ದಿನಾಂಕ 21-06-2026, ಭಾನುವಾರದಂದು ಜೈ ತುಳುನಾಡು ಬೆಂಗಳೂರು (ರಿ.) ಕೂಟದ ಆಶ್ರಯದಲ್ಲಿ ಹಾಗೂ ಬಂಟರ ಸಂಘ ಬೆಂಗಳೂರು (ರಿ.) ಇದರ ಸಹಯೋಗದೊಂದಿಗೆ, ಬೆಂಗಳೂರಿನ ವಿಜಯನಗರದಲ್ಲಿರುವ ಬಂಟರ ಸಂಘ ಆರ್.ಎನ್.ಎಸ್. ವಿದ್ಯಾನಿಕೇತನ ಶಾಲೆಯಲ್ಲಿ **"ಬಲೆ ತುಳುಲಿಪಿ ಕಲ್ಪುಗ"** ಮತ್ತು **"ಬಲೆ ತುಳು ಪಾತೆರ್ಗ"** ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಬಂಟರ ಸಂಘ ಬೆಂಗಳೂರುದ ಮಾಜಿ ಗೌರವ ಕಾರ್ಯದರ್ಶಿ ಶ್ರೀ ವಿಜಯ್ ಜೆ. ಶೆಟ್ಟಿ ಹಾಗೂ ವರ್ನಿಲ್ ಪ್ರಿಂಟರ್ಸ್‌ನ ಮಾಲಕಿ ಪುಷ್ಪಾ ರಾಕೇಶ್ ಬಂಗೇರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಬಂಟರ ಸಂಘದ ಡಾ. ದೀಪಕ್ ಶೆಟ್ಟಿ ಬಾರ್ಕೂರು ಅವರು ತುಳು ಲಿಪಿ ತರಗತಿಗಳನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೈ ತುಳುನಾಡು ಬೆಂಗಳೂರು ಕೂಟದ ಅಧ್ಯಕ್ಷ ವಿನಯ್ ಮಣಿಯಾನ ವಹಿಸಿದರು. ಗೌರವ ಸಲಹೆಗಾರ ನಿಧೀಶ್ ಶೆಟ್ಟಿ ಹಾಗೂ ತುಳು ಲಿಪಿ ಸಂಯೋಜಕ ಅನುದೀಪ್ ಶೆಟ್ಟಿ ಉಪಸ್ಥಿತರಿದ್ದರು.
ಉದ್ಘಾಟನಾ ಭಾಷಣದಲ್ಲಿ ಡಾ. ದೀಪಕ್ ಶೆಟ್ಟಿ ಅವರು, “ಜೈ ತುಳುನಾಡು ಬೆಂಗಳೂರು ಕೂಟ ಆರಂಭವಾದ ದಿನದಿಂದಲೂ ಬೆಂಗಳೂರು ನಗರದಲ್ಲಿ ನಡೆಸುತ್ತಿರುವ ಕಾರ್ಯಗಳು ಶ್ಲಾಘನೀಯವಾಗಿವೆ. ನಮ್ಮ ತುಳುನಾಡಿನ ಭಾಷೆ, ಸಂಸ್ಕೃತಿಯ ಜೊತೆಗೆ ಐತಿಹಾಸಿಕ ತುಳು ಲಿಪಿಯ ಅರಿವನ್ನೂ ಜನರಿಗೆ ತಲುಪಿಸಬೇಕು. ಈ ಕಾರ್ಯಕ್ಕೆ ನಾನು ಸದಾ ಬೆಂಬಲ ನೀಡುತ್ತೇನೆ” ಎಂದು ಹೇಳಿದರು.
ಮುಖ್ಯ ಅತಿಥಿ ವಿಜಯ್ ಜೆ. ಶೆಟ್ಟಿ ಅವರು, “ಕೋಲ, ಕಂಬಳ, ನಾಗಾರಾಧನೆ ಮುಂತಾದ ತುಳು ಸಂಸ್ಕೃತಿಯ ಪರಂಪರೆಗಳನ್ನು ಉಳಿಸಬೇಕಾದರೆ ತುಳು ಭಾಷೆ ಹಾಗೂ ತುಳು ಲಿಪಿಯ ಅರಿವು ಅಗತ್ಯವಾಗಿದೆ” ಎಂದು ತಿಳಿಸಿದರು.
ಅಧ್ಯಕ್ಷ ವಿನಯ್ ಮಣಿಯಾನ ಹಾಗೂ ಗೌರವ ಸಲಹೆಗಾರ ನಿಧೀಶ್ ಶೆಟ್ಟಿ ಅವರು ತುಳು ಲಿಪಿ ತರಗತಿಗಳ ಉದ್ದೇಶ ಹಾಗೂ ಕೂಟದ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು.
ತುಳು ಭಾಷಾ ಸಮಿತಿಯ ಬನಶ್ರೀ ಅವಿನಾಶ್ ಅವರು ಜೈ ತುಳುನಾಡು ಕೂಟದ ತುಳು ಲಿಪಿಯ ಇತಿಹಾಸದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಮ್ಮುಖದಲ್ಲಿ ಜೈ ತುಳುನಾಡು ಬೆಂಗಳೂರು ವತಿಯಿಂದ ಪ್ರಕಟಿಸಲಾದ ಎರಡನೇ ಪುಸ್ತಕ **"ತುಳು ಬರವುದ ಐಸಿರ"** ಬಿಡುಗಡೆಯಾಯಿತು.
ಪುಟ್ಟ ಮಕ್ಕಳಿಂದ ತಾಳೆ ಎಲೆಯ ಮೇಲೆ ತುಳು ಲಿಪಿಯಲ್ಲಿ ಬರೆಯಿಸಿ ಹಾಗೂ ಹಾಜರಿದ್ದವರಿಂದ ತಮ್ಮ ಹೆಸರನ್ನು ತುಳು ಲಿಪಿಯಲ್ಲಿ ಬರೆಯಿಸುವ ಮೂಲಕ ಲಿಪಿ ತರಗತಿಗಳಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಬಂಟರ ಸಂಘ ಬೆಂಗಳೂರು ಅಧ್ಯಕ್ಷ ಸಿ.ಎ. ಅಶೋಕ್ ಶೆಟ್ಟಿ ಅವರು ಭಾಷೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಈ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿ, ತಾವೂ ಕೂಡ ತುಳು ಲಿಪಿಯನ್ನು ಕಲಿತು ಇತರರಿಗೆ ಮಾದರಿಯಾಗುವುದಾಗಿ ತಿಳಿಸಿದರು. ಕೇಂದ್ರ ತುಳು ಲಿಪಿ ಸಮಿತಿಯ ಉಸ್ತುವಾರಿ ಧನಂಜಯ ಆಚಾರ್ಯ ಅವರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ತುಳು ಲಿಪಿಯ ಶಿಕ್ಷಕರಾಗಿ ರಕ್ಷಾ ಕುಲಾಲ್, ತೃಪ್ತಿ ಶೆಟ್ಟಿ, ಶಿವಾನಿ ಪೂಜಾರಿ, ಧನರಾಜ್ ಕುಲಾಲ್, ಶುಭಕರ ನಾಯ್ಕ್ ಹಾಗೂ ಅನುದೀಪ್ ಶೆಟ್ಟಿ ಕಾರ್ಯನಿರ್ವಹಿಸಲಿದ್ದಾರೆ. ತುಳು ಭಾಷಾ ಶಿಕ್ಷಕರಾಗಿ ಬನಶ್ರೀ ಅವಿನಾಶ್, ಗೀತಾ ಜಯಪ್ರಸಾದ್, ಅಶ್ವಿನಿ ಗಟ್ಟಿ ಹಾಗೂ ಪ್ರಶಾಂತ್ ಎಸ್.ಪಿ. ಭಾಗವಹಿಸಿದರು.
ಜೈ ತುಳುನಾಡು ಬೆಂಗಳೂರು ಅಧ್ಯಕ್ಷ ಶರತ್ ಕೊಡವೂರು ಅವರು ಎರಡನೇ ಆವೃತ್ತಿಯಾಗಿ ಪ್ರಕಟವಾದ **"ತುಳು ಬರವುದ ಐಸಿರ"** ಪುಸ್ತಕದ ಕುರಿತು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಸಂಘಟನಾ ಕಾರ್ಯದರ್ಶಿ ಗುರು ದೇವಾಡಿಗ, ಜಂಟಿ ಸಂಘಟನಾ ಕಾರ್ಯದರ್ಶಿ ನಿತೇಶ್ ಬಂಗೇರ, ಸಂಸ್ಥಾಪಕ ಸದಸ್ಯ ಯತೀಶ್ ಮುಂಡೋಡಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಪ್ರಶಾಂತ್ ಎಂ., ಸುದರ್ಶನ ಆಚಾರ್ಯ, ಪ್ರಿಯಾ ಯತೀಶ್, ಧವಳ ಆಚಾರ್ಯ, ವಿಜಿ ಕಾಪಿಕಾಡ್, ಜಿತೇಶ್ ಕುಲಾಲ್ ತೋಕೂರು, ಶಶಾಂಕ್ ಆಚಾರ್ಯ ಹಾಗೂ ಜೈ ತುಳುನಾಡು ಬೆಂಗಳೂರು ಸಾಹಿತ್ಯ ವಿಭಾಗದ ಸಂಯೋಜಕ ಜಯಪ್ರಸಾದ್ ಕುಲಾಲ್ ಮತ್ತು ಸಹ-ಸಂಯೋಜಕಿ ನಲಿನಿ ಕುಲಾಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಾಸ್ತಾವಿಕ ಭಾಷಣವನ್ನು ಪ್ರದೀಪ್ ಶೆಟ್ಟಿ ನೆರವೇರಿಸಿದರು. ಕಾರ್ಯಕ್ರಮವನ್ನು ಅರ್ಚನಾ ರೈ ನಿರೂಪಿಸಿದರು. ಮೇಘನಾ ರಕ್ಷಿತ್ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದ ಸಮನ್ವಯವನ್ನು ಅಕ್ಷಯ್ ಆಚಾರ್ಯ ವಹಿಸಿದರು.


0 Comments