ಮೂಡುಬಿದಿರೆ: ಸತ್ಯ, ಅಹಿಂಸೆ, ಶಾಂತಿ, ಪ್ರೀತಿ ಹಾಗೂ ಮಾನವೀಯತೆಯನ್ನು ಎಲ್ಲ ಧರ್ಮಗಳೂ ಸಾರುತ್ತವೆ. ಸ್ವಧರ್ಮದ ಬಗ್ಗೆ ಗೌರವದೊಂದಿಗೆ ಪರಧರ್ಮದ ಬಗ್ಗೆ ಪ್ರೀತಿ ಮತ್ತು ಗೌರವ ಹೊಂದಬೇಕು. ಧರ್ಮವು ಮನುಷ್ಯನನ್ನು ಸನ್ಮಾರ್ಗದಲ್ಲಿ ನಡೆಸುವ ಜೀವನ ಮೌಲ್ಯ ಎಂದು ಶ್ರೀ ಶಂಕರಾಚಾರ್ಯ ಶ್ರೀ ತೋಟಕಾಚಾರ್ಯ ಸಂಸ್ಥಾನಮ್, ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು.
ಅವರು ಕಲ್ಲಬೆಟ್ಟುವಿನ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ನಡೆದ ಸರ್ವಧರ್ಮ ಅರಿವು ಸಮ್ಮಿಲನವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಪದುವ ಕಾಲೇಜ್ ಆಫ್ ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ಮಂಗಳೂರು ಪ್ರಾಂಶುಪಾಲ ರೆ. ಫಾ. ಅರುಣ್ ವಿಲ್ಸನ್ ಲೋಬೋ ಮಾತನಾಡಿ, ಪ್ರೀತಿ, ಸರಳತೆ, ನಂಬಿಕೆ ಹಾಗೂ ಮನುಷ್ಯತ್ವವೇ ಧರ್ಮದ ಸಾರ. ವಿದ್ಯಾರ್ಥಿಗಳು ಜ್ಞಾನದ ಜತೆಗೆ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದರು.
ಪುತ್ತೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಮಾತನಾಡಿ, ಇಸ್ಲಾಂ ಶಾಂತಿ, ಮಾನವೀಯತೆ ಹಾಗೂ ಸಮಾನತೆಯನ್ನು ಸಾರುತ್ತದೆ ಎಂದರು.
ಮೂಡುಬಿದಿರೆಯ ಜೈನ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ಮಾತನಾಡಿ, ಸತ್ಯ, ಅಹಿಂಸೆ, ಅಪರಿಗ್ರಹ ಜೈನ ಧರ್ಮದ ಸಿದ್ಧಾಂತಗಳಾಗಿದ್ದು, ಎಲ್ಲ ಧರ್ಮಗಳ ತಾತ್ವಿಕ ನೆಲೆಯನ್ನು ಅರ್ಥಮಾಡಿಕೊಂಡು ಗೌರವಿಸಬೇಕು ಎಂದರು.
ಹಳೇ ವಿದ್ಯಾರ್ಥಿನಿ ಮೌಲ್ಯ ವೈ.ಆರ್. ಜೈನ್ ಹಾಡಿದ ‘ಒಲವೇ ನನ್ನೊಲವೇ’ ಆಲ್ಬಮ್ ಗೀತೆಯನ್ನು ಸ್ವಾಮೀಜಿ ಬಿಡುಗಡೆಗೊಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ್ ಮಾತನಾಡಿ, ಪ್ರೀತಿ ಮತ್ತು ಶಾಂತಿಯಿಂದ ಎಲ್ಲವನ್ನೂ ಗೆಲ್ಲಬಹುದು ಎಂದರು.
ಆಡಳಿತ ನಿರ್ದೇಶಕ ಡಾ. ಬಿ.ಪಿ. ಸಂಪತ್ ಕುಮಾರ್, ಕಾಲೇಜಿನ ಪ್ರಾಂಶುಪಾಲ ಪುಷ್ಪರಾಜ್ ಬಿ., ಎಕ್ಸಲೆಂಟ್ ಹೈಸ್ಕೂಲ್ ಮುಖ್ಯೋಪಾಧ್ಯಾಯ ಶಿವಪ್ರಸಾದ ಭಟ್, ಎಕ್ಸಲೆಂಟ್ ಸಿಬಿಎಸ್‌ಸಿ ಪ್ರಾಂಶುಪಾಲ ಶ್ರೀಪ್ರಸಾದ್ ಉಪಸ್ಥಿತರಿದ್ದರು.

0 Comments