ಆರೋಗ್ಯ ಸಚಿವರು..?
ಮೂಡುಬಿದಿರೆ ತಾಲೂಕಿನ ಶಿರ್ತಾಡಿಯಲ್ಲಿ ಸುಸಜ್ಜಿತವಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಯಂ ಡಾಕ್ಟ್ರು ಇಲ್ಲದಿರುವುದರಿಂದ ಅನಾರೋಗ್ಯ ಪೀಡಿತರು ತೊಂದರೆಯನ್ನು ಅನುಭವಿಸುತ್ತಿದ್ದಾರೆ.
ಸುಮಾರು ಹನ್ನೆರಡು ಗ್ರಾಮಗಳಿಗೆ ಸಂಬಂಧಪಟ್ಟಿರುವ ಈ ಶಿರ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಸುಪಾಸಿನ ಅನಾರೋಗ್ಯ ಪೀಡಿತರು ತುತು೯ ಚಿಕಿತ್ಸೆಗಾಗಿ, ಜ್ವರ, ಬಿಪಿ, ಶುಗರ್, ಗಭಿ೯ಣಿಯರು ತಪಾಸಣೆಗೆ ಮತ್ತು ಗಾಯಗಳಾದರೆ ಡ್ರೆಸ್ಸಿಂಗ್ ಮಾಡಲು ಬಡವರು ಇಲ್ಲಿಗೆ ಬರಬೇಕಾಗುತ್ತದೆ ಆದರೆ ಇಲ್ಲಿ ತಪಾಸಣೆ ನಡೆಸಿ ಚಿಕಿತ್ಸೆ ನೀಡಲು ವೈದ್ಯರೇ ಇಲ್ಲದಿರುವುದರಿಂದ ಶಿತಾ೯ಡಿಯಿಂದ 12 ಕಿ. ಮೀ ದೂರದಲ್ಲಿರುವ ಮೂಡುಬಿದಿರೆಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬರಬೇಕಾಗಿದೆ.
ಈ ಮೊದಲು ಇಲ್ಲಿ ಹಲವಾರು ವೈದ್ಯರು ಇಲ್ಲಿ ಸೇವೆ ನೀಡಿದ್ದು ಇಂದಿಗೂ ಜನರಲ್ಲಿ ನೆನಪಿಡುವಂತಹ ಸಾರ್ಥಕ ಸೇವೆಗೈದಿದ್ದಾರೆ.ಡಾ.ಕಾಮತ್, ಬಿ.ಬಿ.ಶೆಣೈ, ಡಾ.ಪ್ರಕಾಶ್, ಡಾ.ನಸೀಬಾ, ಡಾ.ಹಾದಿಯಾ ಹೀಗೆ ಹಲವು ಮಂದಿ ವೈದ್ಯರು, ಸಿಸ್ಟರ್ಸ್ ಇದ್ದರು. ಕಂಪೌಂಡರ್ ಬಾಬಣ್ಣ, ಪಿ.ಕೆ.ರಾಜಣ್ಣ, ರೋಗಿಗಳಿಗೆ ಅಡುಗೆ ಮಾಡಿ ಕೊಡುತ್ತಿದ್ದ ಶಿರ್ತಾಡಿಯ ಗೀತ ಅವರ ಹೆಸರೂ ಶಾಶ್ವತವಾಗಿ ನೆನಪಿನಲ್ಲಿರುವವರು.
ಇಲ್ಲಿ ನಾಲ್ಕೈದು ಬೆಡ್ ಗಳ ವ್ಯವಸ್ಥೆ ಇದ್ದು ಬೇರೆ ಬೇರೆ ಕಾಯಿಲೆಯ ರೋಗಿಗಳು ಸಹಿತ ಹೆರಿಗೆಯಾಗುವವರು ಇಲ್ಲೇ ದಾಖಲಾಗುತ್ತಿದ್ದರು.ಸಾಕಷ್ಟು ಸಂಖ್ಯೆಯ ಸಿಬ್ಬಂದಿಗಳೂ ಇದ್ದುದರಿಂದ ಈ ಆಸ್ಪತ್ರೆ 24×7 ಸೇವೆಯ ಬಡವರ ಆಸ್ಪತ್ರೆಯಾಗಿತ್ತು.
ಶಿರ್ತಾಡಿ, ವಾಲ್ಪಾಡಿ, ಅಳಿಯೂರು, ದರೆಗುಡ್ಡೆ, ಮಾಂಟ್ರಾಡಿ, ಬೋರುಗುಡ್ಡೆ, ಪೆರಾಡಿ, ಸಾವ್ಯ, ಕಾಶಿಪಟ್ಣ, ಪಡುಕೊಣಾಜೆ,ಮೂಡುಕೊಣಾಜೆ, ಮಕ್ಕಿ, ಮರೋಡಿ, ದಡ್ಡಾಲ್ಪಲ್ಕೆ, ಆನೆಗುಡ್ಡೆ ಹೀಗೆ ಇನ್ನೂ ಕೆಲವು ಊರುಗಳ ಬಡರೋಗಿಗಳಿಗಿದ್ದದ್ದು ಇದೇ ಸರಕಾರಿ ಆಸ್ಪತ್ರೆ. ಅದೆಷ್ಟೋ ಜನರ ಪಾಲಿನ ಆಶಾಕಿರಣವಾಗಿದ್ದ ಆಸ್ಪತ್ರೆ ಇದೀಗ ಸಿಬಂದಿಗಳ ಕೊರತೆಯಿಂದ ಬಳಲುತ್ತಿದೆ.
ಪರ್ಮನೆಂಟಾದ ವೈದ್ಯರಿಲ್ಲ, ಒಬ್ಬರೇ ಸ್ಟಾಫ್ ನರ್ಸ್ ಇರೋದು. ಸಿಬ್ಬಂದಿಗಳಿದ್ದರೂ ಅವರಿಗೆ ಫೀಲ್ಡ್ ವರ್ಕ್ ಜವಾಬ್ದಾರಿ. ಮದ್ದಿಗೆಂದು ಬರುವ ರೋಗಿಗಳನ್ನು ಚೆನ್ನಾಗಿ ವಿಚಾರಿಸುತ್ತಾರೆ- ಮದ್ದು ಕೊಡಲು ವೈದ್ಯರನ್ನೇ ಸಂಪರ್ಕಿಸಬೇಕಾಗುತ್ತದೆ.
ಇಲ್ಲಿ 24× 7 ಸೇವೆ ಬೇಕು, ಸುತ್ತಮುತ್ತಲಿನ ಜನರಿಗೆ ಇದು ಕೇಂದ್ರಾಸ್ಪತ್ರೆಯಾಗಬೇಕು, ಖಾಯಂ ವೈದ್ಯರು ಬೇಕು ಅಂತ ಹೋರಾಟಗಾರ ಸುದತ್ತ ಜೈನ್ ಶಿರ್ತಾಡಿ ಅವರು ಕೆಲವು ದಿನ ಉಪವಾಸ ಸತ್ಯಾಗ್ರಹ ಮಾಡಿದ್ದರು. ಅಂದಿನ ಜನಪ್ರತಿನಿಧಿಗಳು ,ಇಲಾಖೆಯ ಪ್ರಮುಖರು ಬಂದು ” ಮುಂದಕ್ಕೆ ಮಾಡೋಣ ” ಅಂತ ಉಪವಾಸವನ್ನು ಹಿಂತೆಗೆಸಿದ್ದರು.
ಆದರೆ ಈಗ ಮತ್ತೆ ಅದೇ ಅವಸ್ಥೆ. ಒಬ್ಬರೇ ವೈದ್ಯರು. ಬೆಳುವಾಯಿಯ ವೈದ್ಯರಾಗಿರುವ ಡಾ.ಭರತ್ ಅವರಿಗೆ ಈ ಆಸ್ಪತ್ರೆಯ ಚಾರ್ಜ್.ಅವರಿಗೆ ಇನ್ನೂ ಕೆಲವು ಕಡೆಯ ಚಾರ್ಜ್ ಇದೆ. ಹಾಗಾಗಿ ವಾರದಲ್ಲಿ ಒಂದು ದಿನ ಬಂದು ಹೋಗುತ್ತಾರೆ. ಹನ್ನೆರಡಕ್ಕೂ ಅಧಿಕ ಗ್ರಾಮಗಳನ್ನು ಹೊಂದಿರುವ ಈ ಆಸ್ಪತ್ರೆಗೆ
ಇಲ್ಲಿ ದಿನಂಪ್ರತಿ ದೊಡ್ಡ ಸಂಖ್ಯೆಯಲ್ಲಿ ರೋಗಿಗಳು ಬರುತ್ತಾರೆ. ಮಧ್ಯಾಹ್ನದ ವೇಳೆಗೇ ಕೆಲವೊಮ್ಮೆ ರೋಗಿಗಳ ಸಂಖ್ಯೆ ತೊಂಭತ್ತು ದಾಟುತ್ತದೆ. ಆದರೆ ಮಧ್ಯಾಹ್ನದ ಮೇಲೆ ಬಾಗಿಲು ಮುಚ್ಚುತ್ತದೆ.
ವೈದ್ಯರಿಲ್ಲ, ಸಿಬ್ಬಂದಿಗಳಿಲ್ಲ ಎನ್ನುವ ಸಮಸ್ಯೆಯನ್ನು ಎದುರಿಸುತ್ತಿರುವ ಶಿರ್ತಾಡಿಯ ಆಸ್ಪತ್ರೆ ಕಡೆಗೆ ಈಗ ಆರೋಗ್ಯ ಸಚಿವರಾಗಿರುವ ಯು.ಟಿ.ಖಾದರ್ ಗಮನ ಹರಿಸಿ ಖಾಯಂ ವೈದ್ಯರು, ಸಿಬ್ಬಂದಿಗಳನ್ನು ನೇಮಕಗೊಳಿಸಿ ಮತ್ತೆ ಹಿಂದಿನಂತೆ 24*7 ಆಸ್ಪತ್ರೆಯನ್ನಾಗಿ ಮಾಡುವ ಅವಶ್ಯಕತೆಯಿದೆ.
--------------------------
ಸಿಬಂದಿಗಳ ಕೊರತೆಯಿದ್ದರೂ ಈ ಕೇಂದ್ರಕ್ಕೆ "ಕುಟುಂಬ ಯೋಜನೆ" ಯ ಅಧಿಕಾರಿಯಾಗಿರುವ ದೀಪ ಅವರು ಮಂಗಳವಾರ ಭೇಟಿ ನೀಡಿದಾಗ ಆಟೋ ಚಾಲಕರು " ನಾವು ರೋಗಿಗಳನ್ನು ಇಲ್ಲಿಗೆ ಕರೆದುಕೊಂಡು ಬರುವಾಗ ಇಲ್ಲಿ ವೈದ್ಯರು ಇಲ್ಲದಿರುವುದರಿಂದ ಸಮಸ್ಯೆಯಾಗುತ್ತದೆ "ಇಲ್ಲಿಗೆ ಖಾಯಂ ವೈದ್ಯರ ಅವಶ್ಯಕತೆಯಿದೆ ಎಂದು ಅವರಲ್ಲಿ ತಿಳಿಸಿದರು.
ಸಿಬಂದಿಗಳ ಕೊರತೆಯಿರುವುದು ಗಮನಕ್ಕೆ ಬಂದಿದೆ. ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಈಗಾಗಲೇ ವೈದ್ಯರುಗಳ ನೇಮಕಕ್ಕೆ ಸಂದಶ೯ನ ನಡೆದಿದೆ ಎಂದು ತಿಳಿಸಿದ್ದಾರೆ.
--------------------------


0 Comments