ಮೂಡುಬಿದಿರೆ: ರೋಟರಿ ವಿದ್ಯಾ ಸಂಸ್ಥೆಯಲ್ಲಿ ಭಾನುವಾರ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಪ್ರವೀಣ್ ಚಂದ್ರ ಜೈನ್ ಮಾತನಾಡಿ, ಕನ್ನಡ ನಾಡುನುಡಿ ನಮ್ಮ ಹೆಮ್ಮೆಯಾಗಿದ್ದು, ಕನ್ನಡ ನಿತ್ಯೋತ್ಸವವಾಗಲಿ. ಪ್ರತಿಯೊಬ್ಬ ವಿದ್ಯಾರ್ಥಿಯ ಹೃದಯದಲ್ಲಿ ನಾಡುನುಡಿ ಧ್ವನಿಸಲಿ ಎಂದರು.
ಮುಖ್ಯ ಅತಿಥಿ, ಧವಳಾ ಮಹಾವಿದ್ಯಾಲಯದ ನಿವೃತ್ತ ಉಪನ್ಯಾಸಕ ಹಾಗೂ ವಾಗ್ಮಿ ಡಾ. ಪುಂಡಿಕಾಯಿ ಗಣಪಯ್ಯ ಭಟ್ ಕನ್ನಡ ಭಾಷೆಯ ವೈಶಿಷ್ಟ್ಯ, ಕರ್ನಾಟಕದ ಇತಿಹಾಸ, ಶಾಸನಗಳು ಹಾಗೂ ಕವಿ ಪರಂಪರೆಯನ್ನು ವಿವರಿಸಿದರು. ಕನ್ನಡ ಸಂಸ್ಕೃತಿ ನಮ್ಮ ಸ್ಮೃತಿಯಲ್ಲಿದ್ದು, ಭಾಷಾ ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು. ಕನ್ನಡ ರತ್ನ ಪ್ರಶಸ್ತಿ ಸ್ವೀಕರಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆ, ಭುವನೇಶ್ವರಿಗೆ ಪುಷ್ಪನಮನ, ಕನ್ನಡ ನುಡಿ ನಮನ, ಕನ್ನಡ ರತ್ನ ಪ್ರಶಸ್ತಿ ಪ್ರದಾನ ಹಾಗೂ ಶಾಲಾ ವಾರ್ಷಿಕ ಸಂಚಿಕೆ ‘ಸೃಷ್ಟಿ’ ಬಿಡುಗಡೆ ನಡೆಯಿತು.
ರೋಟರಿ ಕೇಂದ್ರೀಯ ಶಾಲೆಯ ಪ್ರಾಂಶುಪಾಲೆ ಲಕ್ಷ್ಮಿ ಪಿ. ಮರಾಠೆ, ಶಾಲಾ ಆಡಳಿತಾಧಿಕಾರಿ, ವ್ಯವಸ್ಥಾಪಕರು, ಸಂಯೋಜಕರು, ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ರೋಟರಿ ಕಾಲೇಜಿನ ಪ್ರಾಂಶುಪಾಲ ರವಿಕುಮಾರ್ ಸ್ವಾಗತಿಸಿದರು. ಮುಖ್ಯೋಪಾಧ್ಯಾಯಿನಿ ತಿಲಕಾ ಅನಂತವೀರ ಜೈನ್ ವಂದಿಸಿದರು. ಶಿಕ್ಷಕಿ ಮಮತಾ ಎಸ್. ನಿರೂಪಿಸಿದರು.
ಕೆಂಪು-ಹಳದಿ ಪತಾಕೆಗಳಿಂದ ಅಲಂಕೃತಗೊಂಡ ಅಮರಾವತಿ ಸಭಾಂಗಣದಲ್ಲಿ ನಾಡುನುಡಿಯ ವೈಭವ ಅನುರಣಿಸಿತು.

0 Comments