ಮೂಡುಬಿದಿರೆ: ಭಾಷೆ ಕೇವಲ ವಿಚಾರಗಳನ್ನು ಮತ್ತೊಬ್ಬರಿಗೆ ತಲುಪಿಸುವ ಸಂವಹನದ ಸಾಧನವಲ್ಲ; ಅದೊಂದು ಕಲೆ. ವ್ಯಾಕರಣದ ಚೌಕಟ್ಟನ್ನು ಸರಿಯಾಗಿ ಬಳಸುವುದರಿಂದ ಮಾತ್ರ ಪರಿಣಾಮಕಾರಿ ಸಂವಹನ ಸಾಧ್ಯವಾಗುವುದಿಲ್ಲ. ಧ್ವನಿಯ ಏರಿಳಿತ, ಲಯ, ಭಾವ ಮತ್ತು ಸಂದರ್ಭಕ್ಕೆ ತಕ್ಕ ಭಾಷೆಯ ಬಳಕೆಯೇ ಮಾತನ್ನು ಪರಿಣಾಮಕಾರಿಯಾಗಿಸುತ್ತದೆ ಎಂದು ನಿವೃತ್ತ ಪ್ರಾಧ್ಯಾಪಕ ಹಾಗೂ ರಂಗಚಿಂತಕ ಡಾ. ಆರ್. ನರಸಿಂಹಮೂರ್ತಿ ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ ಮೂಡುಬಿದಿರೆ ಘಟಕ ಹಾಗೂ ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ‘ಶಿಕ್ಷಣ ಮತ್ತು ರಂಗಭೂಮಿ’ ವಿಷಯದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾಷೆಯನ್ನು ಕೇವಲ ಪಠ್ಯಪುಸ್ತಕದ ವಿಷಯವಾಗಿ ನೋಡುವ ಬದಲು, ಜೀವನದ ವಿವಿಧ ಸಂದರ್ಭಗಳಲ್ಲಿ ಅದನ್ನು ಪರಿಣಾಮಕಾರಿಯಾಗಿ ಬಳಸುವ ಕಲೆಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಒಬ್ಬ ವ್ಯಕ್ತಿಯ ಮಾತಿನ ಶೈಲಿ, ಧ್ವನಿಯ ಏರಿಳಿತ, ಪದಗಳ ಆಯ್ಕೆ ಮತ್ತು ಅಭಿವ್ಯಕ್ತಿಯಲ್ಲಿರುವ ಭಾವನೆಗಳು ಆತನ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತವೆ. ಹೀಗಾಗಿ ಭಾಷೆಯ ಮೇಲಿನ ಹಿಡಿತವು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೃತ್ತಿಪರ ಬೆಳವಣಿಗೆಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ರಂಗಭೂಮಿ ಬದುಕಿನ ಭಾಗ
ರಂಗಭೂಮಿ ಕೇವಲ ಮನರಂಜನೆ ಅಥವಾ ಪ್ರದರ್ಶನದ ವೇದಿಕೆಯಲ್ಲ; ಅದು ಬದುಕನ್ನು ಅರ್ಥಮಾಡಿಕೊಳ್ಳುವ ಮತ್ತು ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಪ್ರಮುಖ ಮಾಧ್ಯಮ. ರಂಗಭೂಮಿಯಲ್ಲಿ ತೊಡಗಿಸಿಕೊಂಡವರಿಗೆ ಭಾಷೆಯ ಬಳಕೆ, ಸಂವಹನ ಕೌಶಲ, ಆತ್ಮವಿಶ್ವಾಸ, ಸಮಯಪ್ರಜ್ಞೆ, ತಾಳ್ಮೆ ಹಾಗೂ ತಂಡವಾಗಿ ಕಾರ್ಯನಿರ್ವಹಿಸುವ ಗುಣಗಳು ಬೆಳೆಯುತ್ತವೆ. ಅಭಿನಯ, ನಿರ್ದೇಶನ, ಬರವಣಿಗೆ, ರಂಗ ವಿನ್ಯಾಸ, ಸಂಗೀತ ಹಾಗೂ ತಾಂತ್ರಿಕ ವಿಭಾಗಗಳಲ್ಲಿ ಹಲವು ರೀತಿಯ ವೃತ್ತಿ ಅವಕಾಶಗಳೂ ಇವೆ. ರಂಗಭೂಮಿಯ ಅನುಭವವು ವ್ಯಕ್ತಿಯಲ್ಲಿ ಸೂಕ್ಷ್ಮ ಸಂವೇದನೆ, ಸಾಮಾಜಿಕ ಅರಿವು ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗುತ್ತದೆ ಎಂದರು.
‘ಕಲೆ ಮತ್ತು ಸಾಹಿತ್ಯ ಮಾನವೀಯ ಸಂಬಂಧಗಳನ್ನು ಬೆಸೆಯಲಿ’
‘ಗಿಣಿವಿಂಡು’ ಅಧ್ಯಕ್ಷ ಡಾ. ಬಿ.ಎಚ್. ಚಂದ್ರಶೇಖರ ಶೆಟ್ಟಿ ಮಾತನಾಡಿ, ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗವು ತನ್ನದೇ ಆದ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯವನ್ನು ಹೊಂದಿದ್ದು, ಅನೇಕ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ವಿದ್ಯಾರ್ಥಿಗಳಲ್ಲಿ ಮೂಡಿಬರುವ ಉತ್ತಮ ಚಿಂತನೆಗಳು ತರಗತಿ ಕೊಠಡಿಗಳಿಗೆ ಸೀಮಿತವಾಗದೆ ಸಮಾಜಕ್ಕೆ ತಲುಪಬೇಕು. ಕನ್ನಡ ಭಾಷೆ ಮತ್ತು ಸಾಹಿತ್ಯದ ಪ್ರಸರಣದ ಉದ್ದೇಶದಿಂದ ‘ಗಿಣಿವಿಂಡು’ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಚದುರಿಹೋಗಿರುವ ಪ್ರತಿಭೆಗಳನ್ನು ಒಂದೆಡೆ ಸೇರಿಸಿ, ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವ ಪ್ರಯತ್ನವನ್ನು ಸಂಸ್ಥೆ ಮಾಡುತ್ತಿದೆ ಎಂದು ಹೇಳಿದರು.
‘ಗಿಣಿವಿಂಡು’ ಪ್ರಧಾನ ಕಾರ್ಯದರ್ಶಿ ಡಾ. ನಾಗಪ್ಪ ಗೌಡ ಆರ್. ಹಾಗೂ ನಿವೃತ್ತ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ ಮೂಡುಬಿದಿರೆ ಘಟಕದ ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ ಸ್ವಾಗತಿಸಿದರು. ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಶಂಕರಮೂರ್ತಿ ವಂದಿಸಿದರು. ಬಿ.ಎಡ್. ವಿದ್ಯಾರ್ಥಿನಿ ಚಂದನಾ ಕಾರ್ಯಕ್ರಮ ನಿರೂಪಿಸಿದರು.

0 Comments