಡಾರಿ ನ್ಯಾಯಾಧೀಶರಾಗಿ ನೇಮಕ

ಜಾಹೀರಾತು/Advertisment
ಜಾಹೀರಾತು/Advertisment

 


ವಾಲ್ಪಾಡಿ :ಬಡತನದಲ್ಲೇ ಬೆಳೆದು, ಕಷ್ಟದ ಜೀವನದಲ್ಲೇ ವಿದ್ಯಾಭ್ಯಾಸ ಮುಂದುವರಿಸಿ ವಕೀಲ ವೃತ್ತಿಯನ್ನು ಆಯ್ಕೆ ಮಾಡಿಕೊಂಡ ಗ್ರಾಮೀಣ ಪ್ರದೇಶದ ಪ್ರತಿಭೆಯೊಂದು ಇದೀಗ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದು ಮೂಡುಬಿದಿರೆ ಸಹಿತ ಅವರ ಹುಟ್ಟೂರು ವಾಲ್ಪಾಡಿ ಗ್ರಾಮದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ. 

ವಾಲ್ಪಾಡಿ ಗ್ರಾಮದ ಆನೆಗುಡ್ಡೆ ನಿವಾಸಿ ದಿ. ಮಾಧವ ಭಂಡಾರಿ-ಯಮುನ ಭಂಡಾರಿ ದಂಪತಿಯ ಪುತ್ರಿಯಾಗಿರುವ ಸುನೀತಾ ಭಂಡಾರಿ ನ್ಯಾಯಾಧೀಶರಾಗಿ ಆಯ್ಕೆಯಾದವರು. 

ಈ ಬಡಕುಟುಂಬದಲ್ಲಿ ಮೂವರು ಹೆಣ್ಣು ಮಕ್ಕಳ ಪೈಕಿ ಸುನೀತಾ ಭಂಡಾರಿ ಕೊನೆಯವರು. ತನ್ನ ಎರಡನೇ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಸುನೀತಾ ಭಂಡಾರಿ, ಬಡತನದಲ್ಲೇ ಬೆಳೆದು ಏನಾದರೂ ಸಾಧಿಸಬೇಕೆಂಬ ಛಲ ಹೊಂದಿದ್ದವರು. 

ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ವಾಲ್ಪಾಡಿ ಪೆರಿಬೆಟ್ಟು ಶಾಲೆ, ಪ್ರೌಢ ಶಿಕ್ಷಣವನ್ನು ಧರೆಗುಡ್ಡೆ ಪ್ರೌಢ ಶಾಲೆ ಹಾಗೂ ಪದವಿ ಶಿಕ್ಷಣವನ್ನು ಕಾರ್ಕಳದ ಬೋರ್ಡ್ ಹೈಸ್ಕೂಲ್ ನಲ್ಲಿ ಮುಗಿಸಿ, ಮಂಗಳೂರು ಎಸ್.ಡಿ.ಎಂ. ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಮುಗಿಸಿದರು. 

ಬಳಿಕ ಮೂಡುಬಿದಿರೆಯ ಖ್ಯಾತ ನ್ಯಾಯವಾದಿ ಪ್ರವೀಣ್ ಲೋಬೋ ಅವರ ಸಹಾಯಕರಾಗಿ ವಕೀಲ ವೃತ್ತಿ ನಡೆಸುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಮೂಡುಬಿದಿರೆಯಲ್ಲೇ ವಕೀಲ ವೃತ್ತಿ ಮಾಡುತ್ತಿದ್ದಾರೆ.

ಈ ನಡುವೆ ಪ್ರವೀಣ್ ಲೋಬೋ ಹಾಗೂ ಅವರ ಪತ್ನಿ ವಿಜೇತ ಪಿಂಕಿ ಡೇಸಾ ಅವರ ಪ್ರೋತ್ಸಾಹ ಹಾಗೂ ಮಾರ್ಗದರ್ಶನದಲ್ಲಿ ನ್ಯಾಯಾಧೀಶ ಹುದ್ದೆಯ ಪರೀಕ್ಷೆ ಬರೆದರು. ವಿಜೇತ ಅವರು ಈ ಹಿಂದೆ ಕುಂದಾಪುರ ಮತ್ತು ಕೋಲಾರದಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿರುವುದರಿಂದ ಅವರ ಮಾರ್ಗದರ್ಶನವು ಸುನೀತಾ ಅವರಿಗೆ ಸಹಕಾರಿಯಾಯಿತು. 

ಪ್ರವೀಣ್ ಲೋಬೋ ಅವರಿಗೂ ಗ್ರಾಮೀಣ ಪ್ರದೇಶದ ವಕೀಲರೋರ್ವರನ್ನು ನ್ಯಾಯಾಧೀಶರನ್ನಾಗಿ ಮಾಡುವ ಹಠವಿತ್ತು. ಆ ಎಲ್ಲಾ ಸಾಧನೆ, ಹಠದ ಫಲವಾಗಿ ಇದೀಗ ಸುನೀತಾ ಭಂಡಾರಿ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದು, ಮೂಡುಬಿದಿರೆ ಜನತೆ ಸಂತಸ ಪಡುವಂತಾಗಿದೆ. ಸುನೀತಾ ಭಂಡಾರಿ ಅವರ ಜತೆಗೆ ಪ್ರವೀಣ್ ಲೋಬೋ ಕೂಡಾ ಅಭಿನಂದನಾರ್ಹರಾಗಿದ್ದಾರೆ.

Post a Comment

0 Comments