ಮೂಡುಬಿದಿರೆ : ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿಸಿ ಸಿಪಿಐಎಂ ಮೂಡುಬಿದಿರೆ ವಲಯ ಸಮಿತಿಯ ವತಿಯಿಂದ ಭಾನುವಾರ ಮೂಡುಬಿದಿರೆ ಸಮುದಾಯ ಆಸ್ಪತ್ರೆ ಮುಂಭಾಗ "ಮಾನವ ಸರಪಳಿ" ನಡೆಯಿತು.
ಮೂಡಬಿದಿರೆ ಸಮುದಾಯ ಆಸ್ಪತ್ರೆಯನ್ನು ಖಾಸಗಿ ಮೆಡಿಕಲ್ ಕಾಲೇಜಿಗೆ ಹಸ್ತಾಂತರಿಸುವ ಆದೇಶ ರದ್ದುಗೊಳಿಸಬೇಕು, ಪೂರ್ಣಪ್ರಮಾಣದ ತಾಲೂಕು ಆಸ್ಪತ್ರೆ ಮಂಜೂರು ಮಾಡಬೇಕು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದಯದ ಆಸ್ಪತ್ರೆಯ ಘಟಕ ಸ್ಥಾಪಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ಪ್ರತಿಭಟನೆ ನಡೆಸಿದರು.
ಮಾನವ ಸರಪಳಿಯ ನಂತರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ವಸಂತ ಆಚಾರಿ ಅವರು ಖಾಸಗಿ ಆಸ್ಪತ್ರೆಗಳ ದುಬಾರಿ ಚಿಕಿತ್ಸೆ ಹಾಗೂ ವಿಪರೀತ ದರಗಳು ಕಡಿಮೆ ದುಡಿಯುವ ಜನತೆಯ ಕೈಗೆ ಎಟುಕದಂತಾಗಿದೆ. ಇಂತಹ ಸ್ಥಿತಿಯಲ್ಲಿ ಬಡವರು, ಕಾರ್ಮಿಕರು, ಶ್ರಮಜೀವಿಗಳಿಗೆ ಸರಕಾರಿ ಆಸ್ಪತ್ರೆಗಳೇ ಆಧಾರ. ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸುವ ಮೂಲಕ ಆರೋಗ್ಯದ ಹಕ್ಕನ್ನು ಪ್ರತಿಯೊಬ್ಬ ನಾಗರಿಕನಿಗೂ ಖಾತರಿ ಪಡಿಸಲು ಸರಕಾರಗಳು ಮುಂದಾಗಬೇಕಿತ್ತು. ವಿಷಾದದ ಸಂಗತಿ ಅಂದರೆ, ಸರಕಾರ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದೆ. ಸರಕಾರಿ ಆಸ್ಪತ್ರೆಗಳ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ. ಜಿಲ್ಲೆಯ ಸರಕಾರಿ ಆಸ್ಪತ್ರೆಗಳನ್ನು ದುರ್ಬಲಗೊಳಿಸುವ, ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವ ಜನವಿರೋಧಿ ಧೋರಣೆಗೆ ಜೋತು ಬಿದ್ದಿದೆ. ಈಗಾಗಲೆ ಕೊಬ್ಬಿರುವ ಖಾಸಗಿ ವೈದ್ಯಕೀಯ ಲಾಭಿಗಳನ್ನು ಇದು ಮತ್ತಷ್ಟು ಬಲಗೊಳಿಸುತ್ತದೆ. ಸರಕಾರಿ ಆಸ್ಪತ್ರೆಗಳ ಖಾಸಗೀಕರಣದ ಈ ಆದೇಶವನ್ನು ಆರೋಗ್ಯ ಸಚಿವ ಯು ಟಿ ಖಾದರ್ ಅವರು ಕೈ ಬಿಡಬೇಕು.ಇಲ್ಲದಿದ್ದಲ್ಲಿ ಹೋರಾಟ ತೀವ್ರ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಸಿದರು.
ಸಿಪಿಐಎಂ ಹಿರಿಯ ನಾಯಕ ಯಾದವ ಶೆಟ್ಟಿ ಮಾತನಾಡಿ, ಈಗಾಗಲೆ ಎರಡು ಸುತ್ತಿನ ಹೋರಾಟ ನಡೆದಿದೆ. ಮೂಡುಬಿದಿರೆಗೆ ಪೂರ್ಣ ಪ್ರಮಾಣದ ತಾಲೂಕು ಆಸ್ಪತ್ರೆ ನಿಯಮ ಬದ್ದ ಹಕ್ಕು. ತಾಲೂಕು ಆಗಿ ಆರೇಳು ವರ್ಷ ದಾಟಿದರೂ ತಾಲೂಕು ಆಸ್ಪತ್ರೆ ನಿರ್ಮಾಣಗೊಳ್ಳದಿರುವುದು ತಾಲೂಕಿನ ಜನತೆಗೆ ನಿರಾಸೆ ತಂದಿದೆ. ಶಾಸಕರು ಈ ಕುರಿತು ಕಾರ್ಯಪ್ರವೃತ್ತರಾಗಬೇಕು, ಮತ್ತಷ್ಟು ಕಾಯುವ ತಾಳ್ಮೆ ಜನತೆಗೆ ಇಲ್ಲ ಎಂದು ಹೇಳಿದರು.
ಸಿಪಿಐಎಂ ತಾಲೂಕು ಮುಖಂಡರಾದ ರಾಧಾ ಪುತ್ತಿಗೆ, ಲಕ್ಷ್ಮಿ, ಗಿರಿಜ, ಶಂಕರ ವಾಲ್ಪಾಡಿ ಮತ್ತಿತರರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.


0 Comments