ಸೆ. 26ರಂದು ಶ್ರೀ ಮಹಾವೀರ ಕಾಲೇಜಿನಲ್ಲಿ ಹಣಕಾಸಿನ ಒಳಗೊಳ್ಳುವಿಕೆ, ಕೌಶಲ್ಯ ಭಾರತ ಮತ್ತು ಉದ್ಯಮಶೀಲತೆ” ಕುರಿತು ರಾಷ್ಟ್ರೀಯ ಬಹುಶಿಸ್ತೀಯ ಸಮ್ಮೇಳನ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಸೆ. 26ರಂದು ಶ್ರೀ ಮಹಾವೀರ ಕಾಲೇಜಿನಲ್ಲಿ ಹಣಕಾಸಿನ ಒಳಗೊಳ್ಳುವಿಕೆ, ಕೌಶಲ್ಯ ಭಾರತ ಮತ್ತು ಉದ್ಯಮಶೀಲತೆ” ಕುರಿತು ರಾಷ್ಟ್ರೀಯ ಬಹುಶಿಸ್ತೀಯ ಸಮ್ಮೇಳನ

ಮೂಡುಬಿದಿರೆ :ಶ್ರೀ ಮಹಾವೀರ ಕಾಲೇಜು, ಮೂಡಬಿದಿರೆಯ ಅರ್ಥಶಾಸ್ತ್ರ ವಿಭಾಗವು ಮಂಗಳೂರು ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ಸಂಘದ (MUEA) ಸಹಯೋಗದೊಂದಿಗೆ “ಹಣಕಾಸಿನ ಒಳಗೊಳ್ಳುವಿಕ, ಕೌಶಲ್ಯ ಭಾರತ ಮತ್ತು ಉದ್ಯಮಶೀಲತೆ: ಸಮಗ್ರ ಬೆಳವಣಿಗೆ ಹಾಗೂ ಸುಸ್ಥಿರ ಅಭಿವೃದ್ಧಿಯತ್ತ ಮಾರ್ಗಗಳು” ಎಂಬ ವಿಷಯದ ಕುರಿತು ಒಂದು ದಿನದ ಬಹುಶಿಸ್ತೀಯ ರಾಷ್ಟ್ರೀಯ ಸಮ್ಮೇಳನವನ್ನು ಸೆ. 26ರಂದು ಶ್ರೀ ಮಹಾವೀರ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಶ್ರೀ ಮಹಾವೀರ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಂಗಳವಾರ ಸಮಾಜ ಮಂದಿರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹಣಕಾಸಿನ ಒಳಗೊಳ್ಳುವಿಕೆ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯ ಮೂಲಕ ಸಮಗ್ರ ಆರ್ಥಿಕ ಬೆಳವಣಿಗೆ ಹಾಗೂ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವ ನಿಟ್ಟಿನಲ್ಲಿ ಶೈಕ್ಷಣಿಕ ಚರ್ಚೆ, ಸಂಶೋಧನಾ ವಿಚಾರ ವಿನಿಮಯ ಮತ್ತು ಹೊಸ ಆಲೋಚನೆಗಳಿಗೆ ವೇದಿಕೆ ಕಲ್ಪಿಸುವುದು ಸಮ್ಮೇಳನದ ಪ್ರಮುಖ ಉದ್ದೇಶವಾಗಿದೆ. ಹಣಕಾಸಿನ ಒಳಗೊಳ್ಳುವಿಕೆ, ಕೌಶಲ್ಯಾಭಿವೃದ್ಧಿ ಮತ್ತು ಮಾನವ ಬಂಡವಾಳ, ಉದ್ಯಮಶೀಲತೆ ಹಾಗೂ ಸ್ಮಾರ್ಟ್ ಅಪ್‌ಗಳು, ಬ್ಯಾಂಕಿಂಗ್ ಮತ್ತು ಉದ್ಯಮಶೀಲ ಹಣಕಾಸು, ಮಹಿಳೆಯರು ಮತ್ತು ಯುವಜನರ ಉದ್ಯಮಶೀಲತೆ, ಡಿಜಿಟಲ್ ಆರ್ಥಿಕತೆ ಮತ್ತು ಫಿನ್‌ಟೆಕ್, ಸುಸ್ಥಿರ ಹಾಗೂ ಹಸಿರು ಉದ್ಯಮಶೀಲತೆ, ಗ್ರಾಮೀಣ ಮತ್ತು ಕೃಷಿ ಉದ್ಯಮಶೀಲತೆ ಸೇರಿದಂತೆ ವಿವಿಧ ಆಯಾಮಗಳ ಕುರಿತು ವಿಚಾರ ವಿನಿಮಯ ನಡೆಯಲಿದೆ.

ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮವು ಸೆ. 26ರಂದು ಬೆಳಗ್ಗೆ 9.45ಕ್ಕೆ ನಡೆಯಲಿದ್ದು, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಪ್ರೊ-ಚಾನ್ಸಲರ್ ಹಾಗೂ ಎ.ಜಿ.ಇ., ಮಣಿಪಾಲ್‌ನ ಅಧ್ಯಕ್ಷರಾದ ಡಾ. ಎಚ್. ಎಸ್. ಬಲ್ಲಾಳ್ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಶ್ರೀ ಮಹಾವೀರ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ. ಅಭಯಚಂದ್ರ ಜೈನ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಬ್ಯಾಂಕ್ ಆಫ್ ಬರೋಡಾದ ಮುಖ್ಯ ವ್ಯವಸ್ಥಾಪಕರು ಹಾಗೂ ಅಡಮಾನ ಸಾಲ ಮತ್ತು ಚಿಲ್ಲರೆ ಆಸ್ತಿಗಳ ವಿಭಾಗದ ಮುಖ್ಯ ಪ್ರಧಾನ ಮುಖ್ಯವ್ಯವಸ್ಥಾಪಕರಾದ ಎಂ. ರವೀಂದ್ರ ರೈ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಶ್ರೀ ಮಹಾವೀರ ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಸಂಪತ್ ಸಾಮ್ರಾಜ್ಯ ಅವರು ಗೌರವ ಅತಿಥಿಯಾಗಿ ಉಪಸ್ಥಿತರಿರುವರು.

ಭಾರತೀಯ ರಿಸರ್ವ್ ಬ್ಯಾಂಕ್‌ನ ಬೆಂಗಳೂರು ಪ್ರಾದೇಶಿಕ ಕಚೇರಿಯ ಫಿನ್‌ಟಿಕ್ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಸ್ವಪ್ನಿಲ್ ಶಾನು ಭಾರ್ಗವ್ ಅವರು ಪ್ರಧಾನ ಭಾಷಣಕಾರರಾಗಿ ಭಾಗವಹಿಸಲಿದ್ದು, “ಫಿನ್‌ಟೆಕ್ ಆಧಾರಿತ ಹಣಕಾಸಿನ ಒಳಗೊಳ್ಳುವಿಕೆ: ಡಿಜಿಟಲ್ ಆರ್ಥಿಕತೆಯಲ್ಲಿ ಹಣಕಾಸಿನ ಪ್ರವೇಶ, ಸಬಲೀಕರಣ ಮತ್ತು ಸುಸ್ಥಿರ ಬೆಳವಣಿಗೆಯ ಪರಿವರ್ತನೆ’ ಎಂಬ ವಿಷಯದ ಕುರಿತು ಪ್ರಧಾನ ಭಾಷಣ ಮಾಡಲಿದ್ದಾರೆ. ಈ ಅವಧಿಯ ಮುಖ್ಯ ಅತಿಥಿಯಾಗಿ ಮಹಾವೀರ ಕಾಲೇಜಿನ ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಪಕರಾದ ಪ್ರೊ. ಎಸ್. ನಾರಾಯಣ ರಾವ್ ಭಾಗವಹಿಸಲಿದ್ದಾರ. ಪೊಂಪೈ ಕಾಲೇಜು,ಐಕಳದ ಪ್ರಾಂಶುಪಾಲರಾದ ಡಾ. ಪುರುಷೋತ್ತಮ ಕೆ.ವಿ. ಇವರು ಈ ಅವಧಿಯ ಅಧ್ಯಕ್ಷ ವಹಿಸಲಿದ್ದಾರೆ.

ಸಮ್ಮೇಳನದ ತಾಂತ್ರಿಕ ಅಧಿವೇಶನದಲ್ಲಿ “ವಿಕಸಿತ ಭಾರತ ೨೦೪೭ರತ್ತ ಕೌಶಲ್ಯ ಭಾರತ ಮತ್ತು ಉದ್ಯಮಶೀಲತೆ: ಕೌಶಲ್ಯಗಳನ್ನು ಉದ್ಯೋಗ, ನಾವೀನ್ಯತೆ ಮತ್ತು ಸಮಗ್ರ ಬೆಳವಣಿಗೆಯಾಗಿ ಪರಿವರ್ತಿಸುವುದು” ಎಂಬ ವಿಷಯದ ಕುರಿತು ವಿಚಾರ ವಿನಿಮಯ ನಡೆಯಲಿದೆ. ಮಂಜೇಶ್ವರದ ಸರ್ಕಾರಿ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಸಜಿತ್ ಕುಮಾರ್ ಪಿ. ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಎಸ್.ಡಿ.ಎಂ. ಕಾಲೇಜು ಉಜಿರೆಯ ನಿವೃತ್ತ ಪ್ರಾಂಶುಪಾಲರಾದ ಡಾ. ಜಯಕುಮಾರ್ ಶೆಟ್ಟಿ ಇವರು ಈ ಅವಧಿಯ ಅಧ್ಯಕ್ಷತೆ ವಹಿಸಲಿದ್ದಾರೆ.

ಮಧ್ಯಾಹ್ನ 1.45 ರಿಂದ 3.30ರವರೆಗೆ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗಾಗಿ ಸಂಶೋಧನಾ ಪ್ರಬಂಧ ಮಂಡನೆ ನಡೆಯಲಿದೆ. ವಿವಿಧ ಕಾಲೇಜುಗಳು ಹಾಗೂ ವಿಶ್ವವಿದ್ಯಾನಿಲಯಗಳಿಂದ ಆಗಮಿಸುವ ವಿದ್ಯಾರ್ಥಿಗಳು, ಬೋಧಕರು ಮತ್ತು ಸಂಶೋಧಕರು ಸಮ್ಮೇಳನದ ವಿಷಯಕ್ಕೆ ಸಂಬಂಧಿಸಿದ ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ವಿದ್ಯಾರ್ಥಿಗಳ ವಿಭಾಗದಲ್ಲಿ ಮಂಡಿಸಲಾಗುವ ಸಂಶೋಧನಾ ಪ್ರಬಂಧಗಳಲ್ಲಿ ಅತ್ಯುತ್ತಮ ಪ್ರಬಂಧಕ “ಅತ್ಯುತ್ತಮ ಸಂಶೋಧನಾ ಪ್ರಬಂಧ ಪ್ರಶಸ್ತಿ’ (“Best Paper Award”) ನೀಡಿ ಗೌರವಿಸಲಾಗುವುದು.

ಸಮ್ಮೇಳನದ ಸಮಾರೋಪ ಸಮಾರಂಭ ಸಂಜೆ 3.30ಕ್ಕೆ, ನಡೆಯಲಿದ್ದು, ಶ್ರೀನಿವಾಸ ವಿಶ್ವವಿದ್ಯಾನಿಲಯದ ಸಂಶೋಧನಾ ಪ್ರಾಧ್ಯಾಪಕರಾದ ಡಾ. ಶ್ರೀಪತಿ ಕಲ್ಲೂರಾಯ ಪಿ. ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ಶ್ರೀ ಮಹಾವೀರ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಧಾಕೃಷ್ಣ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ಅಧ್ಯಕ್ಷರಾದ ಡಾ. ಜಗದೀಶ ಟಿ., ಎಂಜಿಎಂ ಕಾಲೇಜು, ಉಡುಪಿಯ ಅರ್ಥಶಾಸ್ತ್ರ ವಿಭಾಗದ ಮಾಜಿ ಸಹ ಪ್ರಾಧ್ಯಾಪಕರಾದ ಪ್ರೊ. ಎಂ. ಚನ್ನ ಪೂಜಾರಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ಸಂಘದ ಅಧ್ಯಕ್ಷರಾದ ಪ್ರೊ. ಶ್ರೀಲತಾ ಕಮಿಲ ಅವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಮ್ಮೇಳನದಲ್ಲಿ ಶಿಕ್ಷಣ ತಜ್ಞರು, ಸಂಶೋಧಕರು, ವಿದ್ಯಾರ್ಥಿಗಳು, ಉದ್ಯಮಿಗಳು, ಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರದ ತಜ್ಞರು ಹಾಗೂ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ತಮ್ಮ ಸಂಶೋಧನೆ, ಅನುಭವ ಮತ್ತು ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ. ಅಮೃತ್ ಭಾರತ-2047. ಆತ್ಮನಿರ್ಭರ ಭಾರತ ’ಹಾಗೂ ವಿಕಸಿತ ಭಾರತದ ಗುರಿಗಳ ಹಿನ್ನೆಲೆಯಲ್ಲಿ ಹಣಕಾಸಿನ ಒಳಗೊಳ್ಳುವಿಕೆ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯ ಮಹತ್ವದ ಕುರಿತು ವಿಶೇಷವಾಗಿ ಚರ್ಚೆ ನಡೆಯಲಿದೆ.

ಸಮ್ಮೇಳನದಲ್ಲಿ ಮಂಡಿಸಲಾಗುವ ಆಯ್ದ ಸಂಶೋಧನಾ ಪ್ರಬಂಧಗಳನ್ನಯ ಐಎಸ್‌ಬಿಎನ್ ಹೊಂದಿರುವ ಸಂಪಾದಿತ ಸಂಪುಟದಲ್ಲಿ ಪ್ರಕಟಿಸುವ ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನದ ಬಳಿಕ ಸಂಜೆ 4.30ರಿಂದ ಪ್ರಮಾಣಪತ್ರ ವಿತರಣೆ ನಡೆಯಲಿದೆ.ಈ ರಾಷ್ಟ್ರೀಯ ಬಹುಶಿಸ್ತೀಯ ಸಮ್ಮೇಳನಕ್ಕೆ ಶಿಕ್ಷಣ ತಜ್ಞರು, ಸಂಶೋಧಕರು, ವಿದ್ಯಾರ್ಥಿಗಳು, ಬೋಧಕರು ಹಾಗೂ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಆತ್ಮೀಯವಾಗಿ ಆಹ್ವಾನಿಸಿದ್ದಾರೆ.

ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಮತ್ತು ಪ್ರಾಧ್ಯಾಪಕರಿಂದ ಪ್ರಬಂಧ ಮಂಡನೆ ನಡೆಯಲಿದೆ. ಹಣಕಾಸು ಅರಿವಿನೊಂದಿಗೆ ಈ ಸಮ್ಮೇಳನ ನಡೆಯಲಿದ್ದು, ಸುಮಾರು 30ಕ್ಕೂ ಅಧಿಕ ಪ್ರಬಂಧ ಮಂಡನೆಯಾಗಲಿದೆ.

ಶ್ರೀ ಮಹಾವೀರ ಕಾಲೇಜು ವಿಶ್ವಸ್ಥ ಮಂಡಳಿ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಉಪಾಧ್ಯಕ್ಷರಾದ ಸಂಪತ್ ಸಾಮ್ರಾಜ್ಯ, ಸದಸ್ಯ ಹೆಚ್. ಸುರೇಶ್ ಪ್ರಭು, ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಧಕೃಷ್ಣ ಶೆಟ್ಟಿ, ಅರ್ಥಶಾಸ್ತ್ರ ಒಕ್ಕೂಟದ ಅಧ್ಯಕ್ಷೆ ಶ್ರೀಲತಾ ಕಮಿಲ, ಕಾರ್ಯದರ್ಶಿ ಅನಿಲ್ ಮೆಲ್ವಿನ್ ಕ್ಯಾಸ್ತಲಿನ್, ನಿವೃತ್ತ ಪ್ರಾಧ್ಯಾಪಕ ಚೆನ್ನ ಪೂಜಾರಿ, ಸಂಯೋಜಕ ಡಾ. ಮಹೇಶ್ ಶೆಟ್ಟಿ, ಗೀತಾ ಕುಮಾರಿ, ಪದಾಧಿಕಾರಿಗಳಾದ ಶ್ರೀಗೌರಿ ಕೆ., ಪ್ರಾಧ್ಯಾಪಕ ಹರೀಶ್ ಗೋಷ್ಠಿಯಲ್ಲಿ ಭಾಗವಹಿಸಿದ್ದರು.

Post a Comment

0 Comments

Advertisement