ಕ್ರತಯುಗದಲ್ಲಿ ದೇವತೆಗಳು ಮೇಲಿನ ಸ್ವರ್ಗಲೋಕದಲ್ಲಿ ಇದ್ದರೆ , ರಾಕ್ಷಸರು ಕೆಳಗಿನ ಪಾತಾಳದಲ್ಲಿರುತ್ತಿದ್ದರು .
ತ್ರೇತಾಯುಗದಲ್ಲಿ ರಾಕ್ಷಸನಾದ ರಾವಣನು ಲಂಕೆಯಲ್ಲಿ ಇದ್ದರೆ , ದೇವರಾದ ಶ್ರೀರಾಮಚಂದ್ರನು ಅಯೋಧ್ಯೆಯಲ್ಲಿ ಇದ್ದ . ಅಂದರೆ ರಾಕ್ಷಸ - ದೇವತೆಗಳು ಒಂದೇ ಭೂಮಿಯಲ್ಲಿ ನೆಲೆಸಿದ್ದರು . ದ್ವಾಪರ ಯುಗಕ್ಕಾಗುವಾಗ ದುಷ್ಟ ಕಂಸ ಹಾಗೂ ದೇವನಾದ ಶ್ರೀಕೃಷ್ಣ ಒಂದೇ ಮನೆತನದಲ್ಲಿ ಇದ್ದರು . ಈಗಿನ ಕಲಿಯುಗದಲ್ಲಿ ರಾಕ್ಷಸ - ದೇವತೆಗಳು ಒಬ್ಬನೇ ವ್ಯಕ್ತಿಯಲ್ಲಿ ನೆಲೆಸಿದ್ದಾನೆ . ನಾವು ರಾಕ್ಷಸಗುಣ ಬೆಳೆಸದೇ , ದೇವರ ಆದರ್ಶ ಪಾಲಿಸಬೇಕು . ಶ್ರೀಕೃಷ್ಣನ ನಡೆ , ಬೋಧನೆಗಳು ಇಂದಿಗೂ ನಮಗೆ ಆದರ್ಶವಾಗಿದೆ . ಶ್ರೀಕೃಷ್ಣನ ಪ್ರತೀಯೊಂದು ಲೀಲೆಗಳು ನಮಗೆ ನೈತಿಕತೆಯನ್ನು ಬೋಧಿಸುತ್ತದೆ " ಎಂದು ಕೆನರಾ ಬ್ಯಾಂಕ್ ನ ನಿವೃತ್ತ ಹಿರಿಯ ಪ್ರಬಂಧಕರಾದ ಶ್ರೀ ರವಿಕಾಂತ್ ನಾಯಕರು ನುಡಿದರು . ಅವರು ಮೂಡುಬಿದಿರೆ ಕಡಲಕೆರೆಯ ಪ್ರೇರಣಾ ಶಾಲೆಯ ಶಿಶುಮಂದಿರದ ಮಕ್ಕಳಿಂದ ಜರುಗಿದ " ಶ್ರೀಕೃಷ್ಣ ಲೀಲೋತ್ಸವ " ಕಾರ್ಯಕ್ರಮ ಉದ್ಘಾಟಿಸಿದರು .
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕರಾದ ಶ್ರೀ ಎಂ.ಶಾಂತರಾಮ ಕುಡ್ವರು , " ನಮಗೆ ಪ್ರತಿಕೂಲ ಪರಿಸ್ಥಿತಿ ಬಂದಾಗ ಅದನ್ನು ಅನುಕೂಲಕರವಾಗಿ ಮಾರ್ಪಾಡಿಸಬೇಕು ಎಂಬುದು ಶ್ರೀಕೃಷ್ಣನ ಜೀವನದಿಂದ ನಾವು ಕಲಿಯಬಹುದು . ಶ್ರೀಕೃಷ್ಣನ ಕಥೆಯು ಮಿಥ್ಯವಲ್ಲ , ಅದೊಂದು ಸತ್ಯದ ಕಥೆ . ಶ್ರೀಕೃಷ್ಣನ ಚಾಣಾಕ್ಷತನ , ಬೋಧನೆ , ಸಂದೇಶಗಳು ಇಂದಿಗೂ ಪ್ರಸ್ತುತ . " ಎಂದರು .ಸೇವಾಂಜಲಿ ಎಜುಕೇಶನಲ್ ಟ್ರಸ್ಟ್ ನ ಉಪಾಧ್ಯಕ್ಷ ಶ್ರೀ ಸೋಮನಾಥ ಕೋಟ್ಯಾನ್ ರು " ಲೇಸ್ , ಕುರ್ಕುರೆ , ಬಹುರಾಷ್ಟ್ರೀಯ ಕಂಪೆನಿಗಳ ಪಾನೀಯಗಳು ಆರೋಗ್ಯಕ್ಕೆ ಮಾರಕ . ಆದುದರಿಂದ ಮಕ್ಕಳು ಉತ್ತಮ ಪೌಷ್ಟಿಕಾಂಶವಿರುವ ಸ್ವದೇಶಿ ವಸ್ತುಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಉತ್ತಮ " ಎಂದು ಪಾಲಕರಿಗೆ ಸಲಹೆ ನೀಡಿದರು . ಬೆಂಗಳೂರಿನ ಉದ್ಯಮಿ ಶ್ರೀ ಪ್ರಭಾಕರ ಶೆಟ್ಟಿ ಅಂಬೂರಿ , ಪ್ರಗತಿಪರ ಕೃಷಿಕ ಶ್ರೀ ನಾಗರಾಜ ಅಂಬೂರಿ , ಸೇವಾಂಜಲಿಯ ಟ್ರಸ್ಟಿ ಡಾ.ಆನಂದ ಕಾರ್ಲ , ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವತ್ಸಲಾ ರಾಜೇಶ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು .
ಶ್ರೀಮತಿ ವತ್ಸಲಾ ರಾಜೇಶ್ ರವರು ಅತಿಥಿಗಳನ್ನು ಸ್ವಾಗತಿಸಿದರು . ಶಿಕ್ಷಕಿ ಶ್ರೀಮತಿ ಪುಷ್ಪಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಕುಮಾರಿ ನಿವೇದಿತಾ ಧನ್ಯವಾದ ಸಲ್ಲಿಸಿದರು . ನಂತರ ಶಿಶುಮಂದಿರದ ಎಲ್ಲಾ 70 ಪುಟಾಣಿಗಳು ಶ್ರೀಕೃಷ್ಣ , ಗೋಪಿಕಾ ಸ್ತ್ರೀಯರ ವೇಷ ಧರಿಸಿ ವಿವಿಧ ನೃತ್ಯದ ಮೂಲಕ " ಶ್ರೀಕೃಷ್ಣ ಲೀಲೋತ್ಸವ " ನೆರವೇರಿಸಿದರು . ಶಿಕ್ಷಕಿ ಶ್ರೀಮತಿ ಮಲ್ಲಿಕಾರವರು ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆ ಮಾಡಿದರು . ಸೇವಾಂಜಲಿ ಟ್ರಸ್ಟ್ ನ ಕೋಶಾಧಿಕಾರಿ ಶ್ರೀ ಎಸ್.ಎನ್.ಬೋರ್ಕರ್ , ಟ್ರಸ್ಟಿ ಶ್ರೀ ಮಂಜುನಾಥ ಶೆಟ್ಟಿ , ಎಲ್ಲಾ ಶಿಕ್ಷಕ ಶಿಕ್ಷಕಿಯರು , ಶಿಶುಗಳ ಪಾಲಕರು ಉಪಸ್ಥಿತರಿದ್ದರು . ಶಿಕ್ಷಕ ಶ್ರೀ ಸುರೇಂದ್ರ , ಶಿಕ್ಷಕಿ ಶ್ರೀಮತಿ ಹರ್ಷಿತಾ ಮತ್ತು ಶ್ರೀ ಸುಜಿತ್ ಸಹಕರಿಸಿದರು .

0 Comments