ಮೂಡುಬಿದಿರೆ: ವೇಗವಾಗಿ ಬೆಳೆಯುತ್ತಿರುವ ನಗರೀಕರಣಕ್ಕೆ ಅನುಗುಣವಾಗಿ ಸುಸ್ಥಿರ, ಸುವ್ಯವಸ್ಥಿತ ಹಾಗೂ ಜನಸ್ನೇಹಿ ನಗರಗಳನ್ನು ರೂಪಿಸುವಲ್ಲಿ ವಾಸ್ತುಶಿಲ್ಪಿಗಳು ಮತ್ತು ವಿನ್ಯಾಸಕರ ಪಾತ್ರ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ವಾಸ್ತುಶಿಲ್ಪ ಕ್ಷೇತ್ರದಲ್ಲಿ ಮುಂದಿನ ಪೀಳಿಗೆಗೆ ಅಪಾರ ಅವಕಾಶಗಳಿದ್ದು, ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆ ಮತ್ತು ತಾಂತ್ರಿಕ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಎಂದು ರೇವಾ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಕಿಟೆಕ್ಚರ್ ನಿರ್ದೇಶಕ ಪ್ರೊ. ಸುಧೀರ್ ಆಚಾರ್ಯ ಹೇಳಿದರು.
ಆಳ್ವಾಸ್ ಪಿಯು ಕಾಲೇಜಿನ ವತಿಯಿಂದ ವಿದ್ಯಾರ್ಥಿಗಳಿಗಾಗಿ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ನಾಟಾ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ನಾಟಾ ಪರೀಕ್ಷೆಯನ್ನು ಕೇವಲ ಪ್ರವೇಶ ಪರೀಕ್ಷೆ ಅಥವಾ ಶೈಕ್ಷಣಿಕ ಕಲಿಕೆಯ ಒಂದು ಹಂತವಾಗಿ ಪರಿಗಣಿಸಬಾರದು. ಈ ಕ್ಷೇತ್ರವು ವಿದ್ಯಾರ್ಥಿಗಳಲ್ಲಿ ವಿನ್ಯಾಸ ಚಿಂತನೆ, ಸೃಜನಶೀಲತೆ ಮತ್ತು ಸಮಸ್ಯೆ ಪರಿಹರಿಸುವ ಸಾಮರ್ಥ್ಯವನ್ನು ಬೆಳೆಸುವ ಪ್ರಮುಖ ಅವಕಾಶವಾಗಿದೆ ಎಂದರು.
ಭಾರತದಲ್ಲಿ ನಗರೀಕರಣ ವೇಗವಾಗಿ ವಿಸ್ತರಿಸುತ್ತಿದ್ದು, ಮುಂದಿನ ದಿನಗಳಲ್ಲಿ ವಸತಿ, ವಾಣಿಜ್ಯ, ಸಾರ್ವಜನಿಕ ಮೂಲಸೌಕರ್ಯ, ಸಾರಿಗೆ ಹಾಗೂ ಪರಿಸರ ಸ್ನೇಹಿ ನಗರ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ದೊರೆಯಲಿದೆ. ಇದಕ್ಕೆ ಕೇವಲ ಕಟ್ಟಡ ನಿರ್ಮಾಣದ ಜ್ಞಾನ ಹೊಂದಿರುವವರಷ್ಟೇ ಅಲ್ಲದೆ, ಸೃಜನಶೀಲವಾಗಿ ಯೋಚಿಸುವ, ತಾಂತ್ರಿಕ ಜ್ಞಾನವನ್ನು ವಿನ್ಯಾಸದೊಂದಿಗೆ ಸಂಯೋಜಿಸುವ ಹಾಗೂ ಸಾಮಾಜಿಕ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವ ವಾಸ್ತುಶಿಲ್ಪಿಗಳ ಅಗತ್ಯವಿದೆ ಎಂದರು.
ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಚಾರ‍್ಯ ಮೊಹಮ್ಮದ್ ಸದಾಕತ್ ಮಾತನಾಡಿ, ಭಾರತದಲ್ಲಿ ಮೂಲಸೌಕರ್ಯ ಮತ್ತು ನಗರಾಭಿವೃದ್ಧಿ ಕ್ಷೇತ್ರ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ವಾಸ್ತುಶಿಲ್ಪ ಕ್ಷೇತ್ರದಲ್ಲಿ ಉದ್ಯೋಗ ಮತ್ತು ವೃತ್ತಿ ಅವಕಾಶಗಳು ಹೆಚ್ಚುತ್ತಿವೆ. ಆರ್ಕಿಟೆಕ್ಚರ್ ಸ್ಟುಡಿಯೋಗಳು, ರಿಯಲ್ ಎಸ್ಟೇಟ್, ನಗರ ಯೋಜನೆ, ಒಳಾಂಗಣ ವಿನ್ಯಾಸ, ಲ್ಯಾಂಡ್‌ಸ್ಕೇಪ್ ವಿನ್ಯಾಸ, ನಿರ್ಮಾಣ ಕ್ಷೇತ್ರ, ಸರ್ಕಾರಿ ಸಂಸ್ಥೆಗಳು ಹಾಗೂ ವಿವಿಧ ವಿನ್ಯಾಸಾಧಾರಿತ ಕ್ಷೇತ್ರಗಳಲ್ಲಿ ವೃತ್ತಿ ಅವಕಾಶಗಳಿವೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಸಂಜೀವ್ ಎನ್ ಕೊಪ್ಪರ್, ಕೃಷ್ಣ ಪ್ರಸಾದ್ ಕೆ, ಸಾಯಿಕಿರಣ್ ರಾಯ್ಕರ್ ಮಾಹಿತಿಯನ್ನು ನೀಡಿದರು. ಕಾರ‍್ಯಕ್ರಮದಲ್ಲಿ ಉಪಪ್ರಾಂಶುಪಾಲೆ ಝಾನ್ಸಿ ಪಿಎನ್, ನಾಟಾ ವಿಭಾಗದ ಸಂಯೋಜಕಿ ರಮ್ಯಾ ರೈ ಪಿಡಿ, ಮೈತ್ರಿ ಉಪಸ್ಥಿತರಿದ್ದರು.
ವೇದಾವತಿ ಕಾರ‍್ಯಕ್ರಮ ನಿರೂಪಿಸಿದರು.

0 Comments