ಕಾಂತಾವರದಲ್ಲಿ ನಾಡಿಗೆ ನಮಸ್ಕಾರ, ಕೃತಿಗಳ ಲೋಕಾರ್ಪಣೆ
ಮೂಡುಬಿದಿರೆ: ನಮ್ಮ ರಾಜ್ಯದಲ್ಲಿ 676 ಹಾಗೂ ದ.ಕ ಜಿಲ್ಲೆಯಲ್ಲೇ 34 ಕನ್ನಡ ಮಾಧ್ಯಮ ಶಾಲೆಗಳು ಈ ಬಾರಿ ಮುಚ್ಚಿವೆ. ಸರಕಾರವಂತೂ ಕನ್ನಡ ಮಾಧ್ಯಮ ಶಾಲೆಗಳು ಸಾಯಲೂ ಬಾರದು ಬದುಕಲೂ ಬಾರದು ಎಂಬಂತ ಧೋರಣೆ ತಳೆದಂತಿದೆ. ಕನ್ನಡ ಬಾರದ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವ ಈ ಪರಿಸ್ಥಿತಿಗೆ ನಮ್ಮ ಕೊಡುಗೆ ಎಷ್ಟಿದೆ? ಕನ್ನಡದ ಉಳಿವು ಬೆಳವಣಿಗೆಗೆ ನಾವೇನು ಮಾಡಿದ್ದೇವೆ ಎನ್ನುವ ಗಂಭೀರ ಅವಲೋಕನ ನಮ್ಮೆಲ್ಲರಿಂದಾಗಬೇಕಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲೂ ತವರು ಜಿಲ್ಲೆಯಲ್ಲೇ 385 ರಷ್ಟು ಸಾಧಕರನ್ನು ಕೃತಿ ರೂಪದಲ್ಲಿ ದಾಖಲಿಸಿ ನಾಡಿಗೆ ನಮಸ್ಕರಿಸುತ್ತಿರುವ ಕಾಂತಾವರದ ಕನ್ನಡ ಸಂಘ ನಾಡ ನುಡಿ ಉಳಿವಿಗೆ ಶ್ರಮಿಸುತ್ತಿರುವ ಅನನ್ಯ ಮಾದರಿಗಳಲ್ಲಿ ಮಹತ್ವದ್ದು ಎಂದು ಸಾಹಿತಿ, ಪ್ರಾಧ್ಯಾಪಕ ಟಿ.ಎನ್. ಖಂಡಿಗೆ ಹೇಳಿದರು. ಅವರು ಶನಿವಾರ ಅಪರಾಹ್ನ ಕನ್ನಡ ಸಂಘ ಕಾಂತಾವರ (ರಿ.) ವತಿಯಿಂದ ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನದಲ್ಲಿ ಜರಗಿದ ನಾಡಿಗೆ ನಮಸ್ಕಾರ'''' ಗ್ರಂಥಮಾಲೆಯ ನೂತನ ಕೃತಿಗಳ ಲೋಕಾರ್ಪಣಾ ಸಮಾರಂಭವನ್ನು ದೀಪ ಪ್ರಜ್ವಲನದೊಂದಿಗೆ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಕಟ್ಟಲು ಹಲವು ಮಾದರಿಗಳಿವೆ. ಕನ್ನಡ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ, ಕನ್ನಡ ಪತ್ರಿಕೆಗಳನ್ನು ಕೊಂಡು ಓದುವ ಜತೆಗೆ ಕನಿಷ್ಠ ಕನ್ನಡ ಸಾಹಿತ್ಯ ಕಾರ್ಯಕ್ರಮಗಳಿಗೆ ಹಾಜರಾಗುವುದೂ ಒಂದು ಸೇವೆಯೇ ಆಗಿದೆ ಎಂದವರು ಹೇಳಿದರು.
ಉದ್ಯಮಿ ಕೆ. ಶ್ರೀಪತಿ ಭಟ್ ಗಣ್ಯರ ಜತೆಗೆ ನಾಡಿಗೆ ನಮಸ್ಕಾರ ಗ್ರಂಥಮಾಲೆಗೆ ಸೇರ್ಪಡೆಯಾಗಲಿರುವ ನೂನತ 7 ಕೃತಿಗಳನ್ನು ಲೋಕಾರ್ಪಣೆ ನೆರವೇರಿಸಿ ಶಿಕ್ಷಣ ವ್ಯವಸ್ಥೆಯ ಲೋಪಗಳು ಕನ್ನಡ ಮಾಧ್ಯಮ ಶಾಲೆಗಳ ಅವನತಿಗೆ ಕಾರಣವಾಗುತ್ತಿವೆ ಎಂದರು.
ಕ.ಸಾ.ಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿ ಮಕ್ಕಳಿಗೆ ಕನ್ನಡ ಬಾರದ ಪರಿಸ್ಥಿತಿಯಲ್ಲಿ ಭಾಷೆಯ ಉಳಿವಿಗೆ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದರು.
ಕೃತಿಗಳ ಲೋಕಾರ್ಪಣೆ : ಅಧ್ಯಯನಶೀಲ ಅನುವಾದಕ, ಸಂಶೋಧಕ, ಸಾಹಿತಿ ಡಾ. ಮೋಹನ ಕುಂಟಾರ್ (ಲೇ: ಡಾ. ಸುಷ್ಮಾ ಎಂ. ಬೆಂಗಳೂರು); ಬಹುಮುಖ ಪ್ರತಿಭಾವಂತ, ಶಿಕ್ಷಕ, ಸಂಘಟಕ ನರೇಂದ್ರಕುಮಾರ್ ಕೋಟ (ಲೇ: ನೀಲಾವರ ಸುರೇಂದ್ರ ಅಡಿಗ); ಕರಾವಳಿಯ ಪ್ರವಾಸೋದ್ಯಮಕ್ಕೆ ಹೊಸ ಭಾಷ್ಯ ಬರೆದ ನಿರ್ಮಲಾ ಟ್ರಾವೆಲ್ಸ್ (ಲೇ: ಕನ್ಸೆಪ್ಪಾ ಫೆರ್ನಾಂಡಿಸ್); ವಿದ್ವತ್ತು, ವಿನಯ ವಿಶಾರದ ನೆಂಪು ನರಸಿಂಹ ಭಟ್ಟ (ಲೇ: ಬೆಳಗೋಡು ರಮೇಶ ಭಟ್); ನಿವೃತ್ತ ಪ್ರಾಚಾರ್ಯ, ಸವ್ಯಸಾಚಿ ಸಾಹಿತಿ ಉದಯಕುಮಾರ್ ಹಬ್ಬು (ಲೇ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು); ಕಲೆ-ಸಾಹಿತ್ಯ ಹೃದಯಿ ಖ್ಯಾತ ಅಸ್ಥಿಚಿಕಿತ್ಸಾತಜ್ಞ ಡಾ. ಭಾಸ್ಕರಾನಂದ ಕುಮಾರ್ (ಲೇ: ಜ್ಯೋತಿ ಮಹಾದೇವ್); ಬಹುಶ್ರುತ ಸಾಹಿತ್ಯ-ಸಂಸ್ಕೃತಿ ವಿದ್ವಾಂಸ ಪ್ರೊ. ಎ. ಸುಬ್ಬಣ್ಣ ರೈ (ಲೇ: ಡಾ. ಎಂ.ಎಸ್. ದುರ್ಗಾ ಪ್ರವೀಣ) ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.
ಕನ್ನಡ ಸಂಘದ ಕಾರ್ಯಾಧ್ಯಕ್ಷ ಡಾ. ನಾ. ಮೊಗಸಾಲೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.
ಗ್ರಂಥಮಾಲೆಯ ಸಂಪಾದಕ ಡಾ. ಬಿ ಜನಾರ್ಧನ ಭಟ್ ಕೃತಿಗಳ ಕುರಿತು ವಿವರ ನೀಡಿದರುಸಾಧಕರು ,ಕೃತಿಗಳ ಲೇಖಕರು/ ಮತ್ತು ಪ್ರಾಯೋಜಕರನ್ನು ಗೌರವಿಸಲಾಯಿತು. ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

0 Comments