ಸಸಿಹಿತ್ಲು ಕಡಲತೀರದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ500ಕ್ಕೂ ಅಧಿಕ ಮಂದಿ ಭಾಗಿ; 12.75 ಟನ್‌ಗೂ ಅಧಿಕ ತ್ಯಾಜ್ಯ ಸಂಗ್ರಹ

ಸಸಿಹಿತ್ಲು ಕಡಲತೀರದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ
500ಕ್ಕೂ ಅಧಿಕ ಮಂದಿ ಭಾಗಿ; 12.75 ಟನ್‌ಗೂ ಅಧಿಕ ತ್ಯಾಜ್ಯ ಸಂಗ್ರಹ

ಮೂಡುಬಿದಿರೆ: ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಯ ಸಂದೇಶ ಸಾರುವ ನಿಟ್ಟಿನಲ್ಲಿ ಹಳೆಯಂಗಡಿ ಗ್ರಾಮ ಪಂಚಾಯತ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ವಿವಿಧ ಸಂಘ–ಸಂಸ್ಥೆಗಳ ಸಹಯೋಗದಲ್ಲಿ ಸಸಿಹಿತ್ಲು ಕಡಲತೀರದಲ್ಲಿ ಶುಕ್ರವಾರ ಬೃಹತ್ ಸ್ವಚ್ಛತಾ ಅಭಿಯಾನ ನಡೆಯಿತು. 
ನಿರಂತರ ಸ್ವಚ್ಛತಾ ಕಾರ್ಯಕ್ಕೆ ಸಂಕಲ್ಪ
ಹಳೆಯಂಗಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯೀಶ್ ಚೌಟ ಮಾತನಾಡಿ, ಸ್ವಚ್ಛತೆ ಒಂದು ದಿನಕ್ಕೆ ಸೀಮಿತವಾಗದೆ ನಿರಂತರ ಚಟುವಟಿಕೆಯಾಗಬೇಕು ಎಂಬ ಉದ್ದೇಶದಿಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಸಂಘ–ಸಂಸ್ಥೆಗಳು ಹಾಗೂ ಶಾಲಾ–ಕಾಲೇಜುಗಳ ಸಹಕಾರದೊಂದಿಗೆ ವರ್ಷಪೂರ್ತಿ ಪ್ರತಿ ತಿಂಗಳು ಎರಡು ಸ್ವಚ್ಛತಾ ಅಭಿಯಾನಗಳನ್ನು ನಡೆಸುವ ಸಂಕಲ್ಪ ಮಾಡಲಾಗಿದೆ. ಅದರ ಭಾಗವಾಗಿ ಗಾಂಧಿ ಜಯಂತಿಯಂದು ಸಸಿಹಿತ್ಲು ಕಡಲತೀರದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

*ಸ್ವಚ್ಛತೆ ಪ್ರತಿಯೊಬ್ಬರ ಹೊಣೆಗಾರಿಕೆ: ವಿವೇಕ್ ಆಳ್ವ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಮಹಾತ್ಮ ಗಾಂಧೀಜಿ ಅವರು ಸ್ವಚ್ಛತೆ ಹಾಗೂ ಸ್ವಾತಂತ್ರ‍್ಯವನ್ನು ದೇಶದ ಅಭಿವೃದ್ಧಿಯ ಪ್ರಮುಖ ಆಶಯಗಳನ್ನಾಗಿ ಕಂಡಿದ್ದರು. ಸ್ವಚ್ಛ ಪರಿಸರ ನಿರ್ಮಾಣವು ಕೇವಲ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಲ್ಲ; ಪ್ರತಿಯೊಬ್ಬ ನಾಗರಿಕನೂ ತನ್ನ ಹೊಣೆಗಾರಿಕೆಯನ್ನು ಅರಿತುಕೊಂಡಾಗ ಮಾತ್ರ ಸ್ವಚ್ಛ ಸಮಾಜ ನಿರ್ಮಾಣ ಸಾಧ್ಯ.  ಕಡಲತೀರದಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ಸೇರಿದಂತೆ ವಿವಿಧ ತ್ಯಾಜ್ಯಗಳು ಸಮುದ್ರ ಪರಿಸರ ಹಾಗೂ ಜಲಚರ ಜೀವಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಆದ್ದರಿಂದ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ, ಮೂಲದಲ್ಲಿಯೇ ವಿಂಗಡಿಸಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು.

500ಕ್ಕೂ ಅಧಿಕ ಮಂದಿ ಭಾಗವಹಿಸಿದ ಅಭಿಯಾನದಲ್ಲಿ ಕಡಲತೀರ ಹಾಗೂ ಸುತ್ತಮುತ್ತಲಿನ ಪ್ರದೇಶದಿಂದ ಸುಮಾರು 12.75 ಟನ್‌ಗಳಷ್ಟು ಪ್ಲಾಸ್ಟಿಕ್, ಗಾಜು, ರಬ್ಬರ್, ಥರ್ಮಕೋಲ್ ಸೇರಿದಂತೆ ವಿವಿಧ ಬಗೆಯ ತ್ಯಾಜ್ಯವನ್ನು ಸಂಗ್ರಹಿಸಲಾಯಿತು.
ಗಾಂಧೀಜಿ ಅವರ ಸ್ವಚ್ಛತೆ ಮತ್ತು ಪರಿಸರ ಕಾಳಜಿಯ ಆಶಯವನ್ನು ಜನಜೀವನದಲ್ಲಿ ಅಳವಡಿಸುವ ಉದ್ದೇಶದಿಂದ ಆಯೋಜಿಸಲಾದ ಅಭಿಯಾನದಲ್ಲಿ ವಿವಿಧ ಸಂಘ–ಸಂಸ್ಥೆಗಳ ಪ್ರತಿನಿಧಿಗಳು, ವಿದ್ಯಾರ್ಥಿಗಳು, ಯುವಕರು, ಮಹಿಳೆಯರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡರು. 

ಕಾರ್ಯಕ್ರಮದ ಆರಂಭದಲ್ಲಿ ಸ್ವಚ್ಛತಾ ಅಭಿಯಾನದ ಅಂಗವಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಬಳಿಕ ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್‌ರವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. 

ಭಗವತಿ ದೇವಸ್ಥಾನದ ಆಡಳಿತ ಮಂಡಳಿಯ ವಾಮನ ಇಡ್ಯಾ, ಪ್ರಮುಖ ಅರ್ಚಕರು,  ಹಳೆಯಂಗಡಿ ಗ್ರಾಮ ಪಂಚಾಯತ್ ನ ನಿಕಟಪೂರ್ವ ಅಧ್ಯಕ್ಷೆ ಪೂರ್ಣಿಮಾ ಹಾಗೂ ನಿಕಟಪೂರ್ವ ಸದಸ್ಯರು ಉಪಸ್ಥಿತರಿದ್ದರು.


ಹಲವು ಸಂಘ–ಸಂಸ್ಥೆಗಳ ಸಹಭಾಗಿತ್ವ
ಅಭಿಯಾನದಲ್ಲಿ ಉತ್ಥಾನ ಬಳಗ ಸಸಿಹಿತ್ಲು, ಯುವಕ ಮತ್ತು ಯುವತಿ ಮಂಡಲ (ರಿ.) ಸಸಿಹಿತ್ಲು, ಹಳೆ ವಿದ್ಯಾರ್ಥಿ ಸಂಘ ಸಸಿಹಿತ್ಲು, ಲಚ್ಚಿಲ್ ಮೊಗವೀರ ಮಹಾಸಭಾ ಸಸಿಹಿತ್ಲು, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ, ಶ್ರೀ ಭಗವತಿ ತೀಯ ಸಂಘ, ಆಂಜನೇಯ ಗುಡಿ ಮತ್ತು ವ್ಯಾಯಾಮ ಶಾಲೆ, ನವೋದಯ ಮಹಿಳಾ ಮಂಡಲ, ಶ್ರೀ ವಿದ್ಯಾವಿನಾಯಕ ಯುವಕ ಮಂಡಲ (ರಿ.) ಹಳೆಯಂಗಡಿ, ಯುವತಿ ಮತ್ತು ಮಹಿಳಾ ಮಂಡಲ ಹಳೆಯಂಗಡಿ, ವಿಠೋಬ ಭಜನಾ ಮಂದಿರ, ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಲಯನ್ಸ್ ಕ್ಲಬ್, ಬಿಲ್ಲವ ಸಮಾಜ ಸೇವಾ ಸಂಘ (ರಿ.), ರಿಲಾಯನ್ಸ್ ಅಸೋಸಿಯೇಷನ್, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟ, ಸಂಗಮ ಮಹಿಳಾ ಮಂಡಲ ಸೇರಿದಂತೆ ವಿವಿಧ ಸಂಘ–ಸಂಸ್ಥೆಗಳ ಸದಸ್ಯರು ಭಾಗವಹಿಸಿದರು. 

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ  ಮೂಡುಬಿದಿರೆ ಮತ್ತು ಎಕ್ಸಲೆಂಟ್ ಕಾಲೇಜು ಹಾಗೂ ರೋಟರಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳೂ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು. ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸಾರ್ವಜನಿಕರು ಸಹ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಅಭಿಯಾನದಲ್ಲಿ ಸಹಕರಿಸಿದ ವಿವಿಧ ಸಂಘ–ಸAಸ್ಥೆಗಳ ಮುಖ್ಯಸ್ಥರು ಹಾಗೂ ಪ್ರತಿನಿಧಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

Post a Comment

0 Comments

Advertisement