ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್ ವೇದಿಕೆಯಿಂದ ಮಂಗಳವಾರ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ‘ಪ್ರಕೃತಿಯ ಅದೃಶ್ಯ ಕೊಂಡಿಗಳು: ಪರಿಸರ ವ್ಯವಸ್ಥೆಯ ನಿಯಂತ್ರಣ ಸೂತ್ರಗಳು’ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕೃಷಿ ವಿಜ್ಞಾನಿ, ಕಾದಂಬರಿಕಾರ ಹಾಗೂ ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಹಿರಿಯ ವಿಜ್ಞಾನಿ ಡಾ. ಕೆ.ಎನ್. ಗಣೇಶಯ್ಯ ಉಪನ್ಯಾಸ ನೀಡಿ ಮಾತನಾಡಿ ಕೋಲಾರದ ನೀರಿನ ಕೊರತೆ ನೀಗಿಸಲು ಹೊರಗಿನಿಂದ ನೀರು ಹರಿಸುವ ಬದಲು, ಅಲ್ಲಿನ ಮಳೆನೀರನ್ನು ಸಂರಕ್ಷಿಸಿ ಅಂತರ್ಜಲ ಮರುಪೂರಣಗೊಳಿಸುವ ಸಮಗ್ರ ಜಲ ನಿರ್ವಹಣಾ ತಂತ್ರ ರೂಪಿಸಬೇಕು ಎಂದು ಹೇಳಿದರು.
ಹೊರಗಿನಿಂದ ಬರುವ ನೀರಿನ ಮೇಲೆ ಅವಲಂಬಿತರಾಗದೆ, ನಮ್ಮ ತಲೆಯ ಮೇಲೆ ಬೀಳುವ ನೀರನ್ನು ಸಂರಕ್ಷಿಸುವ ತಂತ್ರ ರೂಪಿಸಬೇಕು. ಪ್ರಕೃತಿಯ ಸೂಕ್ಷ್ಮ ಹಾಗೂ ಅದೃಶ್ಯ ಪ್ರಕ್ರಿಯೆಗಳು ಪರಸ್ಪರ ಬೆಸೆದುಕೊಂಡಿದ್ದು, ಒಂದರಲ್ಲಿ ಬದಲಾವಣೆ ಮಾಡಿದರೂ ಮತ್ತೊಂದರ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಪರಿಸರ ವ್ಯವಸ್ಥೆಗೆ ಹಾನಿಯಾದ ಬಳಿಕ ಪುನಃಸ್ಥಾಪಿಸುವುದಕ್ಕಿಂತ, ಈಗಿರುವ ವ್ಯವಸ್ಥೆಯನ್ನು ಮುಂದಿನ ಪೀಳಿಗೆಗೆ ಹಾನಿಯಾಗದಂತೆ ಹಸ್ತಾಂತರಿಸುವುದು ಉತ್ತಮ ಮಾರ್ಗ ಎಂದರು. ಸಣ್ಣ ಮಾನವೀಯ ಹಸ್ತಕ್ಷೇಪಗಳೂ ಸರಣಿ ಪರಿಣಾಮ ಉಂಟುಮಾಡಬಹುದು ಎಂದು ಎಚ್ಚರಿಸಿದರು. ಪ್ರಕೃತಿಯಲ್ಲಿರುವ ಬದುಕಿನ ಆಧಾರಸ್ತಂಭಗಳು ಹಲವು ಬಾರಿ ಗೋಚರಿಸುವುದಿಲ್ಲ. ಅವುಗಳ ಮಹತ್ವ ಅರಿತು ಸಂರಕ್ಷಿಸುವ ಜವಾಬ್ದಾರಿ ಸಮಾಜಕ್ಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ, ಸ್ವಚ್ಛತೆ ಮನಸ್ಸಿನಿಂದ ಆರಂಭವಾಗಬೇಕು ಎಂದರು.
ರೋಸ್ಟ್ರಮ್ ಸ್ಪೀರ್ಸ್ ಕ್ಲಬ್ ಅಧ್ಯಕ್ಷೆ ಡಾ. ದೀಪಾ ಕೊಠಾರಿ, ಕಾರ್ಯಕ್ರಮ ನಿರ್ದೇಶಕಿ ಡಾ. ರುಚಿಕಾ ರೋಶನ್, ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಕೆ.ವಿ. ಶಂಕರ್ ಇದ್ದರು. ಯೋಗೇಶ್ವರ ಕಾರ್ಯಕ್ರಮ ನಿರೂಪಿಸಿ, ಖ್ಯಾತಿ ವಂದಿಸಿದರು.

0 Comments