ಬಲಿಪ ಪ್ರಸಾದ ಸಂಸ್ಮರಣೆ
ಮೂಡುಬಿದಿರೆ: ಬಲಿಪ ಪ್ರಸಾದ ಭಾಗವತ 50ರ ನೆನಪು "ಪಂಚಾಶತ್ ಸ್ಮರಣ್ ಪಂಚಾಶತ್ ಸಮ್ಮಾನ್" ಸರಣಿಯ 16ನೇ ಕಾರ್ಯಕ್ರಮವನ್ನು 5ನೇ ವರ್ಷದ ಬನ್ನಡ್ಕ ಶಾರದೋತ್ಸವದ ವೇದಿಕೆಯಲ್ಲಿ ಬುಧವಾರ ಹಮ್ಮಿಕೊಳ್ಳಲಾಯಿತು.
ಸಾರ್ವಜನಿಕ ಶಾರದೋತ್ಸವ ಟ್ರಸ್ಟ್ (ರಿ.) ಬನ್ನಡ್ಕ ಇದರ ಅಧ್ಯಕ್ಷ ಎಂ. ದಯಾನಂದ ಪೈಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇರುವೈಲು ಮತ್ತು ತಳಕಳ ಮೇಳಗಳಲ್ಲಿ ವೇಷಧಾರಿಯಾಗಿ ಯಕ್ಷಗಾನ ಕ್ಷೇತ್ರಕ್ಕೆ ಕೊಡುಗೆ ಸಲ್ಲಿಸಿರುವ ಬಹುರೂಪಿ ಸಾಧಕ, ಪ್ರಸ್ತುತ ಬನ್ನಡ್ಕದಲ್ಲಿ ನೆಲೆಸಿರುವ ಕೆ. ವೆಂಕಟರಾಜ ಯಳಚಿತ್ತಾಯರಿಗೆ ಸರಣಿಯ 16ನೇ ಸನ್ಮಾನವನ್ನು ನೀಡಿ ಗೌರವಿಸಲಾಯಿತು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಹಿರಿಯ ಉದ್ಯಮಿ ಕೆ. ಶ್ರೀಪತಿ ಭಟ್, ಸರಣಿ ಕಾರ್ಯಕ್ರಮದ ಗೌರವ ಸಲಹೆಗಾರ ಅಳಿಯೂರು ರುಕ್ಕಯ್ಯ ಪೂಜಾರಿ, ಬಿಜೆಪಿ ಧುರೀಣ ಕೆ.ಪಿ. ಜಗದೀಶ ಅಧಿಕಾರಿ, ಬಲಿಪ ಪ್ರಸಾದರ ಪ್ರಭಾ ವಲಯದಲ್ಲಿ ಗುರುತಿಸಿಕೊಂಡಿರುವ ಕಲಾವಿದ ಲಾಡಿ ರವಿಪ್ರಸಾದ್ ಕೆ. ಶೆಟ್ಟಿ, ನ್ಯಾಯವಾದಿ ಚೇತನ್ ಕುಮಾರ್ ಶೆಟ್ಟಿ, ಮೂಡುಬಿದಿರೆ ಪುರಸಭೆ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್, ಮಾಜಿ ಉಪಾಧ್ಯಕ್ಷ ನಾಗರಾಜ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಶ್ರೀಗೌರಿ ಬನ್ನಡ್ಕ ಪ್ರಸ್ತಾವನೆಗೈದರು. ವಾಸ್ತುತಜ್ಞ ಮಾರೂರು ರಾಘವೇಂದ್ರ ಭಂಡಾರ್ಕಾರ್ ಸನ್ಮಾನ ಪತ್ರ ವಾಚಿಸಿದರು. ಹಿರಿಯ ಯಕ್ಷಗುರು ಅನಂತ ಪದ್ಮನಾಭ ಹೊಳ್ಳ, ನಿವೃತ್ತ ಪೊಲೀಸ್ ಅಧಿಕಾರಿ ವಾಸು ನಾಯ್ಕ ಕಡಿರುದ್ಯಾವರ, ವಿಶ್ವನಾಥ ನಾಯಕ್ ಕಲ್ಲಬೆಟ್ಟು, ಕಾರ್ಯಕ್ರಮದ ಸಂಘಟಕ ಕೃಷ್ಣಕುಮಾರ್ ಅತಿಥಿಗಳಿಗೆ ಕೆ.ಎನ್. ಭಟ್ ಶಿರಾಡಿಪಾಲ್ ರಚಿತ "ನವನಿಧಿ" ಪುಸ್ತಕ ಮತ್ತು ಅವರ ಪುತ್ರಿ ಅನುಪಮಾ ಚಿಪ್ಳೂಣಕರ್ ಬರೆದಿರುವ "ಅಮ್ಮ" ಪುಸ್ತಕಗಳನ್ನು ನೀಡಿ ಗೌರವಿಸಿದರು.
ವಿಜೇತಾ ಕಾಮತ್ ಬನ್ನಡ್ಕ ವಂದಿಸಿದರು.

0 Comments