ದೇಶೀ ಭತ್ತದ ತಳಿ ಸಂರಕ್ಷಣೆ : ಮೂಡುಬಿದಿರೆಯ ಅಸ್ಮಾ ಬಾನು ಅವರಿಗೆ ಕೇಂದ್ರ ಸರಕಾರದ ಗೌರವ
ಮೂಡುಬಿದಿರೆ : ಬೀಜ ಸಂರಕ್ಷಣೆ, ದೇಶೀ ಭತ್ತ ತಳಿ ಅಭಿವೃದ್ಧಿಗಾಗಿ ಕೇಂದ್ರ ಸರಕಾರ ನೀಡುವ 'ಪ್ಲಾಂಟ್ ಜಿನೋಮ್ ಸೇವಿಯರ್ ಫಾರ್ಮರ್ ರೆಕಗ್ನಿಷನ್' ಪ್ರಶಸ್ತಿಯನ್ನು ಮೂಡುಬಿದಿರೆಯ ನಿವಾಸಿ, ಶಿಕ್ಷಕಿಯಾಗಿರುವ ಅಸ್ಮಾ ಬಾನು ಅವರು ಪಡೆದಿದ್ದಾರೆ.
ಅಸ್ಮಾ ಬಾನು ಮೂಲತಃ ಮೂಡುಬಿದಿರೆ ಕೋಟೆಬಾಗಿಲಿನ ಚಾಮುಂಡಿಬೆಟ್ಟದವರಾಗಿದ್ದು ಕಾರ್ಕಳ ತಾಲೂಕು ಪೆರ್ವಾಜೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶಿಕ್ಷಕ ವೃತ್ತಿಯ ಜವಾಬ್ದಾರಿಯ ನಡುವೆಯೂ ಕೃಷಿ ಮೇಲಿನ ವಿಶೇಷ ಆಸಕ್ತಿಯಿಂದ ಅಪರೂಪದ ಭತ್ತದ ತಳಿಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡವರು.
ಕೆಲವು ತಳಿಗಳಿಂದ ಆರಂಭಗೊಂಡ ಇವರ ಕೃಷಿ ಪಯಣ ಇಂದು ಸಾವಿರಕ್ಕೂ ಅಧಿಕ ಭತ್ತದ ತಳಿಗಳ ಸಂಗ್ರಹ ಮತ್ತು ಸಂರಕ್ಷಣೆಯ ಹಂತಕ್ಕೆ ತಲುಪಿದೆ.
ಸುಮಾರು 1580 ಕ್ಕೂ ಅಧಿಕ ವೈವಿಧ್ಯಮಯ ಭತ್ತದ ತಳಿಗಳನ್ನು ಬೆಳೆಸಿ ಸಂರಕ್ಷಿಸಿದ್ದಾರೆ.ಇದರಲ್ಲಿ 50 ಕ್ಕೂ ಹೆಚ್ಚು ಕುಚಲಕ್ಕಿ ತಳಿಗಳೂ ಸೇರಿದೆ.ಕಪ್ಪು ಅಕ್ಕಿಯ ಭತ್ತ, ಸುಗಂಧಭಕ್ತದ ಗಂಧಸಾಲೆ,ಕೆಂಪಕ್ಕಿಯ ರಕ್ತಶಾಲಿ ಸೇರಿದಂತೆ ಹಲವು ಅಪರೂಪದ ತಳಿಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಸುತ್ತಿದ್ದಾರೆ.
ಪಾಳುಬಿದ್ದ ಹಾಗೂ ಗುತ್ತಿಗೆಗೆ ಪಡೆದ ಜಮೀನುಗಳನ್ನು ಕೃಷಿಗೆ ಬಳಸಿಕೊಂಡು ರಾಸಾಯನಿಕ ಗೊಬ್ಬರಗಳಿಂದ ದೂರವಿದ್ದು ಸಾವಯವ ಕೃಷಿಗೆ ಆದ್ಯತೆ ನೀಡುತ್ತಿದ್ದಾರೆ.ಕೊಯ್ಲಿನ ಬಳಿಕ ಬೀಜಗಳನ್ನು ಸಂಗ್ರಹಿಸಿ ಮುಂದಿನ ಬೆಳೆಗೆ ಬಳಸುವ ಜೊತೆಗೆ ಆಸಕ್ತ ರೈತರಿಗೂ ಹಂಚುತ್ತಿದ್ದಾರೆ.
ನಶಿಸುತ್ತಿರುವ ಸಾಂಪ್ರದಾಯಿಕ ಭತ್ತದ ತಳಿಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುತ್ತಿರುವ ಇವರ ಸಾಧನೆಯನ್ನು ಗುರುತಿಸಿ ಕೇಂದ್ರ ಸರಕಾರವು ಈ ಪ್ರಶಸ್ತಿ ನೀಡಿ ಗೌರವಿಸಿದೆ.
ಇವರ ಕೃಷಿ ಸಾಧನೆಗೆ ಈಗಾಗಲೇ ಹಲವು ಗೌರವಗಳು ಸಂದಿದ್ದು ಕನ್ನಡಪ್ರಭ ಹಾಗೂ ಏಷ್ಯಾನೆಟ್ ಕೊಡಮಾಡುವ ' ರೈತರತ್ನ' ಪ್ರಶಸ್ತಿ, ಕುಂದಾಪುರ ಅಪ್ಪಣ್ಣ ಹೆಗ್ಡೆ ಕೃಷಿ ಪ್ರಶಸ್ತಿ,ಜಿಲ್ಲಾ ಮಟ್ಟದ ಉತ್ತಮ ರೈತ ಪ್ರಶಸ್ತಿ, ಸೂಪರ್ ಸ್ಟಾರ್ ರೈತ ಗೌರವ,ಸೀಡ್ ಎಸ್ ಸಿ 2025 ಪ್ರಶಸ್ತಿ ,ನೇಷನ್ ಬಿಲ್ಡರ್ ಅವಾರ್ಡ್ ಸಹಿತ ಹಲವು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ಶೃಂಗೇರಿ ಮಠ ಹಾಗೂ ಉಡುಪಿ ಶ್ರೀಕೃಷ್ಣ ಮಠದಿಂದಲೂ ಗೌರವಕ್ಕೆ ಪಾತ್ರರಾಗಿದ್ದಾರೆ.
ಕಾರ್ಕಳ ಸಾಗರ್ ಹೊಟೆಲ್ ಮೆನೇಜರ್ ಆಗಿರುವ ಅಬೂಬಕ್ಕರ್ ಅವರ ಪತ್ನಿಯಾಗಿರುವ ಅಸ್ಮಾ ಬಾನು ಪ್ರಸ್ತುತ ಸಾಣೂರು ಮುರತಂಗಡಿಯಲ್ಲಿ ವಾಸವಾಗಿದ್ದಾರೆ.

0 Comments