*ಮೂಡುವೇಣುಪುರದಲ್ಲಿ 90ನೇ ಕಾರ್ತಿಕ ದೀಪೋತ್ಸವ ಸಂಭ್ರಮ*
ಮೂಡುಬಿದಿರೆ: ಇಲ್ಲಿನ ಮೂಡುವೇಣುಪುರ ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಶ್ರೀ ಹನುಮಂತ ದೇವಸ್ಥಾನದ ವರ್ಷಾವಧಿ ಕಾರ್ತಿಕ ದೀಪೋತ್ಸವ ಸಂಭ್ರಮ ಐದು ದಿನಗಳ ಕಾಲ ಸಮಾಜ ಬಾಂಧವರು ಮತ್ತು ಭಜಕರ ಪಾಲ್ಗೊಳ್ಳುವಿಕೆಯೊಂದಿಗೆa ಸಂಭ್ರಮದಿಂದ ನೆರವೇರಿತು. ಮಹೋತ್ಸವವು ಈ ಬಾರಿ 90 ನೇ ವರ್ಷದ ಸಂಭ್ರಮ ಕಂಡಿತು.
ಉತ್ಥಾನ ದ್ವಾದಶಿಯ ಬಳಿಕ ತನ್ನ ಎರಡು ಪೇಟೆ ಸವಾರಿಯ ಪೈಕಿ ಮೊದಲ ಪೇಟೆ ಸವಾರಿಗೆ ಹೊರಟ ಪಟ್ಟದ ಮೂಡುವೇಣುಪುರದೊಡೆಯ, ಉತ್ಸವ ಶ್ರೀ ಗೋಪಾಲ ಕೃಷ್ಣ ದೇವರ ಬಿಂಬಗಳನ್ನು ವನ ಮಂಟಪದಲ್ಲಿ ಮಂಗಳವಾರ ಹವನಾದಿ ಅಭಿಷೇಕಗಳ ಬಳಿಕ ಅಂಲಂಕರಿಸಿ ಮಂಗಳಾರತಿ ನಡೆಯಿತು. ಪ್ರಸಾದ ವಿತರಣೆಯೊಂದಿಗೆ ವನ ಭೋಜನವೂ ನಡೆಯಿತು.
ಸಂಜೆ ಪೇಟೆ ಸವಾರಿಗೆ ಅಲಂಕೃತ ರಜತ ಲಾಲ್ಕಿಯಲ್ಲಿ ವೈರಮುಡಿ ಕಿರೀಟ ಧರಿಸಿದ ಪಟ್ಟದ ಶ್ರೀ ವೆಂಕಟರಮಣ ಮತ್ತು ರಜತ ಪಲ್ಲಕ್ಕಿಯಲ್ಲಿ ಶ್ರೀ ಗೋಪಾಲಕೃಷ್ಣ ದೇವರ ಬಿಂಬಗಳನ್ನು ಪೇಟೆಯ ಶ್ರೀ ಹನುಮಂತ ದೇವಸ್ಥಾನಕ್ಕೆ ತರಲಾಯಿತು. ಅಲ್ಲಿ ವರ್ಷದ ವಿಶೇಷ ರಂಗಪೂಜೆಯನ್ನು ಭಜಕರು ಕಣ್ತುಂಬಿಕೊಂಡು ಅಭಯ ಪ್ರಸಾದ ಸ್ವೀಕರಿಸಿದರು.
ನಂತರ ಮಂಗಲ ವಾದ್ಯ ಘೋಷ, ಬಿರುದಾವಳಿ, ಹುಲ್ಪೆಗಳ ಜತೆ ಹೊರಟ ಪೇಟೆ ಸವಾರಿ ರಾತ್ರಿ ಪೂರ್ತಿ ಪೇಟೆಯ ರಾಜ ಬೀದಿಯಲ್ಲಿ ಸಾಗಿ ಕಟ್ಟೆ ಪೂಜೆಗಳು ನಡೆದವು.
ಬುಧವಾರ ಪ್ರಾತಃ ಕಾಲ ಮರಳಿ ಉತ್ಸವ ಶ್ರೀ ದೇವಳದ ಪ್ರಾಂಗಣ ಸೇರಿದ ಬಳಿಕ ಅಷ್ಟಾವಧಾನ ಸೇವೆ ಸಹಿತ ವಸಂತ ಪೂಜೆ ನಡೆಯಿತು.
ಅಪರಾಹ್ನ ಮತ್ತೆ ಅವಭೃತ ಉತ್ಸವ ಪೇಟೆಯಲ್ಲಿ ನಡೆಯಿತು. ಬಣ್ಣಗಳ ಜತೆ ಓಕುಳಿಯಾಡುತ್ತಾ ಬಣ್ಣದ ನೀರಿನ ಜಳಕದಲ್ಲಿ ಭಾರೀ ಸಂಖ್ಯೆಯ ಭಜಕರು ಉತ್ಸವದಲ್ಲಿ ಜತೆ ಹೆಜ್ಜೆ ಹಾಕಿದರು. ಸಂಜೆ ಮತ್ತೊಂದು ಸುತ್ತಿನ ಪೇಟೆ ಉತ್ಸವ, ನಡೆದು ಮಹಾಮಂಗಳಾರತಿಯೊಂದಿಗೆ ಮಹೋತ್ಸವ ಸಮಾಪನ ಕಂಡಿತು.
ಕಾರ್ತಿಕ ಶುದ್ಧ ದಶಮಿಯಂದು ಒಂದು ತಿಂಗಳ ಅವಧಿಗೆ ನಡೆದ ನಗರ ಭಜನಾ ಸಂಕೀರ್ತನೆಯ ಮಂಗಲೋತ್ಸವ ಕಳೆದ ನ 20 ರ ಶುಕ್ರವಾರ ನಡೆದಿತ್ತು. ಅಂದು ಪ್ರಾತಃ ಕಾಲ ಹಾಗೂ ಸಂಜೆ ನಗರ ಭಜನೆ ನಡೆದು ರಾತ್ರಿ ಮಂಗಳೋತ್ಸವ ಜರಗಿತು. ನ22 ರಂದು ಉತ್ಥಾನ ದ್ವಾದಶಿ ತುಳಸೀ ಪೂಜೆ ದೇವರ ಮೊದಲ ಉತ್ಸವ ನಡೆಯಿತು.
ನ 23 ರಂದು ಸೋಮವಾರ ವೈಕುಂಠ ಚತುರ್ದಶಿ ಕೆರೆ ದೀಪೋತ್ಸವ ನಡೆಯಿತು. ನವಶಕ್ತಿ ಮಿತ್ರ ವೃಂದದ 36 ನೇ ವರ್ಷದ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳ ವಿಜೇತರಿಗೆ ಬಹುಮಾನ ವಿತರಣೆ, ವಿದ್ವಾನ್ ಪವನ್ ಭಟ್ ಮತ್ತು ಯಕ್ಷಗಾನ ಭಾಗವತ ಸಂಪಿಗೆ ಸುರೇಂದ್ರ ಪೈ ಅವರಿಗೆ ಸಮ್ಮಾನ, ಶೈಕ್ಷಣಿಕ ಸಾಧಕರು. ವಿಶೇಷ ಸಾಧಕರಿಗೆ ಗೌರವ, ವಿದ್ಯಾರ್ಥಿ ವೇತನ ವಿತರಣೆ, ಶ್ರೀ ದೇವಳದ ಸ್ವಚ್ಛತಾ ಸಿಬಂದಿಯಾಗಿದ್ದ ರಮೀಳಾ ಅವರಿಗೆ ಸಮ್ಮಾನ , ನಗರ ಭಜನೆಯಲ್ಲಿ ಸಹಕರಿಸಿದ ಎಳೆಯರಿಗೆ ಪ್ರೋತ್ಸಾಹಕ ಗೌರವ ನಡೆಯಿತು.
ಆಡಳಿತ ಮೊಕ್ತೇಸರ ಜಿ. ಉಮೇಶ ಪೈ ಸಹಿತ ಮೊಕ್ತೇಸರರುಗಳು, ಶ್ರೀ ವೆಂಕಟರಮಣ ಭಜನಾ ಮಂಡಳಿ ಸಹಿತ ಸಮಾಜದ ವಿವಿಧ ಸಂಘ ಸಂಸ್ಥೆಗಳವರು , ಸ್ವಯಂ ಸೇವಕರು, ಸಮಾಜ ಬಾಂಧವರು, ಭಜಕರು ಪಾಲ್ಗೊಂಡಿದ್ದರು.

0 Comments