124 ಮಾಜಿ ನ್ಯಾಯಮೂರ್ತಿಗಳಿಗೆ ಸರಿಯಾಗಿದ್ದ SIR ಇವರಿಗೇಕೆ ಕಷ್ಟವಾಯಿತು?-ಮಹೇಶ್ ಠಾಕೂರ್ ಪ್ರಶ್ನೆ
ಉಡುಪಿ ಜಿಲ್ಲಾ ಮಾಜಿ ಉಪಾಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಅಸೋಸಿಯೇಷನ್ ಇದರ ಉಪಾಧ್ಯಕ್ಷರಾದ ಮಹೇಶ್ ಠಾಕೂರ್ ರವರು ದೇಶದಲ್ಲಿ ಸಂಚಲನ ಎಬ್ಬಿಸಿರುವ ಎಸ್ಐಆರ್ ಪ್ರಕ್ರಿಯೆ ಬಗ್ಗೆ ಈ ರೀತಿ ಅಭಿಪ್ರಾಯಪಟ್ಟಿದ್ದಾರೆ.
ದೇಶದಾದ್ಯಂತ ಎಸ್ಐಆರ್ ಪ್ರಕ್ರಿಯೆ ಭರ್ಜರಿ ವೇಗದಲ್ಲಿ ನಡೆಯುತ್ತಿದ್ದು ಈ ಬಗೆಗಿನ ವಿವಾದವು ಅದಕ್ಕಿಂತಲೂ ಹೆಚ್ಚಿನ ವೇಗವನ್ನು ಪಡೆದುಕೊಳ್ಳುತ್ತಿದೆ. ಎಸ್ಐಆರ್ ಜಾರಿಗೆ ಬಂದ ನಂತರ ದೇಶದ ವಿರೋಧಪಕ್ಷಗಳು ಒಂದಲ್ಲ ಒಂದು ನೆಪವಡ್ಡಿ ಅಡ್ಡಿಪಡಿಸುತ್ತಿರುವುದು ಹೊಸದೇನಲ್ಲ. ಇದೀಗ ವಿರೋಧ ಪಕ್ಷಗಳು ಹಾಗೂ ಇತ್ತೀಚೆಗೆ ಹುಟ್ಟಿಕೊಂಡ ಜಿರಳೆ ಪಾರ್ಟಿಯ ಯುವಕರು ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಇದು ಎಷ್ಟರಮಟ್ಟಿಗೆ ಸರಿ ತಪ್ಪು ಎಂಬ ಲೆಕ್ಕಾಚಾರಗಳು ನಮ್ಮೊಳಗೆ ನಡೆಯುತ್ತಲೇ ಇವೆ.
ಮತ ಪರಿಷ್ಕರಣ ಎನ್ನುವುದು ನಿಯಮ ಬದ್ಧವಾಗಿ ನಡೆಯುವಂತಹ ಪ್ರಕ್ರಿಯೆ. ಯಾರದ್ದೋ ಮತವನ್ನು ಅಥವಾ ಮತದಾನದ ಹಕ್ಕನ್ನು ಕಸಿಯಲು ಈ ದೇಶದ ಕಾನೂನು ಅವಕಾಶ ನೀಡುವುದಿಲ್ಲ ಎಂಬುದನ್ನು ನಮ್ಮ ದೇಶದ ಜನರು ಮೊದಲು ಅರ್ಥಮಾಡಿಕೊಳ್ಳಬೇಕಾದ ಸತ್ಯ. ವಿಷಯ ಯಾರೇ ಆಗಿರಲಿ ಮತದಾನದ ಪಟ್ಟಿಯಿಂದ ಹೊರಗುಳಿದರೆ ಅದನ್ನು ಪ್ರಶ್ನಿಸಲು ಬೇಕಾದಷ್ಟು ವ್ಯವಸ್ಥೆಗಳು ನಮ್ಮಲ್ಲಿ ಇವೆ. ತಾನು ಅಥವಾ ತನ್ನ ಹೆಸರು ಮತದಾನದ ಪಟ್ಟಿಯಿಂದ ಡಿಲೀಟ್ ಆಗಿದ್ದರೆ ಅದನ್ನು ನಿಯಮ ಬದ್ಧವಾಗಿ ದಾಖಲೆಗಳನ್ನು ನೀಡಿ ಮತ್ತೊಮ್ಮೆ ಮತದಾನದ ಪಟ್ಟಿಗೆ ಸೇರಿಸುವ ಅವಕಾಶ ಈ ಪ್ರಕ್ರಿಯೆಯು ನೀಡಿದೆ. ಆದರೆ ಲಕ್ಷಾಂತರ ಮತದಾನಗಳು ಡಿಲೀಟ್ ಆಗಿವೆ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುವುದು ಎಷ್ಟು ಸರಿ ಎಂಬುದು ಅರ್ಥ ಆಗದ ವಿಷಯ.
ಇತ್ತೀಚೆಗೆ ರಾಹುಲ್ ಗಾಂಧಿ ನೇತೃತ್ವದ ವಿಪಕ್ಷಗಳ ತಂಡವು ಗೌರವಾನ್ವಿತ ರಾಷ್ಟ್ರಪತಿಗಳನ್ನು ಭೇಟಿಯಾದ ಸಂದರ್ಭದಲ್ಲಿ ರಾಷ್ಟ್ರಪತಿಗಳು ದೂರುಗಳನ್ನು ಸಾಕ್ಷಿ ಸಮೇತ ಒದಗಿಸಿ ಎಂಬುದನ್ನು ಹೇಳಿದ್ದಾರೆ. ಆದರೆ ರಾಹುಲ್ ಗಾಂಧಿಯವರು ಇದನ್ನು ವಿಷಾದನೀಯ ಎಂಬಂತೆ ಅರ್ಥ ಮಾಡಿಕೊಂಡಿರುವುದು ಸರಿಯಲ್ಲ. ಈ ದೇಶದಲ್ಲಿ ಲಕ್ಷಾಂತರ ವಿದೇಶಿಯರು ಅಕ್ರಮವಾಗಿ ಮತದಾನದ ಹಕ್ಕನ್ನು ಪಡೆದಿರುವುದು ದುರಂತವಲ್ಲದೆ ಮತ್ತೇನಲ್ಲ. ಹೀಗಾಗಿ ಅಕ್ರಮ ಮತದಾರರನ್ನು ಮತದಾನದ ಪಟ್ಟಿಯಿಂದ ಹೊರಗೆ ಇಡುವುದು ನಮ್ಮ ಜವಾಬ್ದಾರಿ ಮಾತ್ರವಲ್ಲದೆ ಅದು ದೇಶಭಕ್ತಿಯ ಸಂಕೇತ ಕೂಡ ಆಗಿದೆ. ಹೀಗಾಗಿ ಅಕ್ರಮ ಮತದಾರರ ಪರವಾಗಿ ಕಾಂಗ್ರೆಸ್ ಸೇರಿದಂತೆ ಯಾವ ಪಕ್ಷವು ವಕಾಲತು ನಡೆಸಬಾರದು. ಸಕ್ರಮ ಮತದಾರರ ಹೆಸರು ಮತದಾನದ ಪಟ್ಟಿಯಿಂದ ಹೊರಗುಳಿದಿದ್ದರೆ ಅಥವಾ ಡಿಲೀಟ್ ಆಗಿದ್ದರೆ ಅದನ್ನು ಪ್ರಶ್ನಿಸಲು ನಮ್ಮ ದೇಶದ ಸಂವಿಧಾನದಲ್ಲಿ ಹಲವಾರು ಅವಕಾಶಗಳಿವೆ, ಈ ಮೂಲಕ ಪ್ರಶ್ನಿಸಬಹುದು.
ಮುಂದುವರಿದು ಪ್ರತಿಭಟನೆಗಳು ಕೇವಲ ಶಾಂತಿಯುತ ಪ್ರತಿಭಟನೆಗಳಾಗದೆ ಅನೇಕ ಅಶಾಂತಿ ಸೃಷ್ಟಿಸುವ ಪ್ರತಿಭಟನೆಗಳಾಗಿ ತಿರುಗಿದ್ದು ಖೇದಕರ. ಆರಂಭದಲ್ಲಿ ನೀಟ್ ಅಕ್ರಮದ ವಿರುದ್ಧ ನಡೆದ ಪ್ರತಿಭಟನೆಯನ್ನು ಸಹ್ಯವಲ್ಲದಿದ್ದರೂ ದೇಶ ಒಪ್ಪಿಕೊಂಡಿದೆ. ಮಾತ್ರವಲ್ಲದೆ ಸರ್ಕಾರವು ಶರಣಾಗಿದೆ. ಈ ಸಂದರ್ಭದಲ್ಲಿ ನಡೆದಂತಹ ಗುಂಪು ಘರ್ಷಣೆಗಳು, ಅರಾಜಕತೆಗಳು ದೇಶದ ಕಾನೂನು ವ್ಯವಸ್ಥೆ ಮಾತ್ರವಲ್ಲದೆ ಭದ್ರತಾ ವ್ಯವಸ್ಥೆಗೆ ಕಪ್ಪು ಚುಕ್ಕೆಯಾಗಿದೆ. ಬಾಂಗ್ಲಾ ಸೇರಿದಂತೆ ವಿದೇಶಿ ಕೈವಾಡ ಈ ದೇಶದ ಶಾಂತಿಗೆ ಭಂಗ ತಂದಿರುವುದು ಸುಳ್ಳಲ್ಲ. ಹೀಗಾಗಿ ಎಸ್ಐಆರ್ ಪ್ರಕ್ರಿಯೆಯ ವಿರುದ್ಧವು ಒಂದು ವ್ಯವಸ್ಥಿತವಾದ ಪ್ರತಿಭಟನೆ ಯಾವುದೇ ಕಾನೂನಿನ ಚೌಕಟ್ಟಿನಲ್ಲಿ ನಡೆಯದಿರುವುದೇ ಇಷ್ಟೆಲ್ಲ ವಿವಾದಕ್ಕೆ ಕಾರಣವಾಗಿದೆ.
ಮತ್ತೊಮ್ಮೆ ವಿನಂತಿಸುತ್ತೇನೆ. ಯಾರೇ ಆಗಿರಲಿ ಮತದಾರರು ತಮ್ಮ ಹಕ್ಕನ್ನು ಚುನಾವಣಾ ಆಯೋಗದ ಮೂಲಕ ಪಡೆಯಬಹುದು ಅಥವಾ ತನ್ನ ಹೆಸರು ಡಿಲೀಟ್ ಆಗಿದ್ದರೆ ಕೂಡಲೇ ಅದನ್ನು ಕಾನೂನು ಮೂಲಕ ಪ್ರಶ್ನಿಸಬಹುದು. ಅಲ್ಲಿ ನ್ಯಾಯ ಸಿಗದೇ ಇದ್ದ ಪಕ್ಷದಲ್ಲಿ ಜನರ ಮುಂದೆ ಇಡಬಹುದಾದ ಅವಕಾಶವನ್ನೂ ನಮ್ಮ ಕಾನೂನು ವ್ಯವಸ್ಥೆ ನೀಡಿದೆ. ಭಾರತ ಅಭಿವೃದ್ಧಿಯ ನಾಗಾಲೋಟದಲ್ಲಿ ಮುನ್ನಡೆಯುತ್ತಿರುವಂತಹ ಇಂತಹ ಸಂದರ್ಭದಲ್ಲಿ ದೇಶವನ್ನು ಅಸ್ಥಿರಗೊಳಿಸುವ ಶಕ್ತಿಗಳಿಗೆ ಯುವ ಸಮುದಾಯ ಅವಕಾಶ ನೀಡಬಾರದು. ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ, ಆಫ್ಘಾನಿಸ್ತಾನದಂತೆ ಭಾರತವನ್ನು ಮತ್ತು ಇಲ್ಲಿನ ವ್ಯವಸ್ಥೆಯನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿದರೆ ಅದನ್ನು ಸಹಿಸಿಕೊಂಡು ನಮ್ಮ ದೇಶದ ಜನರು ಕೂರಬಾರದು. ಅಂತಹ ಕೃತ್ಯಗಳ ವಿರುದ್ಧ ಯುವ ಸಮುದಾಯ ಎದ್ದು ನಿಲ್ಲಬೇಕಿದೆ. ಸಂವಿಧಾನ ಎಲ್ಲರಿಗೂ ಸಮಾನ ಅವಕಾಶವನ್ನು ನೀಡಿದ್ದು ಆ ಸಂವಿಧಾನದ ಪ್ರಕಾರ ನಾವು ಕೆಲಸ ಮಾಡಬೇಕಾಗಿದೆ.
ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ ಪರವಾಗಿ 124 ಮಾಜಿ ನ್ಯಾಯಾಧೀಶರು ಬೆಂಬಲಕ್ಕೆ ನಿಂತಿರುವುದು ಈ ಪ್ರಕ್ರಿಯೆಯು ಸರಿಯಾಗಿದೆ ಮತ್ತು ಕಾನೂನು ಬದ್ಧವಾಗಿದೆ ಎಂಬುದಕ್ಕೆ ನಿದರ್ಶನವಾಗಿದೆ ಎಂಬುದು ನನ್ನ ವೈಯಕ್ತಿಕ ಅನಿಸಿಕೆಯಾಗಿದೆ. ಆದರೆ ವಿಪಕ್ಷಗಳ ಆರೋಪವೇ ಬೇರೆಯಾಗಿದ್ದು ಈವರೆಗೂ ಯಾವುದೇ ಒಂದು ಆರೋಪವನ್ನು ಸಾಬೀತು ಮಾಡುವಲ್ಲಿ ಅವರು ವಿಫಲವಾಗಿದ್ದಾರೆ. ಉಡುಪಿಯೂ ಸೇರಿದಂತೆ ಯಾವ ಕಡೆಯಲ್ಲೂ ತಮ್ಮ ಹೆಸರು ಮತದಾರರ ಪಟ್ಟಿಯಿಂದ ಡಿಲಿಟ್ ಆಗಿದ್ದಲ್ಲಿ ಕೂಡಲೇ ಕಾನೂನು ಪ್ರಕಾರ ಮುಂದುವರಿಯಿರಿ. ಆದರೆ ಸಾಮಾಜಿಕ ಜಾಲತಾಣ ಅಥವಾ ವಿವಿಧ ವ್ಯವಸ್ಥೆಗಳ ಮೂಲಕ ಭಾರತದ ಗೌರವ ಕಳೆಯುವ ಕೆಲಸ ಮಾಡಬೇಡಿ...
-ಮಹೇಶ್ ಠಾಕೂರ್,
ಮಾಜಿ ನಗರಸಭಾ ಸದಸ್ಯರು, ಉಡುಪಿ

0 Comments