ಚಾಲಕನ ಪುತ್ರಿಗೆ ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಸೀಟು; ಆಳ್ವಾಸ್ ಪಿಯು ಶಿಕ್ಷಣದ ದತ್ತು ಯೋಜನೆಯಿಂದ ವೈದ್ಯಕೀಯ ಕನಸು ನನಸು.

ಚಾಲಕನ ಪುತ್ರಿಗೆ ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಸೀಟು; ಆಳ್ವಾಸ್ ಪಿಯು ಶಿಕ್ಷಣದ ದತ್ತು ಯೋಜನೆಯಿಂದ ವೈದ್ಯಕೀಯ ಕನಸು ನನಸು.
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ನೂತನ ಶೈಕ್ಷಣಿಕ ಅಧ್ಯಾಯಕ್ಕೆ ಸಾಕ್ಷಿಯಾಗಿರುವ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆ್ಯಂಡ್  ರಿಸರ್ಚ್ ಸೆಂಟರ್‌ನ (ಎಐಎಂಎಸ್‌ಆರ್‌ಸಿ) ಮೊದಲ ಎಂಬಿಬಿಎಸ್ ಪ್ರವೇಶದ ಹೆಗ್ಗಳಿಕೆಗೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸ್ನೇಹಾ ಪಾತ್ರರಾಗಿದ್ದಾರೆ. 

ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಪ್ರವೇಶ ಪಡೆದಿರುವ ಸ್ನೇಹಾ, ಸೀಮಿತ ಆರ್ಥಿಕ ಹಿನ್ನೆಲೆಯ ಕುಟುಂಬದಿಂದ ಬಂದು ಶೈಕ್ಷಣಿಕ ಪರಿಶ್ರಮ, ಅವಕಾಶ ಹಾಗೂ ಸೂಕ್ತ ಮಾರ್ಗದರ್ಶನದ ಮೂಲಕ ವೈದ್ಯಕೀಯ ಶಿಕ್ಷಣದ ಕನಸನ್ನು ನನಸಾಗಿಸಿಕೊಂಡಿದ್ದಾರೆ.
ಕಾರ್ಕಳದ ಕುಂಟಲ್ಪಾಡಿಯ ನಿವಾಸಿಯಾಗಿರುವ ಸ್ನೇಹಾ, ತನ್ನ ಎಸ್‌ಎಸ್‌ಎಲ್‌ಸಿಯನ್ನು ಜೆಸೀಸ್ ಹೈಸ್ಕೂಲ್‌ನಲ್ಲಿ 590 ಅಂಕಗಳೊಂದಿಗೆ ಪೂರ್ಣಗೊಳಿಸಿದ್ದರು. ಬಳಿಕ ಆಳ್ವಾಸ್ ಪದವಿಪೂರ್ವ ಕಾಲೇಜಿಗೆ ಸೇರಿ, ಆಳ್ವಾಸ್‌ನ ಮೆರಿಟ್ ಅಡಾಪ್ಷನ್ ಸ್ಕೀಮ್ (ದತ್ತು ಯೋಜನೆ) ಅಡಿಯಲ್ಲಿ ಶಿಕ್ಷಣ ಮುಂದುವರಿಸಿದ್ದರು.  

ಆಳ್ವಾಸ್‌ನಲ್ಲಿ ಪಡೆದ ಶೈಕ್ಷಣಿಕ ತರಬೇತಿ, ನಿರಂತರ ಪರಿಶ್ರಮ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಯ ಫಲವಾಗಿ ಸ್ನೇಹಾ ನೀಟ್‌ನಲ್ಲಿ 720ಕ್ಕೆ 506 ಅಂಕಗಳನ್ನು ಗಳಿಸಿ, ಆಳ್ವಾಸ್ ವೈದ್ಯಕೀಯ ಕಾಲೇಜಿನಲ್ಲಿ ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಸೀಟು ಪಡೆದುಕೊಂಡಿದ್ದಾರೆ.

ತಂದೆಯ ಕನಸು ನನಸು ಮಾಡಿದ ಮಗಳು
ಸ್ನೇಹಾಳ ಸಾಧನೆಯ ಹಿಂದೆ ತಂದೆ-ತಾಯಿಯ ಪ್ರೋತ್ಸಾಹವೂ ಮಹತ್ವದ ಪಾತ್ರ ವಹಿಸಿದೆ. ಆಕೆಯ ತಂದೆ ಮಂಜುನಾಥ್ ಮಂಗಳೂರಿನ ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಿ ಕಳೆದ 12 ವರ್ಷಗಳಿಂದ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದು, ತಾಯಿ ವನಜಾ ಗೃಹಿಣಿ. ಕಿರಿಯ ಸಹೋದರಿ ಸಹನಾ ಕಾರ್ಕಳದಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಅಡಚಣೆ ಅವಕಾಶವಾಗಬಾರದು: ಡಾ ಆಳ್ವ
“ಪ್ರತಿಭಾವಂತ ವಿದ್ಯಾರ್ಥಿಯ ಶಿಕ್ಷಣಕ್ಕೆ ಆರ್ಥಿಕ ಪರಿಸ್ಥಿತಿ ಅಡ್ಡಿಯಾಗಬಾರದು ಎಂಬುದು ಆಳ್ವಾಸ್‌ನ ಆಶಯ. ಸ್ನೇಹಾಳಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಅವಕಾಶ ಕಲ್ಪಿಸುವುದು ನಮ್ಮ ದತ್ತು ಯೋಜನೆಯ ಉದ್ದೇಶ. ಆಳ್ವಾಸ್ ಪಿಯು ಕಾಲೇಜಿನಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿನಿಯೇ ನಮ್ಮ ನೂತನ ವೈದ್ಯಕೀಯ ಕಾಲೇಜಿನ ಮೊದಲ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿರುವುದು ವಿಶೇಷ ಸಂತಸದ ಸಂಗತಿ. ಸ್ನೇಹಾ ಹಾಗೂ ಅವರ ಪೋಷಕರಿಗೆ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಉತ್ತಮ ವೈದ್ಯೆಯಾಗಿ ಸಮಾಜಕ್ಕೆ ಸೇವೆ ಸಲ್ಲಿಸಲಿ ಎಂಬುದು ನಮ್ಮ ಹಾರೈಕೆ,”- ಡಾ ಎಂ ಮೋಹನ್ ಆಳ್ವ.
ಭವಿಷ್ಯದಲ್ಲಿ ಹೃದ್ರೋಗ ತಜ್ಞೆಯಾಗುವ ಕನಸು
ಎಂಬಿಬಿಎಸ್ ಶಿಕ್ಷಣ ಆರಂಭಿಸುತ್ತಿರುವ ಸ್ನೇಹಾ, ಮುಂದೆ ಹೃದ್ರೋಗ ತಜ್ಞೆ (ಕಾರ್ಡಿಯಾಲಜಿಸ್ಟ್)ಯಾಗುವ ಗುರಿ ಹೊಂದಿದ್ದಾರೆ. ವೈದ್ಯಕೀಯ ವೃತ್ತಿಯನ್ನು ಕೇವಲ ಉದ್ಯೋಗವಾಗಿ ಕಾಣದೆ, ಅಗತ್ಯವಿರುವ ಜನರಿಗೆ ಸೇವೆ ಸಲ್ಲಿಸುವ ಮಾಧ್ಯಮವಾಗಿ ಬಳಸಬೇಕು ಎಂಬುದು ಅವರ ಆಶಯ.
ಯಕ್ಷಗಾನವೂ ಬದುಕಿನ ಅವಿಭಾಜ್ಯ ಭಾಗ
ಶೈಕ್ಷಣಿಕ ಸಾಧನೆಯ ಜೊತೆಗೆ ಸ್ನೇಹಾ ಯಕ್ಷಗಾನದ ತೆಂಕುತಿಟ್ಟು ಬಾಗವತಿಕೆಯಲ್ಲೂ ವಿಶೇಷ ಆಸಕ್ತಿ ಹೊಂದಿದ್ದಾರೆ. ಈಗಾಗಲೇ ಹಲವು ಕಾರ್ಯಕ್ರಮಗಳಲ್ಲಿ ಬಾಗವತಿಕೆಯ ಮೂಲಕ ಪ್ರದರ್ಶನ ನೀಡಿರುವ ಅವರು, ಮಹೇಶ್ ಕನ್ಯಾಡಿ ಅವರಿಂದ ತರಬೇತಿ ಪಡೆದಿದ್ದಾರೆ. ಪ್ರಸ್ತುತ ಬಾಗವತಿಕೆಯಲ್ಲಿ ಉನ್ನತ ಮಟ್ಟದ ತರಬೇತಿಯನ್ನೂ ಪಡೆಯುತ್ತಿದ್ದಾರೆ.
ಕರ್ನಾಟಕ ಸಂಗೀತದಲ್ಲೂ ಸಾಧನೆ
ಸ್ನೇಹಾಳ ಆಸಕ್ತಿ ಯಕ್ಷಗಾನಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರು ಕರ್ನಾಟಕ ಶಾಸ್ತ್ರೀಯ ಸಂಗೀತದ ಜೂನಿಯರ್ ಪರೀಕ್ಷೆಯಲ್ಲಿ ಶೇ.90 ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ವೈದ್ಯಕೀಯ ಶಿಕ್ಷಣದ ಜತೆಗೆ ಸಂಗೀತ ಹಾಗೂ ಯಕ್ಷಗಾನದಂತಹ ಸಾಂಸ್ಕೃತಿಕ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗುವ ಆಸಕ್ತಿ ಹೊಂದಿದ್ದಾರೆ.
ಡಾ. ಮೋಹನ್ ಆಳ್ವಾರಂತೆ ನಾನೂ ಸಮಾಜಕ್ಕೆ ಮರಳಿ ನೀಡಬೇಕು
ಸ್ನೇಹಾಳ ಕನಸು ವೈದ್ಯೆಯಾಗುವುದರೊಂದಿಗೆ ಮುಗಿಯುವುದಿಲ್ಲ. ಡಾ. ಮೋಹನ್ ಆಳ್ವಾ ಅವರನ್ನು ತಮ್ಮ ಆದರ್ಶವಾಗಿ ಪರಿಗಣಿಸಿರುವ ಅವರು, ಭವಿಷ್ಯದಲ್ಲಿ ತಾನು ವೈದ್ಯೆಯಾಗಿ ಸ್ಥಿರವಾದ ಬಳಿಕ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಹಾಗೂ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅವಕಾಶಗಳನ್ನು ಕಲ್ಪಿಸುವ ಆಶಯ ಹೊಂದಿದ್ದಾರೆ.
“ಡಾ. ಮೋಹನ್ ಆಳ್ವರು ನನಗೆ ನಿಜವಾದ ಆದರ್ಶ. ಅವರ ಶಿಕ್ಷಣ ಹಾಗೂ ಸಮಾಜಸೇವೆಯ ಕಾರ್ಯಗಳಿಂದ ನಾನು ಪ್ರೇರಣೆ ಪಡೆದಿದ್ದೇನೆ. ಭವಿಷ್ಯದಲ್ಲಿ ವೈದ್ಯೆಯಾದ ಬಳಿಕ ನಾನೂ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಸೇರಿದಂತೆ ಸಾಧ್ಯವಾದಷ್ಟು ನೆರವು ನೀಡಬೇಕು. ಶಿಕ್ಷಣದ ಜತೆಗೆ ಸಾಂಸ್ಕೃತಿಕ ಕ್ಷೇತ್ರದಲ್ಲೂ ಅವಕಾಶಗಳನ್ನು ಕಲ್ಪಿಸುವ ಮೂಲಕ ಸಮಾಜಕ್ಕೆ ನನ್ನದೇ ರೀತಿಯಲ್ಲಿ ಕೊಡುಗೆ ನೀಡಲು ಬಯಸುತ್ತೇನೆ,” ಎಂದು ಸ್ನೇಹಾ ತಿಳಿಸಿದ್ದಾರೆ.
ಸ್ನೇಹಾಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆ್ಯಂಡ್ ರಿಸರ್ಚ್ ಸೆಂಟರ್‌ನ ಡೀನ್ ಡಾ. ಮಹಾಬಲ ಶೆಟ್ಟಿ, ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮೊಹಮ್ಮದ್ ಸದಾಕತ್, ಸ್ನೇಹಾಳ ತಂದೆ ಮಂಜುನಾಥ್ ಹಾಗೂ ತಾಯಿ ವನಜಾ ಉಪಸ್ಥಿತರಿದ್ದರು.
______________________
“ನಾನು ವೈದ್ಯೆಯಾಗಬೇಕು ಎಂಬುದು ನನ್ನ ತಂದೆಯ ಕನಸಾಗಿತ್ತು. ಆ ಕನಸನ್ನು ನನಸು ಮಾಡಬೇಕು ಎಂಬ ಛಲದಿಂದ ಕಷ್ಟಪಟ್ಟು ಓದಿದೆ. ಆಳ್ವಾಸ್‌ನಲ್ಲಿ ದೊರೆತ ಗುಣಮಟ್ಟದ ಶಿಕ್ಷಣ, ತರಬೇತಿ ಮತ್ತು ಮಾರ್ಗದರ್ಶನದಿಂದ ನೀಟ್‌ಗೆ ಆತ್ಮವಿಶ್ವಾಸದಿಂದ ಸಿದ್ಧತೆ ನಡೆಸಲು ಸಾಧ್ಯವಾಯಿತು. ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಗೆ ಆಳ್ವಾಸ್‌ನ ದತ್ತು ಯೋಜನೆ ಬಹಳ ದೊಡ್ಡ ಬೆಂಬಲವಾಯಿತು : ಸ್ನೇಹಾ
________________________

Post a Comment

0 Comments

Advertisement